ಪಿಎಂಎಲ್‌ಎ ಅಡಿ ಶಾಸಕ ವೀರೇಂದ್ರ ಪಪ್ಪಿ ಬಂಧನ: ಜಾರಿ ನಿರ್ದೇಶನಾಲಯಕ್ಕೆ ಹೈಕೋರ್ಟ್‌ ನೋಟಿಸ್‌

ವೀರೇಂದ್ರ ಅವರ ಬಂಧನವನ್ನು ಕಾನೂನುಬಾಹಿರ ಎಂದು ಘೋಷಿಸಿ, ತಕ್ಷಣವೇ ಅವರನ್ನು ಬಿಡುಗಡೆಗೊಳಿಸಲು ಆದೇಶಿಸುವಂತೆ ಕೋರಿ ಪತ್ನಿ ಚೈತ್ರಾ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ನಡೆಸಿತು.
KC Veerendra
KC Veerendra
Published on

ಆನ್​ಲೈನ್ ಮತ್ತು ಆಫ್‌ಲೈನ್ ಅಕ್ರಮ ಬೆಟ್ಟಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಶಾಸಕ ಕೆ ಸಿ ವೀರೇಂದ್ರ ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್) ಕಾಯಿದೆ ಅಡಿ ಬಂಧಿಸಿರುವ ಕ್ರಮವನ್ನು ಕಾನೂನುಬಾಹಿರ ಎಂದು ಘೋಷಿಸುವಂತೆ ಕೋರಿ ವೀರೇಂದ್ರ ಪತ್ನಿ ಆರ್‌ ಡಿ ಚೈತ್ರಾ ಸಲ್ಲಿಸಿರುವ ಅರ್ಜಿ ಸಂಬಂಧ ಜಾರಿ ನಿರ್ದೇಶನಾಲಯಕ್ಕೆ (ಇ ಡಿ) ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ವೀರೇಂದ್ರ ಅವರ ಬಂಧನವನ್ನು ಕಾನೂನುಬಾಹಿರ ಎಂದು ಘೋಷಿಸಿ, ತಕ್ಷಣವೇ ಅವರನ್ನು ಬಿಡುಗಡೆಗೊಳಿಸಲು ಆದೇಶಿಸುವಂತೆ ಕೋರಿ ಪತ್ನಿ ಚೈತ್ರಾ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಐ ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

Justice M I Arun
Justice M I Arun

ಅರ್ಜಿದಾರೆ ಚೈತ್ರಾ ಪರ ಹಿರಿಯ ವಕೀಲರಾದ ಕಿರಣ್ ಜವಳಿ ಹಾಗೂ ಎಚ್ ಎಸ್ ಚಂದ್ರಮೌಳಿ ಅವರು “ಯಾವುದೇ ಅನುಸೂಚಿತ ಪ್ರಕರಣವಿಲ್ಲದಿದ್ದರೂ (ಪಿಎಂಎಲ್‌ಎ ಕಾಯಿದೆ ಅಡಿ) ವೀರೇಂದ್ರ ಅವರನ್ನು ಬಂಧಿಸಲಾಗಿದೆ. ಬಂಧನಕ್ಕೆ ಸೂಕ್ತ ಕಾರಣಗಳನ್ನು ನೀಡಲಾಗಿಲ್ಲ. ಈಗಾಗಲೇ ಮುಕ್ತಾಯಗೊಂಡಿರುವ ಕೆಲ ಹಳೇ ಪ್ರಕರಣಗಳನ್ನು ಉಲ್ಲೇಖಿಸಲಾಗಿದ್ದು, ಮತ್ತೆ ಕೆಲ ಪ್ರಕರಣಗಳಲ್ಲಿ ವೀರೇಂದ್ರ ಅವರ ವಿರುದ್ಧ ಯಾವುದೇ ನೇರ ಸಾಕ್ಷ್ಯಾಧಾರಗಳಿಲ್ಲ. ಆದ್ದರಿಂದ, ವೀರೇಂದ್ರ ಅವರ ಬಂಧನವೇ ಕಾನೂನುಬಾಹಿರ” ಎಂದು ಆಕ್ಷೇಪಿಸಿದರು.

ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಿದ್ದ ವಕೀಲ ಮಧುಕರ ದೇಶಪಾಂಡೆ ಅವರು “ವೀರೇಂದ್ರ ಅವರ ಬಂಧನದ ಅವಧಿ ಗುರುವಾರ ಮುಕ್ತಾಯವಾಗಲಿದ್ದು, ಅವರನ್ನು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು” ಎಂದು ಮನವಿ ಮಾಡಿದರು. ಇದನ್ನು ಪರಿಗಣಿಸಿದ ಪೀಠವು ಪ್ರತಿವಾದಿ ಇಡಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಸೆಪ್ಟೆಂಬರ್ 8ಕ್ಕೆ ಮುಂದೂಡಿತು.

