Justice S Ravindra Bhat
Justice S Ravindra Bhat  
ಸುದ್ದಿಗಳು

ಬಾಲನ್ಯಾಯ ಮಂಡಳಿಯಂತಹ ಸಂಸ್ಥೆಗಳ ಖಾಲಿ ಹುದ್ದೆಗಳು ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸುತ್ತಿವೆ: ನ್ಯಾ. ರವೀಂದ್ರ ಭಟ್

Bar & Bench

ಬಾಲನ್ಯಾಯ ಮಂಡಳಿಗಳು ಮತ್ತು ಮಕ್ಕಳ ಕಲ್ಯಾಣ ಸಮಿತಿಗಳಲ್ಲಿ ಭಾರೀ ಸಂಖ್ಯೆಯಲ್ಲಿ ಹುದ್ದೆಗಳು ಖಾಲಿಯಿರುವುದು ಕಾನೂನು ಸಂಘರ್ಷಕ್ಕೀಡಾದ ಮಕ್ಕಳ ನ್ಯಾಯ ವ್ಯವಸ್ಥೆ ನಿಷ್ಕ್ರಿಯಗೊಳಿಸುತ್ತಿದೆ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಸ್‌ ರವೀಂದ್ರ ಭಟ್‌ ಶನಿವಾರ ಹೇಳಿದ್ದಾರೆ.

“ಬಾಲನ್ಯಾಯ ಮಂಡಳಿಯೇ ಇರಲಿ ಇಲ್ಲವೇ ಮಕ್ಕಳ ಕಲ್ಯಾಣ ಸಮಿತಿಯಂತಹ ಸಂಸ್ಥೆಗಳೇ ಇರಲಿ ಅಂತಹ ಪ್ರತಿಯೊಂದು ಸಂಸ್ಥೆಯೂ ಅಲ್ಲಿರಬೇಕಾದ ಹುದ್ದೆಗಳಿಗಿಂತ ಕಡಿಮೆ ಸಂಖ್ಯೆಯ ಸಾಮರ್ಥ್ಯದಿಂದ ಕೆಲಸ ಮಾಡುತ್ತಿವೆ. ಅವುಗಳಲ್ಲಿ ಬಹುತೇಕ ಕಡೆ ದೊಡ್ಡ ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಇದ್ದು ಇದು ವ್ಯವಸ್ಥೆಯನ್ನು ವಾಸ್ತವವಾಗಿ ದುರ್ಬಲಗೊಳಿಸುತ್ತದ್ದು, ನಿಷ್ಕ್ರಿಯಗೊಳಿಸುತ್ತಿದೆ. ಪೂರ್ಣ ಸಾಮರ್ಥ್ಯ ಅಥವಾ ಸೂಕ್ತ ಕೋರಂ ಇಲ್ಲದೆ ಇಲ್ಲದೆ ಮಕ್ಕಳ ಕಲ್ಯಾಣ ಸಮಿತಿಗಳು ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ” ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸದಸ್ಯರ ನೇಮಕಕ್ಕೆ ರಾಜ್ಯಗಳಲ್ಲಿ ಸೂಕ್ತ ಮಾನದಂಡ ಇಲ್ಲದೆ ಹೋದರೆ ಆಗ ಇಂತಹ ಸಂಸ್ಥೆಗಳು ಕಾಗದದ ಹುಲಿಗಳಾಗಿ ಉಳಿಯುತ್ತವೆ ಎಂದು ಅವರು ಎಚ್ಚರಿಕೆ ನೀಡಿದರು.  

ಯುನಿಸೆಫ್‌ (ವಿಶ್ವ ಸಂಸ್ಥೆಯ ಮಕ್ಕಳ ನಿಧಿ) ಭಾರತ ಘಟಕದ ಸಹಯೋಗದೊಂದಿಗೆ ಸುಪ್ರೀಂ ಕೋರ್ಟ್‌ ಬಾಲ ನ್ಯಾಯ ಮತ್ತು ಮಕ್ಕಳ ಕಲ್ಯಾಣ ಸಮಿತಿ ಶನಿವಾರ ಸರ್ವೋಚ್ಚ ನ್ಯಾಯಾಲಯದ ಅಂಗಳದಲ್ಲಿ ಆಯೋಜಿಸಿದ್ದ ಕಾನೂನು ಸಂಘರ್ಷದಲ್ಲಿರುವ ಮಕ್ಕಳ ಕುರಿತಾದ 8ನೇ ರಾಷ್ಟ್ರೀಯ ವಾರ್ಷಿಕ ಭಾಗೀದಾರರ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ನ್ಯಾ. ಭಟ್‌ ಮಾತನಾಡಿದರು.

ಸಮಿತಿಯ ಅಧ್ಯಕ್ಷರೂ ಆಗಿರುವ ನ್ಯಾ. ಭಟ್‌ ಅವರು ಮಕ್ಕಳ ಆರೈಕೆಗೆ ಸಂಬಂಧಿಸಿದಂತೆ ಎರಡು ಅಂಶಗಳು ಮುಖ್ಯವಾಗಿವೆ ಎಂದರು. ಸಂಸ್ಥೆಯಲ್ಲಿದ್ದಾಗ ಅವರ ಆರೈಕೆ ಮತ್ತು ವಯಸ್ಕರಾಗಿ ಅವರು ಸಂಸ್ಥೆ ತೊರೆದ ಬಳಿಕ ತೋರಬೇಕಾದ ಕಾಳಜಿ ಬಗ್ಗೆ  ಅವರು ತಿಳಿಸಿದರು.  

Justice BV Nagarathna

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸುಪ್ರೀಂ ಕೋರ್ಟ್‌ ಮತ್ತೊಬ್ಬ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರು  ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಮಗುವಿಗೆ ನೀಡಲಾಗುವ ಆರೈಕೆ ಮತ್ತು ರಕ್ಷಣೆಯ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು. ಪೋಷಕರು ಅಥವಾ ಸಾಮಾಜಿಕ ನಿರ್ಲಕ್ಷ್ಯದಿಂದಾಗಿ ಮಕ್ಕಳು ಕಾನೂನು ಸಂಘರ್ಷಕ್ಕೆ ಒಳಗಾಗುತ್ತಾರೆ ಎಂದು ಅವರು ಒತ್ತಿ ಹೇಳಿದರು.

ಶಾಲೆಗಳಲ್ಲಿನ ಪಠ್ಯಕ್ರಮವು ಸಮುದಾಯದ ಒಳಗೊಳ್ಳುವಿಕೆಯೊಂದಿಗೆ ದಯೆ, ಗೌರವ ಮತ್ತು ಸಹಾನುಭೂತಿಯ ಮೌಲ್ಯಗಳಿಗೆ ಒತ್ತು ನೀಡುವ ಅಗತ್ಯವಿದೆ ಎಂದು ಅವರು ಇದೇ ಸಂದರ್ಭದಲ್ಲಿ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಮತ್ತು ಯುನಿಸೆಫ್‌ ಭಾರತ ಘಟಕದ ಪ್ರತಿನಿಧಿ ಪ್ರತಿನಿಧಿ ಸಿಂಥಿಯಾ ಮೆಕ್‌ಕ್ಯಾಫ್ರಿ ಉಪಸ್ಥಿತರಿದ್ದರು.