“ದೇಶದ ಜನರ ಆರೋಗ್ಯದ ಹಕ್ಕು ಅತ್ಯಂತ ಮುಖ್ಯವಾಗಿದ್ದು, ಧಾರ್ಮಿಕ ಭಾವನೆ ಸೇರಿದಂತೆ ಉಳಿದೆಲ್ಲವೂ ಅದರ ಅಧೀನಕ್ಕೆ ಒಳಪಟ್ಟಿವೆ” ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ಹೇಳಿದೆ.
ಕೋವಿಡ್ ಸಾಂಕ್ರಾಮಿಕದ ನಡುವೆ ಉತ್ತರ ಪ್ರದೇಶ ಸರ್ಕಾರವು ಕಾವಡಿ ಯಾತ್ರೆ ನಡೆಸುವ ಸಂಬಂಧ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರೋಹಿಂಟನ್ ನಾರಿಮನ್ ಮತ್ತು ಬಿ ಆರ್ ಗವಾಯಿ ನೇತೃತ್ವದ ಪೀಠವು ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ.
ಉತ್ತರಾಖಂಡ ಸರ್ಕಾರವು ಕಾವಡಿ ಯಾತ್ರೆಗೆ ನಿರ್ಬಂಧ ವಿಧಿಸಿದೆ. ಆದರೆ, ಉತ್ತರ ಪ್ರದೇಶ ಸರ್ಕಾರವು ಕಾವಡಿ ಯಾತ್ರೆ ನಡೆಸಲು ಮುಂದಾಗಿರುವುದರಿಂದ ನ್ಯಾಯಾಲಯವು ಸ್ವಯಂಪ್ರೇರಿತ ಮನವಿ ದಾಖಲಿಸಿಕೊಂಡಿದೆ.
“ಇದು ನಮ್ಮೆಲ್ಲರಿಗೂ ಸಂಬಂಧಿಸಿದ್ದು ಎಂದು ಮೇಲ್ನೋಟಕ್ಕೆ ಅನಿಸಿದ್ದು, ಮೂಲಭೂತವಾದ ಜೀವಿಸುವ ಹಕ್ಕಿನ ಪ್ರಮುಖ ಭಾಗವಾಗಿದೆ. ಭಾರತೀಯರ ಆರೋಗ್ಯ ಮತ್ತು ಬದುಕುವ ಹಕ್ಕು ಅತಿ ಮುಖ್ಯವಾಗಿದ್ದು, ಧಾರ್ಮಿಕ ವಿಚಾರ ಸೇರಿದಂತೆ ಉಳಿದೆಲ್ಲವೂ ಮೂಲಭೂತ ಹಕ್ಕಿನ ಅಧೀನಕ್ಕೆ ಒಳಪಟ್ಟಿದೆ” ಎಂದು ನ್ಯಾಯಮೂರ್ತಿ ನಾರಿಮನ್ ಹೇಳಿದ್ದಾರೆ.
ಅಲ್ಲದೇ, ಕಾವಡಿ ಯಾತ್ರೆ ಮುಂದುವರಿಸಲು ಉತ್ತರ ಪ್ರದೇಶ ಸರ್ಕಾರಕ್ಕೆ ಅನುಮತಿಸಲಾಗದು ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. “ಉತ್ತರ ಪ್ರದೇಶ ಸರ್ಕಾರವು ಕಾವಡಿ ಯಾತ್ರೆಯನ್ನು ಶೇ. 100ರಷ್ಟು ಮುಂದುವರಿಸಲಾಗದು” ಎಂದಿರುವ ನ್ಯಾಯಾಲಯವು ಇಂದು ಯಾವುದೇ ಆದೇಶ ಹೊರಡಿಸಿಲ್ಲ. ಆದರೆ, ಹೆಚ್ಚಿನ ಪರಿಗಣನೆಗೆ ಪ್ರಕರಣವನ್ನು ಸೋಮವಾರಕ್ಕೆ ಪಟ್ಟಿ ಮಾಡಿದೆ.
ಈ ಮಧ್ಯೆ, “ಹರಿದ್ವಾರದಿಂದ ತಮ್ಮಿಷ್ಟದ ಶಿವನ ದೇವಸ್ಥಾನಗಳಿಗೆ ಗಂಗಾಜಲವನ್ನು ತರುವ ಕಾವಡಿ ಯಾತ್ರೆಯ ಭಕ್ತಾದಿಗಳ ಸಂಚಾರಕ್ಕೆ ಕೋವಿಡ್ ಹಿನ್ನೆಲೆಯಲ್ಲಿ ಅನುಮತಿ ನೀಡಬಾರದು. ಆದರೆ, ಟ್ಯಾಂಕರ್‌ಗಳ ಮೂಲಕ ನಿರ್ದಿಷ್ಟ ಸ್ಥಳಗಳಲ್ಲಿ ಗಂಗಾಜಲ ವಿತರಿಸಬೇಕು” ಎಂದು ಉತ್ತರ ಪ್ರದೇಶ ಸರ್ಕಾರ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ಎಸ್ ವೈದ್ಯನಾಥನ್ ಹೇಳಿದರು.
