<div class="paragraphs"><p>Karnataka High Court</p></div>

Karnataka High Court

 
ಸುದ್ದಿಗಳು

ಒಕ್ಕಲಿಗರ ಸಂಘದ ಚುನಾವಣೆ: ಮರು ಮತ ಎಣಿಕೆ ಕೋರಿಕೆ; ಸಂಘ, ಚುನಾವಣಾಧಿಕಾರಿಗೆ ಹೈಕೋರ್ಟ್‌ನಿಂದ ನೋಟಿಸ್‌ ಜಾರಿ

Bar & Bench

ರಾಜ್ಯ ಒಕ್ಕಲಿಗರ ಸಂಘಕ್ಕೆ ಡಿಸೆಂಬರ್‌ 12ರಂದು ನಡೆದಿದ್ದ ಚುನಾವಣೆಯಲ್ಲಿ ಚಲಾವಣೆಗೊಂಡಿರುವ ಎಲ್ಲ ಮತಗಳ ಮರು ಎಣಿಕೆ ನಡೆಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ತಕರಾರು ಅರ್ಜಿ ಸಂಬಂಧ ಸಂಘದ ಆಡಳಿತಾಧಿಕಾರಿ ಹಾಗೂ ಚುನಾವಣಾಧಿಕಾರಿಗೆ ಕರ್ನಾಟಕ ಹೈಕೋರ್ಟ್ ಬುಧವಾರ ನೋಟಿಸ್ ಜಾರಿಗೊಳಿಸಿದೆ.

ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಹೆಸರಘಟ್ಟ ಹೋಬಳಿಯ ಕಡತನಮಲೆ ಗ್ರಾಮದ ಕೆ ಆರ್ ಸತೀಶ್ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೂವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್ ನೇತೃತ್ವದ ರಜಾಕಾಲೀನ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ವಾದ ಆಲಿಸಿದ ನ್ಯಾಯಮೂರ್ತಿಗಳು, ಅರ್ಜಿ ಸಂಬಂಧ ರಾಜ್ಯ ಒಕ್ಕಲಿಗರ ಸಂಘದ ಚುನಾವಣಾಧಿಕಾರಿ ಹಾಗೂ ಆಡಳಿತಾಧಿಕಾರಿಗೆ ನೋಟಿಸ್ ಜಾರಿಗೊಳಿಸಿತಲ್ಲದೆ, ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ತುರ್ತು ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.

ರಾಜ್ಯ ಒಕ್ಕಲಿಗರ ಸಂಘಕ್ಕೆ ಡಿಸೆಂಬರ್‌ 12ರಂದು ನಡೆದಿದ್ದ ಚುನಾವಣೆಯಲ್ಲಿ ಒಟ್ಟು 1,40,704 ಮತಗಳು ಚಲಾವಣೆಗೊಂಡಿದ್ದವು. ಡಿಸೆಂಬರ್‌ 15ರಂದು ಮತ ಎಣಿಕೆ ನಡೆದಿತ್ತು. ಆದರೆ, ಮತ ಎಣಿಕೆಗೆ ನಿಯೋಜಿಸಲ್ಪಟ್ಟಿದ್ದ ಸಿಬ್ಬಂದಿ ಚುನಾವಣಾ ಅಭ್ಯರ್ಥಿಗಳನ್ನು ಸಂಪರ್ಕಿಸಿ, ಹೆಚ್ಚುವರಿ ಮತಗಳನ್ನು ಸೇರಿಸಲು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ವಿಚಾರ ಪತ್ರಿಕೆಗಳಲ್ಲೂ ಪ್ರಕಟಗೊಂಡಿದೆ. ಮತ ಎಣಿಕೆಗೆ ನಿಯೋಜಿಸಲ್ಪಟ್ಟ ಸಿಬ್ಬಂದಿ ಅಕ್ರಮವೆಸಗಿದ್ದು, ಇಡೀ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಹಣ ಪಡೆದ ಸಿಬ್ಬಂದಿ ತಮಗೆ ಬೇಕಾದವರಿಗೆ ಹೆಚ್ಚುವರಿ ಮತಗಳನ್ನು ನೀಡುವ ಮೂಲಕ ಇತರರಿಗೆ ಸಿಗಬೇಕಿದ್ದ ಮತಗಳನ್ನು ಉದ್ದೇಶಪೂರ್ವಕವಾಗಿ ಕಡಿಮೆಗೊಳಿಸಿದ್ದಾರೆ. ಮತಗಳ ಮರು ಎಣಿಕೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಚುನಾವಣಾಧಿಕಾರಿಗಳು ಪರಿಗಣಿಸಿಲ್ಲ. ಸಂಪೂರ್ಣ ಪ್ರಕ್ರಿಯೆಯೇ ಸಂಶಯಾಸ್ಪದವಾಗಿದೆ. ಆದ್ದರಿಂದ, ಮತಗಳ ಮರು ಎಣಿಕೆ ನಡೆಸುವಂತೆ ಹಾಗೂ ಮರು ಎಣಿಕೆಯ ಫಲಿತಾಂಶ ಘೋಷಿಸುವಂತೆ ಚುನಾವಣಾಧಿಕಾರಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.