Uttar Pradesh Chief Minister Yogi Adityanath
Uttar Pradesh Chief Minister Yogi Adityanath TOI
ಸುದ್ದಿಗಳು

ಉತ್ತರ ಪ್ರದೇಶದಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾದ ಧಾರ್ಮಿಕ ಮತಾಂತರ ನಿಷೇಧ ಕಾನೂನಿನಲ್ಲಿ ಏನೇನಿದೆ?

Bar & Bench

ವಿವಾದಾತ್ಮಕ ಕಾನೂನು ಬಾಹಿರ ಮತಾಂತರ ಸುಗ್ರೀವಾಜ್ಞೆಗೆ ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್‌ ಪಟೇಲ್‌ ಅವರು ಶನಿವಾರ ಅಂಕಿತ ಹಾಕಿದ್ದಾರೆ. ಕಳೆದ ವಾರ ಉತ್ತರ ಪ್ರದೇಶ ಕಾನೂನು ಬಾಹಿರ ಧಾರ್ಮಿಕ ಮತಾಂತರ ನಿಷೇಧ ಸುಗ್ರೀವಾಜ್ಞೆ- 2020ಗೆ (ಉತ್ತರ ಪ್ರದೇಶ ವಿಧಿ ವಿರೋಧ್‌ ಧರ್ಮ ಸಂಪರಿವರ್ತನ್‌ ಪ್ರತಿಶೇಧ್‌ ಆಧ್ಯಾದೇಶ) ಸಚಿವ ಸಂಪುಟ ಒಪ್ಪಿಗೆ ನೀಡಿತ್ತು.

ಅಂತರ ಧರ್ಮೀಯ ವಿವಾಹಗಳ ಮೇಲೆ ಕಾಯಿದೆಯಿಂದ ಆಗಬಹುದಾದ ಪರಿಣಾಮಗಳ ಕುರಿತು ವ್ಯಾಪಕ ಚರ್ಚೆಯಾಗುತ್ತಿದೆ. ಸುಗ್ರೀವಾಜ್ಞೆಯು ಕೇವಲ ಅಂತರ ಧರ್ಮೀಯ ವಿವಾಹವಷ್ಟೇ ಅಲ್ಲದೇ ಅದು ಎಲ್ಲಾ ಧಾರ್ಮಿಕ ಮತಾಂತರಗಳನ್ನೂ ಒಳಗೊಳ್ಳಲಿದೆ. ಸುಗ್ರೀವಾಜ್ಞೆಯ ನಿಬಂಧನೆಗಳ ಕೆಲವು ಪ್ರಮುಖ ಅಂಶಗಳು ಹೀಗಿವೆ:

ಆಜ್ಞೆಯ ಅನ್ವಯ ಧರ್ಮ ಮತ್ತು ಪ್ರಲೋಭನೆಯ ವ್ಯಾಖ್ಯಾನ

ಭಾರತದಲ್ಲಿ ಅಥವಾ ದೇಶದ ಯಾವುದೇ ಭಾಗದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಯಾವುದೇ ಕಾನೂನು ಅಥವಾ ಪದ್ಧತಿಯಡಿ ವಿವರಿಸಲಾಗಿರುವ ಹಾಗೂ ದೇಶದಲ್ಲಿ ಆಚರಣೆಯಲ್ಲಿರುವ ಸಂಘಟಿತ ಪೂಜಾ ಮಾದರಿ, ನಂಬಿಕೆ, ಪೂಜೆ ಅಥವಾ ಜೀವನಶೈಲಿಯನ್ನು ಧರ್ಮ ಎಂದು ಸೆಕ್ಷನ್‌ 2(h)ನಲ್ಲಿ ವಿವರಿಸಲಾಗಿದೆ.

ಸೆಕ್ಷನ್‌ 2(a) ಅಡಿ 'ಪ್ರಲೋಭನೆ' ಎಂದರೆ ಯಾವುದೇ ಉಡುಗೊರೆ, ಪ್ರತಿಫಲ, ಸುಲಭ ಹಣ ಅಥವಾ ನಗದು ಮತ್ತು ವಸ್ತುಗಳ ರೂಪದಲ್ಲಿ ಐಹಿಕ ಲಾಭ ಪಡೆಯುವುದು ಅಥವಾ ಉದ್ಯೋಗ, ಧಾರ್ಮಿಕ ಸಂಸ್ಥೆಗಳು ನಡೆಸುವ ಪ್ರತಿಷ್ಠಿತ ಶಾಲೆಗಳಲ್ಲಿ ಉಚಿತ ಶಿಕ್ಷಣ ಅಥವಾ ಉತ್ತಮ ಜೀವನ ಶೈಲಿ, ದೈವಿಕ ಆನಂದ ಅಥವಾ ಇನ್ನಿತರ ರೂಪದಲ್ಲಿ ಲಾಭ ಪಡೆಯವುದಾಗಿದೆ.