ಆನ್‌ಲೈನ್‌ ಹಾಗೂ ಆಫ್‌ಲೈನ್‌ ಅಕ್ರಮ ಗೇಮಿಂಗ್‌ ಪ್ರಕರಣ ಸಂಬಂಧ 2022ರ ಜುಲೈ 6ರಂದು ಹಾರೋಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಅದರಲ್ಲಿ ಯಾರೊಬ್ಬರ ಹೆಸರೂ ಉಲ್ಲೇಖವಾಗಿರಲಿಲ್ಲ. ಈ ಎಫ್‌ಐಆರ್‌ ಆಧರಿಸಿ ಇ ಡಿ 2025ರ ಆಗಸ್ಟ್ 21ರಂದು ಇಸಿಐಆರ್‌ ದಾಖಲಿಸಿತ್ತು. ಆಗಸ್ಟ್ 23ರಂದು ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿ ಚಿತ್ರದುರ್ಗದ ಶಾಸಕರಾದ ನನ್ನ ಪತಿ ಕೆ ಸಿ ವೀರೇಂದ್ರ ಅವರನ್ನು ಬಂಧಿಸಲಾಗಿದೆ. ದುರುದ್ದೇಶದಿಂದ ಅವರನ್ನು ಗುರಿಯಾಗಿಸಿ ಇ ಡಿ ಬಂಧಿಸಲಾಗಿದೆ ಎಂದು ಚೈತ್ರಾ ಅರ್ಜಿಯಲ್ಲಿ ಆರೋಪಿಸಿದ್ದಾರೆ.

Also Read
ವೀರೇಂದ್ರ ಪಪ್ಪಿ ಪ್ರಕರಣ: ವಕೀಲ ಅನಿಲ್‌ ಗೌಡ ವಿರುದ್ಧ ಆತುರದ ಕ್ರಮ ಕೈಗೊಳ್ಳದಂತೆ ಇ ಡಿಗೆ ಹೈಕೋರ್ಟ್‌ ಆದೇಶ

ಜೊತೆಗೆ, 10-15 ವರ್ಷಗಳ ಹಿಂದೆ ದಾಖಲಾಗಿದ್ದ ಕ್ರಿಕೆಟ್‌ ಬೆಟ್ಟಿಂಗ್‌ ಮತ್ತು ಜೂಜಾಟ ಪ್ರಕರಣ ಆಧರಿಸಿ ಇಡಿ ಈಗ ತನಿಖೆ ನಡೆಸುತ್ತಿದೆ. ಈ ಪ್ರಕರಣ ಈಗಾಗಲೇ ಮುಕ್ತಾಯಗೊಂಡಿದೆ. ಯಾವುದೇ ಅನುಸೂಚಿತ ಪ್ರಕರಣ (ಪಿಎಂಎಲ್‌ಎ ಕಾಯಿದೆ ಅಡಿ) ಇಲ್ಲದಿದ್ದರೂ ವೀರೇಂದ್ರ ಅವರನ್ನು ಬಂಧಿಸಲಾಗಿದೆ. ಚುನಾವಣೆಯ ವೇಳೆ ನನ್ನ ಪತಿ ಅವರ ಆಸ್ತಿ ವಿವರ ಸಲ್ಲಿಸಿದ್ದಾರೆ. ಲೋಕಾಯುಕ್ತರಿಗೂ ಕಾಲಕಾಲಕ್ಕೆ ಆಸ್ತಿ ವಿವರ ಸಲ್ಲಿಸಿದ್ದಾರೆ. ಅವರ ಬಂಧನಕ್ಕೆ ಸೂಕ್ತ ಕಾರಣಗಳನ್ನು ಇ ಡಿ ನೀಡಿಲ್ಲ. ಇದು ಸಂವಿಧಾನದ 19 ಮತ್ತು 21ನೇ ವಿಧಿ ಅಡಿ ದೊರೆತಿರುವ ಸ್ವಾತಂತ್ರ್ಯ ಮತ್ತು ಜೀವಿಸುವ ಹಕ್ಕಿನ ಉಲ್ಲಂಘನೆಯಾಗಿದೆ. ಆದ್ದರಿಂದ, ವೀರೇಂದ್ರ ಅವರ ಬಂಧನವನ್ನು ಅಕ್ರಮ ಎಂದು ಘೋಷಿಸಿ, ಕೂಡಲೇ ಬಿಡುಗಡೆ ಮಾಡಲು ಇ ಡಿಗೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Kannada Bar & Bench
kannada.barandbench.com