Kanwar YatraSupreme Court, Kanwar Yatra, Uttar Pradesh  
ಸುದ್ದಿಗಳು

ಸುಪ್ರೀಂಕೋರ್ಟ್ ಮಧ್ಯಪ್ರವೇಶದ ಹಿನ್ನೆಲೆಯಲ್ಲಿ ಕಾವಡಿ ಯಾತ್ರೆ ರದ್ದುಪಡಿಸಿದ ಉತ್ತರಪ್ರದೇಶ ಸರ್ಕಾರ

ಯಾತ್ರೆ ನಡೆಸಲು ಉತ್ತರಪ್ರದೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ ತಿಳಿಸಿದ್ದು ಸರ್ಕಾರ ಅದನ್ನು ರದ್ದುಗೊಳಿಸದಿದ್ದರೆ ನ್ಯಾಯಾಲಯ ಈ ನಿಟ್ಟಿನಲ್ಲಿ ಆದೇಶ ನೀಡುತ್ತದೆ ಎಂದು ತಿಳಿಸಿತ್ತು.

Bar & Bench

ಧಾರ್ಮಿಕ ಭಾವನೆಗಳಿಗಿಂತಲೂ ಜನರ ಆರೋಗ್ಯಕ್ಕೆ ಒತ್ತು ನೀಡುವಂತೆ ಸುಪ್ರೀಂಕೋರ್ಟ್‌ ಶುಕ್ರವಾರ ಉತ್ತರಪ್ರದೇಶ ಸರ್ಕಾರಕ್ಕೆ ಸೂಚಿಸಿದ ನಂತರ ಕೋವಿಡ್‌ ಹಿನ್ನೆಲೆಯಲ್ಲಿ ಈ ವರ್ಷ ರಾಜ್ಯದಲ್ಲಿ ಕಾವಡಿ ಯಾತ್ರೆ ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಉತ್ತರಪ್ರದೇಶ ಮುಖ್ಯಮಂತ್ರಿ ಕಛೇರಿಯ ಮೂಲವೊಂದು ಶನಿವಾರ ತಡರಾತ್ರಿ 'ಬಾರ್ & ಬೆಂಚ್‌'ಗೆ ಈ ಬೆಳವಣಿಗೆಯನ್ನು ದೃಢಪಡಿಸಿದೆ.

ಯಾತ್ರೆ ನಡೆಸಲು ಉತ್ತರಪ್ರದೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ತಿಳಿಸಿತ್ತು. ಸರ್ಕಾರ ಅದನ್ನು ರದ್ದುಗೊಳಿಸದಿದ್ದರೆ ನ್ಯಾಯಾಲಯ ಈ ನಿಟ್ಟಿನಲ್ಲಿ ಆದೇಶ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು. ಶೇ 100ರಷ್ಟು ಯಾತ್ರೆ ನಡೆಸುವ ನಿರ್ಧಾರದೊಂದಿಗೆ ಮುಂದುವರೆಯುವಂತಿಲ್ಲ ಎಂದು ಅದು ಸ್ಪಷ್ಟಪಡಿಸಿತ್ತು.

ಉತ್ತರಾಖಂಡ ಸರ್ಕಾರವು ಕಾವಡಿ ಯಾತ್ರೆಗೆ ನಿರ್ಬಂಧ ವಿಧಿಸಿತ್ತು. ಆದರೆ, ಉತ್ತರ ಪ್ರದೇಶ ಸರ್ಕಾರವು ಕಾವಡಿ ಯಾತ್ರೆ ನಡೆಸಲು ಮುಂದಾಗಿದ್ದರಿಂದ ನ್ಯಾಯಾಲಯ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು.

“ಇದು ನಮ್ಮೆಲ್ಲರಿಗೂ ಸಂಬಂಧಿಸಿದ್ದು ಎಂದು ಮೇಲ್ನೋಟಕ್ಕೆ ಅನಿಸಿದ್ದು, ಮೂಲಭೂತವಾಗಿ ಒದಗಿಸಲಾದ ಜೀವಿಸುವ ಹಕ್ಕಿನ ಪ್ರಮುಖ ಭಾಗವಾಗಿದೆ. ಭಾರತೀಯರ ಆರೋಗ್ಯ ಮತ್ತು ಬದುಕುವ ಹಕ್ಕು ಅತಿ ಮುಖ್ಯವಾಗಿದ್ದು, ಧಾರ್ಮಿಕ ವಿಚಾರ ಸೇರಿದಂತೆ ಉಳಿದೆಲ್ಲವೂ ಮೂಲಭೂತ ಹಕ್ಕಿನ ವ್ಯಾಪ್ತಿಗೆ ಒಳಪಟ್ಟಿದೆ” ಎಂದು ಶುಕ್ರವಾರ ನ್ಯಾಯಾಲಯ ತಿಳಿಸಿತ್ತು.

ಆದರೆ ಯಾತ್ರೆಯನ್ನು ಸಂಪೂರ್ಣ ನಿಷೇಧಿಸುವುದು ಸೂಕ್ತವಲ್ಲ ಎಂದು ಉತ್ತರಪ್ರದೇಶ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು. ಇತ್ತ ನ್ಯಾಯಾಲಯ, ಸರ್ಕಾರವೇ ತನ್ನ ನಿರ್ಧಾರ ಪುನರ್‌ಪರಿಶೀಲಿಸಬೇಕು ಎಂದು ಹೇಳಿತ್ತು. ಶುಕ್ರವಾರ ಯಾವುದೇ ನಿರ್ದೇಶನಗಳನ್ನು ನೀಡದ ನ್ಯಾಯಾಲಯ ಸೋಮವಾರದವರೆಗೆ ಸಮಸ್ಯೆಯನ್ನು ಪರಿಶೀಲಿಸಿ ಬೇರೆ ಅಫಿಡವಿಟ್‌ ಸಲ್ಲಿಸಲು ಅವಕಾಶ ನೀಡಿ ಅಂದಿಗೆ ಪ್ರಕರಣ ಮುಂದೂಡಿತ್ತು.

“ಭೌತಿಕವಾಗಿ ಯಾತ್ರೆ ನಡೆಸುವ ವಿಚಾರ ಪರಿಗಣಿಸಲು ನಿಮಗೆ ನಾವು ಮತ್ತೊಂದು ಅವಕಾಶ ಕಲ್ಪಿಸುತ್ತೇವೆ. ಇಲ್ಲವೇ ನಾವು ಆದೇಶ ಹೊರಡಿಸುತ್ತೇವೆ. ನಾವೆಲ್ಲರೂ ಭಾರತೀಯರು ಮತ್ತು 21ನೇ ವಿಧಿ ನಮ್ಮೆಲ್ಲರಿಗೂ ಅನ್ವಯವಾಗುವುದರಿಂದ ಸ್ವಯಂಪ್ರೇರಿತವಾಗಿ (ವಿಚಾರಣೆ) ಕೈಗೆತ್ತಿಕೊಳ್ಳಲಾಗಿದೆ. ಯಾತ್ರೆ ನಡೆಸುವುದನ್ನು ನೀವು ಮರು ಪರಿಶೀಲಿಸಿ, ಇಲ್ಲವೇ ನಾವು ಆದೇಶ ನೀಡುತ್ತೇವೆ” ಎಂದು ನ್ಯಾ. ನಾರಿಮನ್‌ ತಿಳಿಸಿದ್ದರು.