ಧಾರ್ಮಿಕ ಮತಾಂತರಕಾರ

ಸೆಕ್ಷನ್‌ 2(i) ಅಡಿ ʼಧಾರ್ಮಿಕ ಮತಾಂತರಕಾರʼ ಎಂದರೆ, ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರ ನಡೆಸುವ ಫಾದರ್‌, ಕರ್ಮಕಂಡಿ, ಮೌಲ್ವಿ ಅಥವಾ ಮುಲ್ಲಾ ಹಾಗೂ ಇನ್ನಾವುದೇ ಹೆಸರಿನಿಂದ ಕರೆಯಲ್ಪಡುವ ವ್ಯಕ್ತಿಗಳು.

ಸುಗ್ರೀವಾಜ್ಞೆ ಏನನ್ನು ನಿಷೇಧಿಸುತ್ತದೆ?

ಸುಗ್ರೀವಾಜ್ಞೆಯ ಪ್ರಮುಖ ನಿಬಂಧನೆ ಸೆಕ್ಷನ್‌ 3.

ಇದರಡಿ, ತಪ್ಪು ಚಿತ್ರಣ ನೀಡುವ, ಬಲಪ್ರಯೋಗ, ಅನುಚಿತ ಪ್ರಭಾವ, ಬಲಾತ್ಕಾರ, ಪ್ರಲೋಭನೆ ಅಥವಾ ಇನ್ನಾವುದೇ ಮೋಸದ ವಿಧಾನದ ಮೂಲಕ ಹಾಗೂ ವಿವಾಹದ ಮೂಲಕ ಯಾವುದೇ ವ್ಯಕ್ತಿ ಮತಾಂತರ ಮಾಡುವಂತಿಲ್ಲ. ಅಲ್ಲದೆ, ಅಂತಹ ಮತಾಂತಕ್ಕೆ ಯಾವುದೇ ವ್ಯಕ್ತಿ ಕುಮ್ಮಕ್ಕು ನೀಡುವುದು, ಮನವೊಲಿಸುವುದು ಅಥವಾ ಪಿತೂರಿಗೆ ಮುಂದಾಗುವುದನ್ನು ಮಾಡುವಂತಿಲ್ಲ.

ಯಾರು ಎಫ್‌ಐಆರ್‌ ದಾಖಲಿಸಬಹುದು?

ಸೆಕ್ಷನ್‌ 4ರ ಪ್ರಕಾರ ಬಾಧಿತ ವ್ಯಕ್ತಿ, ಆತ/ಆಕೆಯ ಪೋಷಕರು, ಸಹೋದರ, ಸಹೋದರಿ ಅಥವಾ ಅವರ ರಕ್ತ ಸಂಬಂಧಿ, ವಿವಾಹ ಅಥವಾ ದತ್ತು ಪಡೆದಿರುವ ಯಾವುದೇ ವ್ಯಕ್ತಿಯು ಮತಾಂತರದ ಕುರಿತು ಸೆಕ್ಷನ್‌ 3ರಲ್ಲಿ ಉಲ್ಲೇಖಿಸಿರುವ ಅಂಶಗಳ ಉಲ್ಲಂಘನೆಯನ್ನು ವಿವರಿಸಿ ಎಫ್‌ಐಆರ್‌ ದಾಖಲಿಸಹುದಾಗಿದೆ.

ಶಿಕ್ಷೆ

ಸೆಕ್ಷನ್‌ 3ರಲ್ಲಿ ಉಲ್ಲೇಖಿಸಿರುವ ಅಂಶಗಳ ಉಲ್ಲಂಘನೆಗೆ ಸೆಕ್ಷನ್‌ 5ರ ಅಡಿ ವಿವರಿಸಲಾಗಿರುವ ಶಿಕ್ಷೆ ವಿಧಿಸಲಾಗುತ್ತದೆ. ಸೆಕ್ಷನ್‌ 3ರ ಅಡಿ ಅಪರಾಧ ಎಸಗಿರುವುದು ಸಾಬೀತಾದರೆ ಅಂಥ ವ್ಯಕ್ತಿಗೆ 1 ರಿಂದ 5 ವರ್ಷಗಳವರೆಗೆ ಸೆರೆವಾಸ ಮತ್ತು 15 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.

