ED and Karnataka HC 
ಸುದ್ದಿಗಳು

ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣ: ಇ ಡಿ ಅಧಿಕಾರಿಗಳ ವಿರುದ್ಧದ ತನಿಖೆಗೆ ಹೈಕೋರ್ಟ್‌ ತಡೆ

Bar & Bench

ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗೆ ವಿಚಾರಣೆಯ ನೆಪದಲ್ಲಿ ಬೆದರಿಕೆ ಹಾಕಿದ ಪ್ರಕರಣದಲ್ಲಿ ಆರೋಪಿಗಳಾಗಿರುವ ಜಾರಿ ನಿರ್ದೇಶನಾಲಯದ ಇಬ್ಬರು ಅಧಿಕಾರಿಗಳ ವಿರುದ್ಧದ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ತಡೆ ನೀಡಿದೆ.

ಜಾರಿ ನಿರ್ದೇಶನಾಲಯದ ಉಪ ನಿರ್ದೇಶಕ ಮನೋಜ್‌ ಮಿತ್ತಲ್‌ ಮತ್ತು ಸಹಾಯಕ ನಿರ್ದೇಶಕ ಮುರಳಿ ಕಣ್ಣನ್‌ ವಿರುದ್ಧದ ತನಿಖೆಗೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತಡೆ ನೀಡಿದೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧದ ತನಿಖೆಗೆ ತಡೆ ವಿಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆ ವೇಳೆಗೆ ತನಿಖೆಗೆ ಸಂಬಂಧಿಸಿದ ಸಂಪೂರ್ಣ ದಾಖಲೆಯನ್ನು ಜಾರಿ ನಿರ್ದೇಶನಾಲಯ ಸಲ್ಲಿಸಬೇಕು. ರಾಜ್ಯ ಸರ್ಕಾರವು ಆಕ್ಷೇಪಣೆ ಸಲ್ಲಿಸಬೇಕು. ವಿಚಾರಣೆಯನ್ನು ಆಗಸ್ಟ್‌ 21ಕ್ಕೆ ಮುಂದೂಡಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

ಜಾರಿ ನಿರ್ದೇಶನಾಲಯ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅರವಿಂದ್‌ ಕಾಮತ್‌ ಅವರು “ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ನಿರ್ದೇಶಕ ಬಿ ಕಲ್ಲೇಶ್‌ ಅವರ ಮನೆಯಲ್ಲಿ ಜುಲೈ 18ರಂದು ಶೋಧ ನಡೆಸಿದಾಗ ಆರೋಪಕ್ಕೆ ಗುರಿಪಡಿಸುವಂತಹ ದಾಖಲೆಗಳು ಸಿಕ್ಕಿವೆ. ಇದರಲ್ಲಿ ಮೇಲಸ್ತರದಲ್ಲಿ ಇರುವವರು ಭಾಗಿಯಾಗಿರುವ ಸಾಧ್ಯತೆ ಇದೆ. ಜುಲೈ 16ರಂದು ಅವರ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು” ಎಂದು ವಿವರಿಸಿದರು.

ಮುಂದುವರಿದು, “ನೀವು ನಮ್ಮ ವಿರುದ್ಧ ತನಿಖೆ ಮುಂದಾದರೆ ನಾವು ನಿಮ್ಮನ್ನು ಕ್ರಿಮಿನಲ್‌ ಪ್ರಕರಣದಲ್ಲಿ ಸಿಲುಕಿಸುತ್ತೇವೆ ಎಂದು ರಾಜ್ಯ ಸರ್ಕಾರ ಇ ಡಿ ಅಧಿಕಾರಿಗಳಿಗೆ ಹೇಳುತ್ತಿದೆ. ರಾಜ್ಯ ಸರ್ಕಾರದ ನಡೆ ಹೀಗೆ ಇರಬಹುದೇ? ನಮ್ಮಲ್ಲಿ ಪ್ರಮುಖ ಸಾಕ್ಷ್ಯಗಳಿವೆ. ದೂರುದಾರ ಕಲ್ಲೇಶ್‌ ಅವರು ಇ ಡಿ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ. ಆದರೆ, ದೂರು ದಾಖಲಿಸುವಾಗ ಶಾಂತಿ ಭಂಗದ ಅಡಿ ಪ್ರಕರಣ ದಾಖಲಿಸಲಾಗಿದೆ. ಇಲ್ಲಿ ತಪ್ಪಾಗಿ ಸೆಕ್ಷನ್‌ ಅನ್ವಯಿಸಲಾಗಿದೆ. ದೂರುದಾರ ಕಲ್ಲೇಶ್‌ ಅವರು ಸುಶಿಕ್ಷಿತ ಮತ್ತು ಉನ್ನತ ಸ್ಥಾನದಲ್ಲಿದ್ದು, ಆರು ದಿನಗಳ ಬಳಿಕ ಪ್ರಕರಣ ದಾಖಲಿಸಿದ್ದಾರೆ. ಇ ಡಿ ಅಧಿಕಾರಿಗಳು ಬೆದರಿಕೆ ಹಾಕಿದ್ದರೆ ಅಂದು ಸಂಜೆಯೇ ವಿಲ್ಸನ್‌ ಗಾರ್ಡನ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಬಹುದಿತ್ತು. ಇದು ತನಿಖೆ ಹಳ್ಳ ಹಿಡಿಸಲು ರೂಪಿಸಿರುವ ದುಷ್ಟ ತಂತ್ರವಾಗಿದೆ” ಎಂದು ಆಪಾದಿಸಿದರು.

