Karnataka Maharshi Valmiki Scheduled Tribes Development Corporation Limited 
ಸುದ್ದಿಗಳು

ವಾಲ್ಮೀಕಿ ನಿಗಮದ ಚಂದ್ರಶೇಖರನ್‌ ಆತ್ಮಹತ್ಯೆ: ಶಿವಮೊಗ್ಗ ನ್ಯಾಯಾಲಯಕ್ಕೆ 300 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ ಎಸ್‌ಐಟಿ

Bar & Bench

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ (ಕೆಎಂವಿಎಸ್‌ಟಿಡಿಸಿಎಲ್‌) ಲೆಕ್ಕಾಧೀಕ್ಷಕ ಪಿ ಚಂದ್ರಶೇಖರನ್‌ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳವು 300 ಪುಟಗಳ ಆರೋಪ ಪಟ್ಟಿಯನ್ನು ಶಿವಮೊಗ್ಗದ ಜಿಲ್ಲಾ ನ್ಯಾಯಾಲಯಕ್ಕೆ ಗುರುವಾರ ಸಲ್ಲಿಸಿದೆ.

ಶಿವಮೊಗ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ ಆರ್‌ ಪಲ್ಲವಿ ಅವರಿಗೆ ತನಿಖಾಧಿಕಾರಿಯು ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ.

ಪ್ರಕರಣದಲ್ಲಿ ಕೆಎಂವಿಎಸ್‌ಟಿಡಿಸಿಎಲ್‌ ವ್ಯವಸ್ಥಾಪಕ ಜೆ ಬಿ ಪದ್ಮನಾಭ್‌ ಮತ್ತು ಲೆಕ್ಕಾಧೀಕ್ಷಕ ಪರಶುರಾಮ ದುರ್ಗಣ್ಣನವರ್‌ ಅವರನ್ನು ಆರೋಪಿಗಳನ್ನಾಗಿಸಲಾಗಿದೆ. ಈ ಇಬ್ಬರೂ ಅಧಿಕಾರಿಗಳನ್ನು ಸರ್ಕಾರವು ಅಮಾನತುಗೊಳಿಸಿದೆ. ಚಂದ್ರಶೇಖರನ್‌ ಪತ್ನಿ ಕವಿತಾ ಅವರು ನೀಡಿದ ದೂರಿನ ಅನ್ವಯ ಶಿವಮೊಗ್ಗದ ವಿನೋಬನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 306 ಜೊತೆಗೆ 34ರ ಅಡಿ ಪ್ರಕರಣ ದಾಖಲಿಸಲಾಗಿದೆ.

ಗಮನಾರ್ಹ ಅಂಶವೆಂದರೆ, ಮಾಜಿ ಸಚಿವ ನಾಗೇಂದ್ರ, ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ ಇನ್ನಿತರರ ಹೆಸರು ಆರೋಪಪಟ್ಟಿಯಲ್ಲಿ ಇಲ್ಲ ಎಂದು ತಿಳಿದು ಬಂದಿದೆ.

ರಾಜ್ಯ ಸರ್ಕಾರವು ಮೇ 31ರಂದು ಸಿಐಡಿಯ ಎಸ್‌ಐಟಿಗೆ ಪ್ರಕರಣ ವರ್ಗಾಯಿಸಿತ್ತು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಒಟ್ಟು 8 ಪ್ರಕರಣಗಳು ದಾಖಲಾಗಿದ್ದು, ಎಲ್ಲವನ್ನೂ ಎಸ್‌ಐಟಿ ತನಿಖೆ ನಡೆಸುತ್ತಿದೆ.

ಪ್ರಕರಣದ ಹಿನ್ನೆಲೆ: ಸಚಿವರಾಗಿದ್ದ ಬಿ ನಾಗೇಂದ್ರ ಅವರ ಮೌಖಿಕ ಸೂಚನೆಯಂತೆ ನಿಗಮದ ಹಣವನ್ನು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ವ್ಯವಸ್ಥಾಪಕ ಜೆ ಬಿ ಪದ್ಮನಾಭ್‌ ಮತ್ತು ಲೆಕ್ಕಾಧೀಕ್ಷಕ ಪರಶುರಾಮ ದುರ್ಗಣ್ಣನವರ್‌ ವರ್ಗಾಯಿಸಿದ್ದಾರೆ. ತಮ್ಮ ಸಾವಿಗೆ ಪದ್ಮನಾಭ್‌ ಮತ್ತು ದುರ್ಗಣ್ಣನವರ್‌ ಹಾಗೂ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮುಖ್ಯ ವ್ಯವಸ್ಥಾಪಕಿ ಶುಚಿಸ್ಮತಾ ರವುಲ್‌ ಕಾರಣ ಎಂದು ಚಂದ್ರಶೇಖರನ್‌ ಸಾವಿನ ಉಯಿಲು ಬರೆದಿಟ್ಟು ಮೇ 26ರಂದು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದರು. ಆನಂತರ ಇಡೀ ಹಗರಣ ಬಟಾಬಯಲಾಗಿತ್ತು.