ಇನ್ನು ಪ್ರಮುಖವಾಗಿ, ಅಪ್ರಾಪ್ತರು. ಮಹಿಳೆ ಅಥವಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯ ವಿಷಯದಲ್ಲಿ ಸೆಕ್ಷನ್‌ 3ರ ಅಡಿ ಕಾನೂನು ಉಲ್ಲಂಘಿಸಿದರೆ ಅಂಥವರಿಗೆ 2 ರಿಂದ 10 ವರ್ಷಗಳವರೆಗೆ ಶಿಕ್ಷೆ ಹಾಗೂ 25 ಸಾವಿರ ರೂಪಾಯಿವರೆಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಅಲ್ಲದೆ, ವ್ಯಕ್ತಿಯೊಬ್ಬರು ಸೆಕ್ಷನ್‌ 3ರ ಅಡಿ‌ ಅಪರಾಧಿ ಎಂದು ಸಾಬೀತಾಗಿದ್ದು, ಎರಡನೇ ಬಾರಿಗೂ ಅದೇ ಕೃತ್ಯದಲ್ಲಿ ಅಪರಾಧಿ ಎಂದಾದರೆ ಅವರಿಗೆ ಉಲ್ಲೇಖಿಸಿರುವ ದುಪ್ಪಟ್ಟು ಶಿಕ್ಷೆ ವಿಧಿಸಲಾಗುತ್ತದೆ.

ಮದುವೆಯ ಮೇಲೆ ಪರಿಣಾಮ

ಸುಗ್ರೀವಾಜ್ಞೆಯು ಅಂತರ ಧರ್ಮೀಯ ವಿವಾಹದ ಮೇಲೆ ಉಂಟುಮಾಡುವ ಪರಿಣಾಮದ ಕುರಿತ ಚರ್ಚೆ ಜೋರಾಗಿದೆ. ಸೆಕ್ಷನ್‌ 6ರ ಪ್ರಕಾರ ಅಕ್ರಮ ಮತಾಂತರಕ್ಕಾಗಿ ಮಾಡಿಕೊಳ್ಳಲಾಗುವ ಮದುವೆ ಅಥವಾ ತಿರುವುಮುರುವು ಪ್ರಕ್ರಿಯೆಯ ಕಾರಣಕ್ಕಾಗಿ, ಒಂದು ಧರ್ಮದ ಪುರುಷ ಮತ್ತೊಂದು ಧರ್ಮದ ಮಹಿಳೆಯನ್ನು ವಿವಾಹವಾಗುವುದು ಅಥವಾ ಮದುವೆಗೆ ಮುನ್ನ, ಇಲ್ಲವೇ ಆನಂತರ ತಾನು ಮತಾಂತರಗೊಳ್ಳುವುದು, ಇಲ್ಲವೇ ಮಹಿಳೆಯನ್ನು ಮತಾಂತರಗೊಳಿಸುವುದನ್ನು ಕೌಟುಂಬಿಕ ನ್ಯಾಯಾಲಯದಲ್ಲಿ ಅಸಿಂಧು ಎಂದು ತೀರ್ಮಾನಿಸಬಹುದು. ಒಂದು ವೇಳೆ ಕೌಟುಂಬಿಕ ನ್ಯಾಯಾಲಯವು ಅಲ್ಲಿ ಸ್ಥಾಪಿತವಾಗಿರದ ಪಕ್ಷದಲ್ಲಿ ಪ್ರಕರಣವನ್ನು ಆಲಿಸುವ ಸಂಬಂಧಪಟ್ಟ ನ್ಯಾಯಾಲಯವು ಎರಡೂ ಕಡೆಯವರಲ್ಲಿ ಮತ್ತೊಬ್ಬರ ಮೇಲೆ ಆಪಾದಿಸಿ ಯಾರೇ ಮನವಿ ಮಾಡಿದರೂ ಅಂತಹ ವಿವಾಹವನ್ನು ಅಸಿಂಧು ಎಂದು ತೀರ್ಮಾನಿಸಬಹುದು.