ರಾಜ್ಯ ಸರ್ಕಾರದ ಪರವಾಗಿ ವಾದಿಸಿದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಕಲ್ಲೇಶ್‌ ಅವರು ಜುಲೈ 18ರಂದು ದೂರು ದಾಖಲಿಸಿದ್ದಾರೆ. ಮ್ಯಾಜಿಸ್ಟ್ರೇಟ್‌ ಅನುಮತಿಸಲು ತಡವಾಗಿರುವುದರಿಂದ ದೂರು ದಾಖಲಿಸುವುದು ವಿಳಂಬವಾಗಿದೆ. ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣದ ತನಿಖೆಯನ್ನು ಎಸ್‌ಐಟಿ ಹೆಚ್ಚುಕಡಿಮೆ ಪೂರ್ಣಗೊಳಿಸಿದೆ. ಈಗ ಸಿಬಿಐ ಬಂದಿದೆ. ಸಿಬಿಐ ತನಿಖೆ ಆರಂಭಿಸುವುದಕ್ಕೆ ಮೊದಲೇ ಇ ಡಿ ಬಂದಿದೆ. ನೀವು ಸಿಎಂ ಹೆಸರು ಉಲ್ಲೇಖಿಸದೆ ಇದ್ದರೆ ನಾವು ನಿಮ್ಮನ್ನು ಬಿಡುವುದಿಲ್ಲ ಎಂದು ಇ ಡಿ ಅಧಿಕಾರಿಗಳು ಕಲ್ಲೇಶ್‌ ಅವರನ್ನು ಬೆದರಿಸಿದ್ದಾರೆ. ಇ ಡಿಯು ಕಲ್ಲೇಶ್‌ ವಿಚಾರಣೆಯ ಸಿಸಿಟಿವಿ ದಾಖಲೆ ನ್ಯಾಯಾಲಯಕ್ಕೆ ಸಲ್ಲಿಸಲಿ. ಯಾವೆಲ್ಲಾ ಪ್ರಶ್ನೆಗಳನ್ನು ಕೇಳಿದ್ದಾರೆ, ಯಾವ ಕೊಠಡಿಗೆ ಕರೆದೊಯ್ದಿದ್ದಾರೆ ಎಂಬುದನ್ನು ತೋರಿಸಲಿ. ಈಗ ತನಿಖೆಗೆ ತಡೆ ವಿಧಿಸಬಾರದು” ಎಂದು ಬಲವಾಗಿ ಪ್ರತಿಪಾದಿಸಿದರು.

