PMLA with Delhi High Court 
ಸುದ್ದಿಗಳು

[ಪಿಎಂಎಲ್ಎ] ಕೌಟುಂಬಿಕ ಸಂಬಂಧದ ಆಧಾರದ ಮೇಲೆ ಆರೋಪಿಗೆ ಲುಕ್ಔಟ್ ಸುತ್ತೋಲೆ ಹೊರಡಿಸುವಂತಿಲ್ಲ: ದೆಹಲಿ ಹೈಕೋರ್ಟ್

ಬ್ರಿಟಿಷ್ ಪ್ರಜೆ ಪೂಜಾ ಚಡ್ಡಾ ಅವರ ವಿರುದ್ಧ ಜಾರಿ ನಿರ್ದೇಶನಾಲಯ ಹೊರಡಿಸಿದ್ದ ಎಲ್ಒಸಿ ರದ್ದುಗೊಳಿಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Bar & Bench

'ಭಾರತದ ಆರ್ಥಿಕ ಹಿತಾಸಕ್ತಿ' ಅಥವಾ 'ಭಾರೀ ಸಾರ್ವಜನಿಕ ಹಿತಾಸಕ್ತಿʼ ಎಂಬ ಊಹೆಗಳ ಆಧಾರದ ಮೇಲೆ ಲುಕ್ ಔಟ್ ನೋಟಿಸ್‌ (ಎಲ್‌ಒಸಿ) ಹೊರಡಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ  [ಪೂಜಾ ಛಡ್ಡಾ ಮತ್ತು ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ].

ಗೃಹ ಸಚಿವಾಲಯ 2021ರಲ್ಲಿ ಹೊರಡಿಸಿದ ಕಚೇರಿ ಜ್ಞಾಪನಾ ಪತ್ರ ಈ  ಬಗ್ಗೆ ಹೇಳಿದ್ದರೂ ಅವುಗಳನ್ನು ಸಾರಾಸಗಟಾಗಿ ಅನ್ವಯಿಸುವಂತಿಲ್ಲ. ಅವುಗಳ ಪ್ರಸ್ತಾಪ ಇರುವ ಅರ್ಜಿಯು ಸಮಂಜಸತೆಯಿಂದ ಕೂಡಿದೆಯೇ ಮತ್ತು ಸ್ಪಷ್ಟ ಆಧಾರಗಳು ಅದಕ್ಕೆ ಇವೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು  ನ್ಯಾಯಮೂರ್ತಿ ಸಚಿನ್ ದತ್ತ ಹೇಳಿದರು.

ಆರೋಪಿಯೊಂದಿಗೆ ಕೌಟುಂಬಿಕ ಸಂಬಂಧ ಇದ್ದ ಮಾತ್ರಕ್ಕೆ ಎಲ್‌ಓಸಿ ನೀಡುವುದು ಸಮರ್ಥನೀಯವಲ್ಲ ಎಂದು ಹೈಕೋರ್ಟ್ ಹೇಳಿದೆ.

ಬ್ರಿಟಿಷ್ ಪ್ರಜೆ ಪೂಜಾ ಚಡ್ಡಾ ಅವರ ವಿರುದ್ಧ ಜಾರಿ ನಿರ್ದೇಶನಾಲಯ ಹೊರಡಿಸಿದ್ದ ಎಲ್ಒಸಿ ರದ್ದುಗೊಳಿಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ವರ್ಷ ಮಾರ್ಚ್ 23 ರಂದು ಅವರು ತಮ್ಮ ತಾಯಿಯನ್ನು ಭೇಟಿ ಮಾಡಲು ಭಾರತಕ್ಕೆ ಬಂದಾಗ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ರಾತ್ರಿಯಿಡೀ ಬಂಧಿಸಿಡಲಾಗಿತ್ತು. ಜೊತೆಗೆ ಅವರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅವರ ದೂರದ ಸಂಬಂಧಿ ಉದ್ಯಮಿ ಸಂಜಯ್ ಭಂಡಾರಿ ಅವರ ತನಿಖೆಗೆ  ಸಂಬಂಧಿಸಿದಂತೆ ಪೂಜಾ ವಿರುದ್ಧ ಎಲ್‌ಒಸಿ ಹೊರಡಿಸಲಾಗಿತ್ತು.