ಮತಾಂತರದ ಪ್ರಕ್ರಿಯೆಗಳು

ಈ ಹಿಂದೆ ಹೇಳಿದಂತೆ ಸುಗ್ರೀವಾಜ್ಞೆಯು ಕೇವಲ ಅಂತರ ಧರ್ಮೀಯ ವಿವಾಹದ ಮೇಲೆ ಮಾತ್ರವೇ ಪರಿಣಾಮ ಬೀರುವುದಿಲ್ಲ. ಯಾರೇ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರ ಬಯಸಿದರೂ ಸುಗ್ರೀವಾಜ್ಞೆಯಲ್ಲಿ ಉಲ್ಲೇಖಿಸಿರುವ ಪ್ರಕ್ರಿಯೆಗಳನ್ನು ಅನುಸರಿಸಬೇಕಿದೆ. ಸೆಕ್ಷನ್‌ 8 ಮತ್ತು 9ರಲ್ಲಿ ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ವಿವರಿಸಲಾಗಿದೆ.

ಪೂರ್ವ ಸೂಚನೆ

ಸೆಕ್ಷನ್‌ 8ರ ಪ್ರಕಾರ ಸ್ವಇಚ್ಛೆಯಿಂದ ಯಾವುದೇ ಬಲಾತ್ಕಾರ, ಒತ್ತಡ ಅಥವಾ ಪ್ರಲೋಭನೆಗೆ ಒಳಗಾಗದೆ ತನ್ನ ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರ ಆಗಲು ಇಚ್ಛಿಸಿರುವುದಾಗಿ ಮತಾಂತರ ಬಯಸುವ ವ್ಯಕ್ತಿಯು ಷೆಡ್ಯೂಲ್‌ Iರಲ್ಲಿ ಉಲ್ಲೇಖಿಸಿರುವಂತೆ ಕನಿಷ್ಠ ಅರವತ್ತು ದಿನಗಳಿಗೂ ಮುಂಚಿತವಾಗಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅಥವಾ ಅವರಿಂದ ವಿಶೇಷವಾಗಿ ಅನುಮತಿ ನೀಡಲ್ಪಟ್ಟ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಹೇಳಿಕೆ ಸಲ್ಲಿಸಬೇಕು.

ಮತಾಂತರಗೊಳಿಸುವ ಮತಾಂತರಕಾರರು ಕೂಡ ಮತಾಂತರ ಕಾರ್ಯಕ್ರಮ ನಡೆಸಿಕೊಡುವ ಸಂಬಂಧ ಒಂದು ತಿಂಗಳು ಮುಂಚಿತವಾಗಿ ಷೆಡ್ಯೂಲ್‌ IIರಲ್ಲಿ ಉಲ್ಲೇಖಿಸಿರುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅಥವಾ ಅವರಿಂದ ವಿಶೇಷವಾಗಿ ನಿಯುಕ್ತಿಯಾದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಮನವಿ ಸಲ್ಲಿಸಬೇಕು. ಬಳಿಕ ಮತಾಂತರದ ನೈಜ ಕಾರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಾರೆ.

ಧಾರ್ಮಿಕ ಮತಾಂತರಕ್ಕೆ ಒಳಪಡುವ ವ್ಯಕ್ತಿಯು ಸೆಕ್ಷನ್‌ 8ರ ಅನ್ವಯ ನಿಯಮ ಉಲ್ಲಂಘಿಸಿದರೆ ಅಂಥವರಿಗೆ 6 ತಿಂಗಳಿಂದ 3 ವರ್ಷಗಳವರೆಗೆ ಶಿಕ್ಷೆ ಮತ್ತು 10 ಸಾವಿರ ರೂಪಾಯಿಗಳಿಗೂ ಹೆಚ್ಚು ದಂಡ ವಿಧಿಸಲಾಗುತ್ತದೆ. ಸೆಕ್ಷನ್‌ 8ರ ನಿಯಮಗಳನ್ನು ಉಲ್ಲಂಘಿಸುವ ಮತಾಂತರಕಾರರಿಗೆ 1 ರಿಂದ 5 ವರ್ಷಗಳ ಶಿಕ್ಷೆ ಮತ್ತು 25 ಸಾವಿರ ರೂಪಾಯಿಗೆ ಕಡಿಮೆ ಇಲ್ಲದಂತೆ ದಂಡ ವಿಧಿಸಲಾಗುತ್ತದೆ.