“ಇ ಡಿ ಅಧಿಕಾರಿ ಮನೋಜ್‌ ಮಿತ್ತಲ್‌ ಅವರು ಐದು ಲಕ್ಷ ಲಂಚ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಸಿಬಿಐ ಪ್ರಕರಣ ದಾಖಲಿಸಿದೆ. ಜಪ್ತಿ ಮಾಡಿದ್ದ ಖಾತೆ ಸ್ವತಂತ್ರಗೊಳಿಸಲು ಮನೋಜ್‌ ಮಿತ್ತಲ್‌ ಲಂಚ ಪಡೆದಿದ್ದಾರೆ. ಈ ಅಧಿಕಾರಿಯ ಹಿಂದಿನ ದಾಖಲೆಯನ್ನು ನೋಡಬೇಕು. ಅವರ ಹಿನ್ನೆಲೆ ನೋಡಿದರೆ ಅವರು ಯಾವುದೇ ಮಟ್ಟಕ್ಕೆ ಹೋಗಬಹುದು. ಇ ಡಿ ಅಧಿಕಾರಿಗಳು ತಮ್ಮ ಕರ್ತವ್ಯ ನಿಭಾಯಿಸಿದ್ದಾರೆಯೇ ಇಲ್ಲವೇ ಎಂಬುದನ್ನು ಪತ್ತೆ ಮಾಡಬೇಕಿದೆ. ಇದು ಸಂಜ್ಞೇಯರಹಿತ ಅಪರಾಧವಾಗಿದ್ದು, ಅವರನ್ನು ಬಂಧಿಸುವುದಿಲ್ಲ. ಆದರೆ, ತನಿಖೆ ನಡೆಯಲಿ. ತನಿಖಾಧಿಕಾರಿ ವಿಚಾರಣೆಯ ಸಂದರ್ಭದಲ್ಲಿ ಏನಾದರೂ ಮಾಡಬಹುದೇ? ಸಾರ್ವಜನಿಕರು ದೂರು ದಾಖಲಿಸುವ ಹಾಗೆ ಇಲ್ಲವೇ?  ಪ್ರಕರಣ ದಾಖಲಾಗಲಿ, ಬಿಡಲಿ ತನಿಖಾಧಿಕಾರಿ ಸಾಕ್ಷಿಗೆ ಬೆದರಿಕೆ ಹಾಕುವಂತಿಲ್ಲ. ಅದು ಇ ಡಿ, ಸಿಬಿಐ ಅಥವಾ ಬೇರಾವುದೇ ತನಿಖಾ ಸಂಸ್ಥೆಯಾಗಬಹುದು” ಎಂದರು.

ಈ ಮಧ್ಯೆ, ನ್ಯಾ. ನಾಗಪ್ರಸನ್ನ ಅವರು ಎಜಿ ಅವರನ್ನು ಕುರಿತು “ಇ ಡಿ ಗೆ ತನಿಖೆ ನಡೆಸಲು ಸಿಬಿಐ ಅಥವಾ ಬೇರಾವುದೇ ಅನುಮತಿ ಬೇಕಿಲ್ಲ. ತನಿಖೆ ನಡೆಸುತ್ತಿರುವ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಪ್ರತಿಯೊಬ್ಬ ಅಧಿಕಾರಿಯು ತನ್ನ ಕರ್ತವ್ಯ ನಿಭಾಯಿಸಿದ್ದಾನೆಯೇ ಎಲ್ಲವೇ ಎಂದು ನೋಡುತ್ತಾ ಹೋದರೆ ಯಾರೂ ಸುರಕ್ಷಿತವಾಗಿ ಉಳಿಯುವುದಿಲ್ಲ. ವಿಚಾರಣೆಯಲ್ಲಿ ಭಾಗಿಯಾದ ಯಾವುದೇ ವ್ಯಕ್ತಿ ತನಗೆ ಬೆದರಿಕೆ ಹಾಕಲಾಗಿದೆ ಎಂದೇ ಹೇಳುತ್ತಾರೆ. ಇ ಡಿ ಅಧಿಕಾರಿಗಳು ವಿಚಾರಣೆಯ ಸಿಸಿಟಿವಿ ದಾಖಲೆ ಸಲ್ಲಿಸುವುದನ್ನು ನ್ಯಾಯಾಲಯ ಪರಿಶೀಲಿಸಲಿದೆ. ಪ್ರಕರಣ ದಾಖಲಿಸಿದ ಬಳಿಕ ಅಧಿಕಾರಿ ಕಲ್ಲೇಶ್‌ ಅವರನ್ನು ಇ ಡಿ ಅಧಿಕಾರಿಗಳು ಕಾಫಿ ಕುಡಿಯಲು ಅಥವಾ ಮಾಲ್‌ಗೆ ಕರೆದಿರಲಿಲ್ಲ. ಸಿಎಂ ಹೆಸರು ಹೇಳದಿದ್ದರೆ ನಿಮ್ಮನ್ನು ಸಿಲುಕಿಸಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ ಎಂಬುದು ಹೊಸ ಪರಿಕಲ್ಪನೆ!” ಎಂದು ಹೇಳಿದರು.