ಜಾರಿ ನಿರ್ದೇಶನಾಲಯವು ಭಂಡಾರಿ ವಿರುದ್ಧ 2017ರಲ್ಲಿ ಕಪ್ಪು ಹಣ ಕಾಯ್ದೆಯಡಿ ಮತ್ತು ನಂತರ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು.

2023ರ ಪೂರಕ ಪ್ರಾಸಿಕ್ಯೂಷನ್ ದೂರಿನಲ್ಲಿ ಪೂಜಾ ಚಡ್ಡಾ ಅವರ ಪತಿಯ ಹೆಸರನ್ನು ಹೆಸರಿಸಲಾಗಿದ್ದರೂ, ಯಾವುದೇ ದೂರು ಅಥವಾ ವಿಚಾರಣೆಯಲ್ಲಿ ಅವರನ್ನು ಎಂದಿಗೂ ಆರೋಪಿಯನ್ನಾಗಿ ಮಾಡಲಾಗಿಲ್ಲ ಎಂದು ಚಡ್ಡಾ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಆದರೆ ಭಂಡಾರಿಯವರ ಹಣಕಾಸಿನ ವಹಿವಾಟುಗಳನ್ನು ಪೂಜಾ  ನಿರ್ವಹಿಸಿದ್ದು ತನಿಖೆಯನ್ನು ಪೂರ್ಣಗೊಳಿಸಲು ಅವರ ಸಹಕಾರ ಅಗತ್ಯ ಎಂದು ಜಾರಿ ನಿರ್ದೇಶನಾಲಯ ವಾದಿಸಿತು.

ವಾದ ಆಲಿಸಿದ ನ್ಯಾಯಾಲಯ, ವ್ಯಕ್ತಿಯು ಆರೋಪಿಯ ಸಂಬಂಧಿ ಎಂಬ ಕಾರಣಕ್ಕಾಗಿ  ಅವರಿಗೆ ಎಲ್‌ಒಸಿ ನೀಡುವುದು ಸಮರ್ಥನೀಯವಲ್ಲ ಎಂದು ಹೈಕೋರ್ಟ್ ಹೇಳಿದೆ.

ಆಕೆಯ ಬಂಧನವು ಅಂತಹ ಸುತ್ತೋಲೆಗಳನ್ನು ನಿಯಂತ್ರಿಸುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂದು ನ್ಯಾಯಾಲಯ ಹೇಳಿದೆ. ಆಕೆಯ ವೀಸಾ ಅವಧಿ ಮುಗಿದಿರುವುದರಿಂದ ಆಕೆಯ ನಿರಂತರ ಬಂಧನ ಅಸಮರ್ಥನೀಯವಾಗಿದೆ ಎಂದು ಅದು ಒತ್ತಿ ಹೇಳಿದೆ.

ಈ ಹಿನ್ನೆಲೆಯಲ್ಲಿ, ತನಿಖೆಗೆ ಸಹಕರಿಸುವುದಾಗಿ ಒಪ್ಪಿರುವ, ಚಡ್ಡಾ ಅವರು ಇಂಗ್ಲೆಂಡ್‌ಗೆ ಪ್ರಯಾಣಿಸಲು ಅನುಮತಿ ನೀಡುವಂತೆ ನ್ಯಾಯಮೂರ್ತಿ ದತ್ತ ಆದೇಶಿಸಿದರು. ಒಪ್ಪಂದದ ಯಾವುದೇ ಉಲ್ಲಂಘನೆಯು ನ್ಯಾಯಾಂಗ ನಿಂದನೆಗೆ ಕಾರಣವಾಗುತ್ತದೆ ಎಂದು ಕೂಡ ಅವರು ಎಚ್ಚರಿಕೆ ನೀಡಿದರು.