A1
ಸುದ್ದಿಗಳು

ಬುಲ್ಡೋಜರ್ ಕಾರ್ಯಾಚರಣೆ: ಇಂದು ಜಮೀಯತ್ ಉಲಮಾ-ಎ-ಹಿಂದ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್‌

ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿಕ್ರಮ್ ನಾಥ್ ಅವರಿರುವ ರಜಾಕಾಲೀನ ಪೀಠ ಅರ್ಜಿಯ ವಿಚಾರಣೆ ನಡೆಸಲಿದೆ.

Bar & Bench

ಪ್ರವಾದಿ ಮುಹಮ್ಮದ್‌ ಅವರನ್ನು ಟೀಕಿಸಿದ ಬಿಜೆಪಿ ವಕ್ತಾರರ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದವರ ಕಟ್ಟಡಗಳನ್ನು ಇತ್ತೀಚೆಗೆ ಉತ್ತರಪ್ರದೇಶದಲ್ಲಿಅಲ್ಲಿನ ಸರ್ಕಾರ ಅಕ್ರಮ ತೆರವು ಕಾರ್ಯಾಚರಣೆ ಅಡಿ ಧ್ವಂಸಗೊಳಿಸಿದ್ದನ್ನು ಪ್ರಶ್ನಿಸಿ ಜಮೀಯತ್‌ ಉಲಮಾ-ಎ-ಹಿಂದ್‌ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಇಂದು ವಿಚಾರಣೆ ನಡೆಸಲಿದೆ [ಜಮೀಯತ್ ಉಲಮಾ-ಎ-ಹಿಂದ್‌ ಮತ್ತು ಭಾರತ ಸರ್ಕಾರ ಮತ್ತಿತರರ ನಡುವಣ ಪ್ರಕರಣ].

ಸುಪ್ರೀಂ ಕೋರ್ಟ್‌ನಲ್ಲಿ ಜಹಂಗೀರ್‌ಪುರಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಈಗಾಗಲೇ ಬಾಕಿ ಉಳಿದಿರುವ ಪ್ರಕರಣದಲ್ಲಿ ವಕೀಲ ಕಬೀರ್ ದೀಕ್ಷಿತ್ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದೆ. ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ವಿರುದ್ಧ ಪ್ರತಿಭಟನೆ ನಡೆಸಿದ ಬಳಿಕ ಉತ್ತರಪ್ರದೇಶದಲ್ಲಿಈ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಮನವಿ ಆರೋಪಿಸಿದೆ. ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿಕ್ರಮ್ ನಾಥ್ ಅವರಿರುವ ರಜಾಕಾಲೀನ ಪೀಠ ಅರ್ಜಿಯ ವಿಚಾರಣೆ ನಡೆಸಲಿದೆ.

ಮನವಿಯ ಪ್ರಮುಖಾಂಶಗಳು

  • 1958ರ ಉತ್ತರ ಪ್ರದೇಶ (ಕಟ್ಟಡ ತೆರವು ನಿಯಂತ್ರಣ) ಕಾಯಿದೆಯ ಸೆಕ್ಷನ್ 10ರ ಪ್ರಕಾರ ಅಗತ್ಯ ನೋಟಿಸ್‌ ನೀಡಿ ಹಾಗೂ ಬಾಧಿತ ವ್ಯಕ್ತಿಗಳಿಗೆ ವಿಚಾರಣೆಗೆ ಅವಕಾಶ ನೀಡಿ ನಂತರ ತೆರವು ಕಾರ್ಯಾಚರಣೆ ಕೈಗೊಳ್ಳಬೇಕು.

  • ಉತ್ತರ ಪ್ರದೇಶ ನಗರ ಯೋಜನೆ ಮತ್ತು ಅಭಿವೃದ್ಧಿ ಕಾಯಿದೆ, 1973ರ ಸೆಕ್ಷನ್ 27ರ ಪ್ರಕಾರ ಕಟ್ಟಡ ಕೆಡವಲು ಮುಂದಾಗುವ ಮೊದಲು ಬಾಧಿತ ವ್ಯಕ್ತಿಯ ಅಹವಾಲನ್ನು ಆಲಿಸಬೇಕು. ತೆರವು ಕಾರ್ಯಾಚರಣೆಗೂ ಕನಿಷ್ಠ 15 ದಿನಗಳ ಮೊದಲು ನೋಟಿಸ್ ನೀಡಬೇಕು.

  • ಉತ್ತರ ಪ್ರದೇಶ ನಗರ ಯೋಜನೆ ಮತ್ತು ಅಭಿವೃದ್ಧಿ ಕಾಯಿದೆ ಪ್ರಕಾರ ಬಾಧಿತ ವ್ಯಕ್ತಿ ಸದರಿ ಆದೇಶದ 30 ದಿನಗಳ ಅವಧಿಯಲ್ಲಿ ಅಧ್ಯಕ್ಷರೆದುರು ತೆರವು ಕಾರ್ಯಾಚರಣೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅರ್ಹರಾಗಿರುತ್ತಾರೆ.

  • ಆದರೆ ಇತ್ತೀಚೆಗೆ ಕೈಗೊಂಡ ಕಾರ್ಯಾಚರಣೆಯಲ್ಲಿ ಈ ಯಾವುದೇ ಕಾನೂನು ಪಾಲಿಸಿಲ್ಲ.

  • ಕಟ್ಟಡ ತೆರವು ಕಾರ್ಯಾಚರಣೆ ಮಧ್ಯೆ ವಿವಿಧ ಜಿಲ್ಲೆಗಳಲ್ಲಿ ಆರಂಭಿಸಿರುವ ತೆರವು ಕಾರ್ಯಾಚರಣೆಯನ್ನು ಮುಂದುವರೆಸುವಂತೆ ಅಧಿಕಾರಿಗಳಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿಗಳು ನಿರ್ದೇಶನ ನೀಡಿರುವುದು ಗಮನಿಸಬೇಕಾದ ಸಂಗತಿ.