“ನಾಳೆ ಪ್ರತಿಯೊಬ್ಬರು ತನಿಖಾಧಿಕಾರಿ ಬೆದರಿಕೆ ಹಾಕಿದ್ದಾರೆ ಎಂದು ಏನು ಮಾಡುವುದು. ಈ ತರದ ಅನ್ವೇಷಿತ, ಸಿನಿಮಾ ಐಡಿಯಾಗಳಿಗೆ ಅನುಮತಿ ನೀಡಲಾಗದು. ಅಡ್ವೊಕೇಟ್‌ ಜನರಲ್‌ ಈ ರೀತಿ ವಾದಿಸಿದರೆ ನಾಳೆ ಯಾವುದೇ ತನಿಖಾಧಿಕಾರಿ ಸುರಕ್ಷಿತವಾಗಿರುವುದಿಲ್ಲ. ಇ ಡಿ ಅಧಿಕಾರಿಗಳ ವಿರುದ್ಧ ಸರ್ಕಾರ ಏಕೆ ದೂರು ದಾಖಲಿಸುತ್ತಿದೆ? ತನಿಖೆ ನಡೆಸುವ ಅಧಿಕಾರಿಗಳು ಇ ಡಿ, ಸಿಬಿಐ ಅಥವಾ ರಾಜ್ಯದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವುದು ಸರಿಯಲ್ಲ. ನಿಮಗೆ ಆಕ್ಷೇಪವಿದ್ದರೆ ಇಡೀ ಪ್ರಕ್ರಿಯೆ ಪ್ರಶ್ನಿಸಬಹುದು” ಎಂದರು.

ಆಗ ಎಜಿ ಶೆಟ್ಟಿ ಅವರು “ಹಾಗೆಂದರೆ ಇ ಡಿಯನ್ನು ತಪ್ಪಿಸಿಕೊಂಡು ಹೋಗಲು ಬಿಡಬೇಕೆ? ಕೆಲವು ವ್ಯಕ್ತಿಗಳನ್ನು ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸಲಾಗುತ್ತಿದೆ. ಇದು ಮೋಡಸ್‌ ಅಪರೆಂಡಿ. (ಬೆಳಗಿನ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಪ್ರಕರಣ ಉಲ್ಲೇಖಿಸಿ) ಬ್ಯಾಂಕ್‌ ಪರವಾಗಿ ಅಟಾರ್ನಿ ಜನರಲ್‌ ವೆಂಕಟರಮಣಿ ವಾದಿಸುತ್ತಾರೆ. ಎಸ್‌ಐಟಿ ಶೇ. 99ರಷ್ಟು ತನಿಖೆ ಮುಗಿಸಿದೆ. ಈಗ ಸಿಬಿಐ ತನಿಖೆಗೆ ಕೇಳುತ್ತಾರೆ ಎಂಬುದು ಸಾಕಷ್ಟು ವಿಚಾರವನ್ನು ತಿಳಿಸುತ್ತದೆ ಮೈ ಲಾರ್ಡ್‌” ಎಂದು ನ್ಯಾಯಾಲಯದ ಗಮನಸೆಳೆಯಲು ನಡೆಸಿದ ಪ್ರಯತ್ನಕ್ಕೆ ನ್ಯಾ. ನಾಗಪ್ರಸನ್ನ ಅವರು ಸಮ್ಮತಿಸಲಿಲ್ಲ. ಇಷ್ಟೆಲ್ಲಾ ಇದ್ದರೆ ಬಾಧಿತರು ಪ್ರತ್ಯೇಕವಾಗಿ ಇ ಡಿ ಪ್ರಕ್ರಿಯೆಯನ್ನು ಪ್ರಶ್ನಿಸಬಹುದು ಎಂದು ಇ ಡಿ ಅಧಿಕಾರಿಗಳ ವಿರುದ್ಧದ ತನಿಖೆಗೆ ತಡೆ ವಿಧಿಸಿದರು.

ಪ್ರಕರಣದ ಹಿನ್ನೆಲೆ: ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ನಿರ್ದೇಶಕ ಕಲ್ಲೇಶ್‌ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣದ ವಿಚಾರಣೆಗಾಗಿ ಸಮನ್ಸ್‌ ಜಾರಿ ಮಾಡಿದ್ದ ಇ ಡಿ ಅಧಿಕಾರಿಗಳು ಪ್ರಕರಣದಲ್ಲಿ ಸಿಲುಕಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಪ್ರಮುಖ ಹೆಸರು ಹೇಳುವಂತೆ ಬೆದರಿಕೆ ಹಾಗೂ ಒತ್ತಡ ಹಾಕಿದ್ದಾರೆ ಎಂದು ಬೆಂಗಳೂರಿನ ವಿಲ್ಸನ್‌ ಗಾರ್ಡನ್‌ ಠಾಣೆಗೆ ಮನೋಜ್‌ ಮಿತ್ತಲ್‌ ಮತ್ತು ಮುರಳಿ ಕಣ್ಣನ್‌ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇ ಡಿ ಅಧಿಕಾರಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳಾದ 3(5), 351(2) ಮತ್ತು 352 ಅಡಿ ಪ್ರಕರಣ ದಾಖಲಿಸಲಾಗಿದೆ.