ಮತಾಂತರದ ನಂತರದ ಹೇಳಿಕೆ

ಮತಾಂತರದ ನಂತರದ ಪ್ರಕ್ರಿಯೆಗಳ ಕುರಿತು ಸೆಕ್ಷನ್‌ 9ರಲ್ಲಿ ಕಾರ್ಯವಿಧಾನ ಉಲ್ಲೇಖಿಸಲಾಗಿದೆ. ಮತಾಂತರಗೊಂಡ ವ್ಯಕ್ತಿಯು ಮತಾಂತರಕ್ಕೆ ಒಳಗಾದ ದಿನದಿಂದ 60 ದಿನಗಳ ಒಳಗೆ ಷೆಡ್ಯೂಲ್‌ IIIರಲ್ಲಿ ಉಲ್ಲೇಖಿಸಿರುವಂತೆ ಈ ಕುರಿತ ಹೇಳಿಕೆಯನ್ನು ತಾನು ನೆಲೆಸಿರುವ ಸ್ಥಳದ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಸಲ್ಲಿಸಬೇಕು. ಇದರಲ್ಲಿ ಕಾಯಂ ವಿಳಾಸ, ನಿವಾಸದ ಸ್ಥಳ, ಮತಾಂತರಕ್ಕೂ ಮುನ್ನ ವ್ಯಕ್ತಿಯು ಅನುಸರಿಸುತ್ತಿದ್ದ ಧರ್ಮ ಮತ್ತು ಮತಾಂತರಗೊಂಡ ಧರ್ಮದ ಬಗ್ಗೆ ಮಾಹಿತಿ ನೀಡಬೇಕು.

ಹೇಳಿಕೆಯಲ್ಲಿ ಉಲ್ಲೇಖಿಸಿರುವ ಮಾಹಿತಿಯನ್ನು ದೃಢಪಡಿಸಲು 21 ದಿನಗಳ ಒಳಗಾಗಿ ಮತಾಂತರಗೊಂಡ ವ್ಯಕ್ತಿಯು ಖುದ್ದಾಗಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರಾಗಬೇಕು. ಹೇಳಿಕೆಯಲ್ಲಿ ಉಲ್ಲೇಖಿಸಿರುವ ಮಾಹಿತಿಯನ್ನು ಅದಕ್ಕಾಗಿ ಕಾದಿರಿಸಲಾಗಿರುವ ದಾಖಲೆಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ದಾಖಲಿಸಿಕೊಳ್ಳಲಿದ್ದು, ಅದನ್ನು ದೃಢಪಡಿಸಿಕೊಳ್ಳಲಿದ್ದಾರೆ. ಸೆಕ್ಷನ್ 9ರ ಅಡಿ ನಿಬಂಧನೆಗಳ ಉಲ್ಲಂಘನೆಯು ಮತಾಂತರವನ್ನು ಕಾನೂನುಬಾಹಿರ ಮತ್ತು ಅನೂರ್ಜಿತಗೊಳಿಸುತ್ತದೆ.

ಆರೋಪಿಗಳ ಮೇಲೆ ಪುರಾವೆಗಳನ್ನು ನೀಡುವ ಹೊರೆ

ಸುಗ್ರೀವಾಜ್ಞೆಯಲ್ಲಿನ ಮತ್ತೊಂದು ಪ್ರಮುಖ ನಿಬಂಧನೆ ಸೆಕ್ಷನ್‌ 12. ಇದರ ಅಡಿ, ತಪ್ಪುಚಿತ್ರಣ, ಬಲಪ್ರಯೋಗ, ಅನುಚಿತ ಪ್ರಭಾವ, ಬಲಾತ್ಕಾರ, ಪ್ರಲೋಭನೆ ಅಥವ ವಿವಾಹದ ಮೂಲಕ ಮತಾಂತರ ನಡೆಸಲಾಗಿದೆಯೇ ಎನ್ನುವ ಪ್ರಶ್ನೆ ಉದ್ಭವಿಸಿದಾಗ ಅದನ್ನು ಅಲ್ಲಗಳೆಯುವ ಪುರಾವೆ ಒದಗಿಸುವ ಜವಾಬ್ದಾರಿ ಮತಾಂತರಿಸಿದ ವ್ಯಕ್ತಿಯ ಮೇಲಿರಲಿದೆ.