ಉತ್ತರಕಾಶಿಯ ಜಾಮಾ ಮಸೀದಿ ಕೆಡವಲು ಹಿಂದುತ್ವ ಸಂಘಟನೆಗಳು ಬೇಡಿಕೆ ಇಟ್ಟ ಬಳಿಕ ಉದ್ವಿಗ್ನತೆ ತಲೆದೋರಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಪೊಲೀಸರು ಮತ್ತು ಜಿಲ್ಲಾಡಳಿತಕ್ಕೆ ಉತ್ತರಾಖಂಡ್ ಹೈಕೋರ್ಟ್ ಈಚೆಗೆ ನಿರ್ದೇಶನ ನೀಡಿದೆ [ಅಲ್ಪಸಂಖ್ಯಾಕ ಸೇವಾ ಸಮಿತಿ ಮತ್ತು ಉತ್ತರಾಖಂಡ ಸರ್ಕಾರ ನಡುವಣ ಪ್ರಕರಣ].
ಜಿಲ್ಲಾಧಿಕಾರಿ ಮತ್ತು ಹಿರಿಯ ಪೊಲೀಸ್ ಅಧೀಕ್ಷಕರು ಮಸೀದಿ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನೋಜ್ ಕುಮಾರ್ ತಿವಾರಿ ಮತ್ತು ನ್ಯಾಯಮೂರ್ತಿ ರಾಕೇಶ್ ಥಪ್ಲಿಯಾಲ್ ಅವರಿದ್ದ ಪೀಠ ನವೆಂಬರ್ 22ರಂದು ನೀಡಿದ ಆದೇಶದಲ್ಲಿ ಸೂಚಿಸಿದೆ. ನಾಳೆ ನವೆಂಬರ್ 27ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.
ಮಸೀದಿ ಕೆಡವಲು ಹಿಂದುತ್ವ ಸಂಘಟನೆಯ ಮುಖಂಡರು ಒತ್ತಾಯಿಸಿದ್ದನ್ನು ವಿರೋಧಿಸಿರುವ ಅಲ್ಪಸಂಖ್ಯಕ್ ಸೇವಾ ಸಮಿತಿ ಮಸೀದಿಗೆ ರಕ್ಷಣೆ ನೀಡುವಂತೆ ಕೋರಿ ಪ್ರಕರಣದಲ್ಲಿ ಮಧ್ಯಪ್ರವೇಶಿಸಿತ್ತು.
ಹಿಂದುತ್ವ ಸಂಘಟನೆಯ ಮುಖಂಡರು ಮಸೀದಿಯನ್ನು ಕೆಡವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಮತ್ತು ಧಾರ್ಮಿಕ ಸ್ಥಳದ ಕಾನೂನುಬದ್ಧತೆಯ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಅರ್ಜಿದಾರರು ಆರೋಪಿಸಿರುವುದು ವರದಿಯಾಗಿತ್ತು. ಮುಸ್ಲಿಮರ ವಿರುದ್ಧ ಹಿಂದುತ್ವ ಮುಖಂಡರು ದ್ವೇಷ ಭಾಷಣ ಮಾಡುತ್ತಿದ್ದು ಈ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
ಕಳೆದ ಅಕ್ಟೋಬರ್‌ನಲ್ಲಿ, 55 ವರ್ಷಗಳಷ್ಟು ಹಳೆಯದಾದ ಮಸೀದಿಯನ್ನು ಕೆಡವಲು ಒತ್ತಾಯಿಸಿ ಬಲಪಂಥೀಯ ಗುಂಪುಗಳು ಮೆರವಣಿಗೆ ನಡೆಸಿದ ನಂತರ ಉತ್ತರಕಾಶಿಯಲ್ಲಿ ಹಿಂಸಾಚಾರ ಭುಗಿಲೆದ್ದಿತು.