ಪ್ರಕರಣದ ಬಗ್ಗೆ ಪರಿಶೀಲಿಸಿ, ಹೆಚ್ಚುವರಿ ಅಫಿಡವಿಟ್ ಸಲ್ಲಿಸಲು ಉತ್ತರ ಪ್ರದೇಶ ಸರ್ಕಾರಕ್ಕೆ ಸೋಮವಾರದವರೆಗೆ ನ್ಯಾಯಾಲಯ ಕಾಲಾವಕಾಶ ನೀಡಿದೆ.
“ಭೌತಿಕವಾಗಿ ಯಾತ್ರೆ ನಡೆಸುವ ವಿಚಾರ ಪರಿಗಣಿಸಲು ನಿಮಗೆ ನಾವು ಮತ್ತೊಂದು ಅವಕಾಶ ಕಲ್ಪಿಸುತ್ತೇವೆ. ಇಲ್ಲವೇ ನಾವು ಆದೇಶ ಹೊರಡಿಸುತ್ತೇವೆ. ನಾವೆಲ್ಲರೂ ಭಾರತೀಯರು ಮತ್ತು 21ನೇ ವಿಧಿ ನಮ್ಮೆಲ್ಲರಿಗೂ ಅನ್ವಯವಾಗುವುದರಿಂದ ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಳ್ಳಲಾಗಿದೆ. ಯಾತ್ರೆ ನಡೆಸುವುದನ್ನು ನೀವು ಮರು ಪರಿಶೀಲಿಸಿ, ಇಲ್ಲವೇ ನಾವು ಆದೇಶ ನೀಡುತ್ತೇವೆ” ಎಂದು ನ್ಯಾ. ನಾರಿಮನ್ ಹೇಳಿದ್ದಾರೆ.
“ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ವರದಿಯೊಂದನ್ನು ನಾನು ಓದಿದೆ. ದೇಶದ ಜನರು ಸಂಪೂರ್ಣವಾಗಿ ಗಾಬರಿಗೊಂಡಿದ್ದಾರೆ. ಏನಾಗುತ್ತಿದೆ ಎಂದು ಅವರಾರಿಗೂ ತಿಳಿದಿಲ್ಲ. ಇದೆಲ್ಲದರ ನಡುವೆ ಪ್ರಧಾನ ಮಂತ್ರಿಯವರನ್ನು ಮೂರನೇ ಅಲೆಯು ದೇಶದಲ್ಲಿ ಅಪ್ಪಳಿಸುವ ಬಗ್ಗೆ ಪ್ರಶ್ನಿಸಿದಾಗ “ನಾವು ಒಂದಿನಿತೂ ರಾಜಿ ಮಾಡಿಕೊಳ್ಳಲಾಗದು ಎಂದಿದ್ದಾರೆ” ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡುವಾಗ ನ್ಯಾ. ನಾರಿಮನ್ ಹೇಳಿದ್ದಾರೆ.
“ಕೋವಿಡ್ ಮೂರನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ ಉತ್ತರಾಖಂಡ ಸರ್ಕಾರವು ಮಂಗಳವಾರ ಕಾವಡಿ ಯಾತ್ರೆ ರದ್ದುಗೊಳಿಸಿದೆ. ಆದರೆ, ದೇಶದ ಉತ್ತರ ಭಾಗದಲ್ಲಿ ಅಪಾರ ಸಂಖ್ಯೆಯಲ್ಲಿ ಯಾತ್ರಾರ್ಥಿಗಳ ಅಂತರರಾಜ್ಯ ಸಂಚಾರಕ್ಕೆ ಸಾಂಪ್ರದಾಯಿಕ ಕಾರ್ಯಕ್ರಮವು ಕಾರಣವಾಗಲಿದ್ದು ಉತ್ತರ ಪ್ರದೇಶ ಸರ್ಕಾರವು ಅನುಮತಿಸಿದೆ” ಎಂದು ಜುಲೈ 14ರ ಆದೇಶದಲ್ಲಿ ಪತ್ರಿಕೆಯ ವರದಿಯನ್ನು ನ್ಯಾಯಾಲಯ ಉಲ್ಲೇಖಿಸಿತ್ತು.
“ಸದರಿ ವರದಿಗೆ ಸಂಬಂಧಿಸಿದಂತೆ ಭಾರತ ಸರ್ಕಾರದ ಸಂಬಂಧಪಟ್ಟ ಕಾರ್ಯದರ್ಶಿ ಪ್ರತಿಕ್ರಿಯಿಸುವುದು ಅತಿಮುಖ್ಯವಾಗಿದೆ. ಜುಲೈ 25ರಿಂದ ಈ ಯಾತ್ರೆ ಆರಂಭವಾಗುವುದರಿಂದ ಈ ಪ್ರಕರಣಕ್ಕೆ ಅಗತ್ಯವಾದ ಅಲ್ಪಾವಧಿ ನಿಗದಿಪಡಿಸುವುದು ಅಗತ್ಯವಾಗಿದೆ” ಎಂದು ನ್ಯಾಯಾಲಯ ಹೇಳಿದೆ.