ನಿಗದಿತ ವೇಳಾಪಟ್ಟಿಯಂತೆ ರಾಜ್ಯ ಒಕ್ಕಲಿಗರ ಸಂಘಕ್ಕೆ ಚುನಾವಣೆ ನಡೆಸುವಂತೆ ಶನಿವಾರ ಆದೇಶಿಸಿರುವ ಕರ್ನಾಟಕ ಹೈಕೋರ್ಟ್ ಫಲಿತಾಂಶವು ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಡಲಿದೆ ಎಂದಿದೆ.
ಸಂಘದ ಸದಸ್ಯ ಸ್ಥಾನ ಮತ್ತು ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟ ಆಡಳಿತಾಧಿಕಾರಿಯ ಕ್ರಮ ಪ್ರಶ್ನಿಸಿ ಕೆ ಸಿ ಜಯರಾಮ್ ಸೇರಿ ಆರು ಮಂದಿ ಹಾಗೂ ಮತ್ತಿತರು ಸಲ್ಲಿಸಿದ್ದ ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
“ಶತಮಾನದ ಇತಿಹಾಸ ಹೊಂದಿರುವ ರಾಜ್ಯ ಒಕ್ಕಲಿಗರ ಸಂಘದ ಆಡಳಿತವು ಸರ್ಕಾರದಿಂದ ನೇಮಿಸಲ್ಪಟ್ಟ ಆಡಳಿತಾಧಿಕಾರಿಯಿಂದ ನಿರ್ವಹಿಸಲ್ಪಡುವುದು ನ್ಯಾಯೋಚಿತವಲ್ಲ. ಸಂಘದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಯಾಗಬೇಕು. ಅದಕ್ಕಾಗಿ ಚುನಾವಣೆ ನಡೆಯಬೇಕು. ಸಂಘಕ್ಕೆ ಚುನಾವಣೆ ನಡೆಸುವಂತೆ ಹೈಕೋರ್ಟ್ ಹಲವು ಬಾರಿ ನಿರ್ದೇಶನಗಳನ್ನು ನೀಡಿದ್ದು, ಈಗಾಗಲೇ ವೇಳಾಪಟ್ಟಿ ಸಹ ಪ್ರಕಟಗೊಂಡಿದೆ. ಈ ಹಂತದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದು ಸರಿಯಲ್ಲ. ಆದ್ದರಿಂದ, ಮೊದಲು ನಿಗದಿತ ವೇಳಾಪಟ್ಟಿಯಂತೆ ಚುನಾವಣೆ ನಡೆಯಬೇಕು. ಉಳಿದ ವಿಚಾರಗಳನ್ನು ನಂತರ ಸುದೀರ್ಘವಾಗಿ ಪರಾಮರ್ಶಿಸಲಾಗುವುದು. ಚುನಾವಣೆಯ ಫಲಿತಾಂಶವು ನ್ಯಾಯಾಲಯ ನೀಡುವ ಅಂತಿಮ ತೀರ್ಪಿಗೆ ಒಳಪಡಲಿದೆ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
“ಚುನಾವಣೆಗಾಗಿ ಭಾರಿ ಮೊತ್ತದ ಹಣ ವೆಚ್ಚ ಮಾಡಲಾಗುತ್ತಿದೆ ಎಂದು ಮತ್ತೊಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ. ಈ ವಿಚಾರವಾಗಿ ನಿರ್ದೇಶನ ನೀಡಲು ನ್ಯಾಯಾಲಯ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿದೆ. ಏಕೆಂದರೆ, ಚುನಾವಣಾ ವೆಚ್ಚದ ಕುರಿತು ಸಂಘದ ಹಿರಿಯರು ಮತ್ತು ಚುನಾವಣೆಗೆ ಸ್ಪರ್ಧಿಸಿದವರು ತಮ್ಮ ವಿವೇಕ ಮತ್ತು ವಿವೇಚನೆಯಿಂದ ಆಲೋಚಿಸಬೇಕು. ಆದರೆ, ಚುನಾವಣಾ ವೆಚ್ಚದ ಬಗ್ಗೆ ಚುನಾವಣಾಧಿಕಾರಿ ಮತ್ತು ಆಡಳಿತಾಧಿಕಾರಿ ಸಂಪೂರ್ಣ ಲೆಕ್ಕ ಇಡಬೇಕು. ಇಲ್ಲದಿದ್ದರೆ ನ್ಯಾಯಾಲಯ ಅದನ್ನು ಗಂಭೀರವಾಗಿ ಪರಿಗಣಿಸಲಿದೆ” ಎಂದು ಪೀಠ ಎಚ್ಚರಿಸಿದೆ.
“ರಾಜ್ಯದಲ್ಲಿ ಜಿಲ್ಲೆಗಳ ಸಂಖ್ಯೆ ವಿಸ್ತರಣೆಯಾಗಿರುವುದರಿಂದ ಸಂಘದ ಸದಸ್ಯರ ಸಂಖ್ಯೆಯೂ ಹೆಚ್ಚಾಗಿದೆ. ಆದ್ದರಿಂದ, ಸಂಘದ ಬೈಲಾದಲ್ಲಿ ತಿದ್ದುಪಡಿ ತರುವ ಅವಶ್ಯಕತೆಯಿದೆ ಅಲ್ಲಿವರೆಗೆ ಚುನಾವಣೆ ನಡೆಸಬಾರದು ಎಂದು ಮತ್ತೊಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಆದರೆ, ಈಗಾಗಲೇ ವೇಳಾಪಟ್ಟಿ ಪ್ರಕಟಗೊಂಡಿರುವುದರಿಂದ ಚುನಾವಣೆಗೆ ತಡೆ ನೀಡಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಹೇಳಿದೆ.