ಸೆರೆ ಹಿಡಿಯಲ್ಪಟ್ಟ ಆನೆಗಳ ಸ್ಥಿತಿ ಕೇರಳದಲ್ಲಿ ಕರುಣಾಜನಕವಾಗಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಬೇರೆ ರಾಜ್ಯಗಳಿಂದ ಇಲ್ಲಿಗೆ ಆನೆ ತರದಂತೆ ಕೇರಳ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ [ವಾಕಿಂಗ್ ಐ ಫೌಂಡೇಶನ್ ಫಾರ್ ಅನಿಮಲ್ ಅಡ್ವೊಕಸಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಅಗತ್ಯ ಆರೈಕೆ ಮತ್ತು ಚಿಕಿತ್ಸೆ ಸಿಗದ ಕಾರಣ 2018ರಿಂದ 2024ರ ನಡುವೆ ಸೆರೆಯಲ್ಲಿರುವ 154 ಆನೆಗಳು ಸಾವನ್ನಪ್ಪಿವೆ ಎಂಬ ಅಂಶವನ್ನು ನ್ಯಾಯಮೂರ್ತಿ ಎ.ಕೆ.ಜಯಶಂಕರನ್ ನಂಬಿಯಾರ್ ಮತ್ತು ನ್ಯಾಯಮೂರ್ತಿ ಗೋಪಿನಾಥ್ ಪಿ ಅವರಿದ್ದ ವಿಭಾಗೀಯ ಪೀಠ ಗಮನಿಸಿತು.
ತಾನು ಈ ಹಿಂದೆ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಮೊಕದ್ದಮೆಯಲ್ಲಿ ರಾಜ್ಯದಲ್ಲಿ ಸೆರೆ ಹಿಡಿದ ಸಾಕಾನೆಗಳ ಸ್ಥಿತಿ ತೃಪ್ತಿಕರವಾಗಿಲ್ಲ ಎಂದು ಹೇಳಿದ್ದನ್ನು ನ್ಯಾಯಾಲಯ ಉಲ್ಲೇಖಿಸಿತು.
"ಕೇರಳ ರಾಜ್ಯದಲ್ಲಿ ಸೆರೆಯಲ್ಲಿರುವ ಆನೆಗಳ ಸ್ಥಿತಿ ತೃಪ್ತಿಕರವಾಗಿಲ್ಲ. ಅವುಗಳ ಸ್ಥಿತಿಯನ್ನು "ಕರುಣಾಜನಕ " ಎಂದು ಕರೆಯಬಹುದು" ಎಂಬುದಾಗಿ ನ್ಯಾಯಾಲಯ ಹೇಳಿದೆ.
ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಸದ್ಯಕ್ಕೆ ರಾಜ್ಯದ ಹೊರಗಿನಿಂದ ಯಾವುದೇ ಆನೆಯನ್ನು ಕೇರಳಕ್ಕೆ ಪ್ರವೇಶಿಸಲು ಅನುಮತಿ ನೀಡುವುದನ್ನು ಸರ್ಕಾರ ತಡೆಹಿಡಿಯಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಆನೆಗಳ ಶ್ರೇಯೋಭಿವೃದ್ಧಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ಇತರ ರಾಜ್ಯಗಳಿಂದ ಆನೆಗಳನ್ನು ಕೇರಳಕ್ಕೆ ವರ್ಗಾಯಿಸುವುದನ್ನು ತಡೆಯಲು ವಾಕಿಂಗ್ ಐ ಫೌಂಡೇಶನ್ ಎಂಬ ಸರ್ಕಾರೇತರ ಸಂಸ್ಥೆಯ ಮನವಿ ಸಲ್ಲಿಸಿತ್ತು.
ಸೆರೆ ಹಿಡಿದ ಆನೆಗಳ (ವರ್ಗಾವಣೆ ಅಥವಾ ಸಾರಿಗೆ) ನಿಯಮಾವಳಿ 2024 ರ ನಿಯಮ 7ರ ಪ್ರಕಾರ ಆನೆಗಳ ರವಾನೆಗೆ ಅವುಗಳ ಜೀವನ ಸ್ಥಿತಿ ಸುಧಾರಣೆಯಂತಹ ನಿರ್ದಿಷ್ಟ ಅವಶ್ಯಕತೆ ಪೂರೈಸಬೇಕು. ಆದರೆ ರಾಜ್ಯದಲ್ಲಿ ಆನೆಗಳ ಜೀವನ ಪರಿಸ್ಥಿತಿ ಸುಧಾರಿಸುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಈಚೆಗೆ ನಡೆದ ಬೇರೆ ಪ್ರಕರಣವೊಂದರ ವಿಚಾರಣೆ ವೇಳೆ ಸೆರೆ ಹಿಡಿದ ಆನೆಗಳನ್ನು ಸಭೆ ಸಮಾರಂಭಗಳಲ್ಲಿ ಬಳಸುವ ಮೂಲಕ ಅವುಗಳನ್ನು ಅವುಗಳ ಮಾಲೀಕರು ಹಣ ಸೃಷ್ಟಿಸುವ ಸಾಧನಗಳನ್ನಾಗಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿತ್ತು.