ಉತ್ತರಾಖಂಡದ ಡೆಹ್ರಾಡೂನ್‌ನ ಭಾನಿಯಾವಾಲಾವನ್ನು ಹೃಷಿಕೇಶಕ್ಕೆ ಸಂಪರ್ಕಿಸುವ ರಸ್ತೆ ವಿಸ್ತರಣೆ ಯೋಜನೆಗಾಗಿ ಶಿವಾಲಿಕ್ ಆನೆ ಮೀಸಲು ಪ್ರದೇಶದಲ್ಲಿ 3,300 ಮರ ಕಡಿಯುವ ಪ್ರಸ್ತಾವನೆಗೆ ಉತ್ತರಾಖಂಡ ಹೈಕೋರ್ಟ್ ಬುಧವಾರ ತಡೆ ನೀಡಿದೆ [ರೀನು ಪಾಲ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಸಂಬಂಧಪಟ್ಟ ಅಧಿಕಾರಿ ಸಿದ್ಧಪಡಿಸಿದ ಪರಿಸರ ಪರಿಣಾಮ ಮೌಲ್ಯಮಾಪನ ವರದಿ ಸೇರಿದಂತೆ ಯೋಜನೆಗೆ ತೆಗೆದುಕೊಂಡ ಪರಿಸರ ಅನುಮತಿ ಕುರಿತ ದಾಖಲೆಗಳನ್ನು ಸಲ್ಲಿಸುವಂತೆ ಕೇಂದ್ರ ಮತ್ತು ಉತ್ತರಾಖಂಡ ಸರ್ಕಾರಕ್ಕೆ ಮುಖ್ಯ ನ್ಯಾಯಮೂರ್ತಿ ಜಿ ನರೇಂದರ್ ಮತ್ತು ನ್ಯಾಯಮೂರ್ತಿ ಆಶಿಶ್ ನೈಥಾನಿ ಅವರಿದ್ದ ಪೀಠ ನಿರ್ದೇಶನ ನೀಡಿತು.
ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 21ರಂದು ನಡೆಯಲಿದ್ದು ಅಲ್ಲಿಯವರೆಗೆ ಆ ಪ್ರದೇಶಗಳಲ್ಲಿ ಮರಗಳನ್ನು ಕಡಿಯದಂತೆ ನ್ಯಾಯಾಲಯ ಆದೇಶಿಸಿದೆ.
ಪ್ರಸ್ತಾವಿತ ಹೆದ್ದಾರಿ ಯೋಜನೆ ಆನೆ ಸಂಚಾರ ಪಥಗಳನ್ನು ಎಲ್ಲೆಲ್ಲಿ ಅತಿಕ್ರಮಿಸಬಹುದು ಎಂಬುದರ ಕುರಿತು ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ಅರ್ಜಿದಾರರಿಗೆ ಇದೇ ವೇಳೆ ಸೂಚಿಸಿದೆ.
ಉತ್ತರಾಖಂಡದಲ್ಲಿ ತೀವ್ರ ಪರಿಸರ ನಾಶ ಏಷ್ಯಾ ಆನೆಗಳಿಗೆ ಬೆದರಿಕೆ ಒಡ್ಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿ ಪರಿಸರ ಹೋರಾಟಗಾರ್ತಿ ರೀನು ಪಾಲ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಡೆಹ್ರಾಡೂನ್ ಮತ್ತು ಸಹರಾನ್‌ಪುರ ನಡುವಿನ ಆನೆ ಕಾರಿಡಾರ್ ನಡುವೆ ನಿರ್ಮಿಸಲಾಗುವ ಎಂಟು ರೈಲು ನಿಲ್ದಾಣಗಳ ಅಭಿವೃದ್ಧಿ ಮತ್ತು ಥಾನೋ ರಸ್ತೆ ಮತ್ತು ಭಾನಿಯಾವಾಲಾ-ಹೃಷಿಕೇಶ್ ರಸ್ತೆಯ ಅಗಲೀಕರಣ ಸೇರಿದಂತೆ ತ್ವರಿತ ಮೂಲಸೌಕರ್ಯ ವಿಸ್ತರಣೆಯನ್ನು ಪ್ರಸ್ತಾವಿತ ಯೋಜನೆಯು ಒಳಗೊಂಡಿರುವ ಬಗ್ಗೆ ಅರ್ಜಿದಾರರು ನ್ಯಾಯಾಲಯದ ಗಮನಸೆಳೆದರು.
ಇತರೆ ವಿಚಾರಗಳ ಜೊತೆಗೆ ರಸ್ತೆ ವಿಸ್ತರಣೆ ಯೋಜನೆಗಾಗಿ ಶಿವಾಲಿಕ್ ಆನೆ ಅಭಯಾರಣ್ಯದಲ್ಲಿ 3,300 ಕ್ಕೂ ಹೆಚ್ಚು ಮರಗಳನ್ನು ಕಡಿಯುವ ರಾಜ್ಯ ಸರ್ಕಾರದ ಯೋಜನೆಯ ಬಗ್ಗೆಯೂ ಪಾಲ್ ಕಳವಳ ವ್ಯಕ್ತಪಡಿಸಿದ್ದರು.