ED and Bengaluru city civil court 
ಸುದ್ದಿಗಳು

ವಾಲ್ಮೀಕಿ ನಿಗಮದ ಹಗರಣ: ನೆಕ್ಕಂಟಿ ನಾಗರಾಜ್‌ ಸೇರಿ ನಾಲ್ವರ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿದ ವಿಶೇಷ ನ್ಯಾಯಾಲಯ

ಆರನೇ ಆರೋಪಿ ನೆಕ್ಕಂಟಿ ನಾಗರಾಜ್‌, 8ನೇ ಆರೋಪಿ ಬಿ ವಿಜಯ ಕುಮಾರ್‌ಗೌಡ, 23ನೇ ಆರೋಪಿ ಬಿ ರಮೇಶ್‌ ಅಲಿಯಾಸ್‌ ಎನ್‌ ರಮೇಶ್‌ ಮತ್ತು 25ನೇ ಆರೋಪಿ ಎಡರ ರುದ್ರಯ್ಯ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿದ ನ್ಯಾಯಾಲಯ.

Bar & Bench

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (ಕೆಎಂವಿಎಸ್‌ಟಿಡಿಸಿಎಲ್‌) ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ ₹95 ಕೋಟಿ ಹಣ ವರ್ಗಾಯಿಸಿರುವ ಪ್ರಕರಣದಲ್ಲಿ ಮಾಜಿ ಸಚಿವ ಬಿ ನಾಗೇಂದ್ರ ಆಪ್ತ ಸಹಾಯಕ ನೆಕ್ಕಂಟಿ ನಾಗರಾಜ್‌ ಸೇರಿ ನಾಲ್ವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ವಜಾ ಮಾಡಿದೆ.

ಪ್ರಕರಣದಲ್ಲಿ 6ನೇ ಆರೋಪಿ ನೆಕ್ಕಂಟಿ ನಾಗರಾಜ್‌, 8ನೇ ಆರೋಪಿ ಬಿ ವಿಜಯ ಕುಮಾರ್‌ ಗೌಡ, 23ನೇ ಆರೋಪಿ ಬಿ ರಮೇಶ್‌ ಅಲಿಯಾಸ್‌ ಎನ್‌ ರಮೇಶ್‌ ಮತ್ತು 25ನೇ ಆರೋಪಿ ಎಡರ ರುದ್ರಯ್ಯ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ತಿರಸ್ಕರಿಸಿದ್ದಾರೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಜಾರಿ ನಿರ್ದೇಶನಾಲಯವು ನಾಗೇಂದ್ರ ಸೇರಿ ಹಲವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯಿದೆ ಸೆಕ್ಷನ್‌ 3 ಮತ್ತು 4ರ ಅಡಿ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸುತ್ತಿದೆ. 25 ಆರೋಪಿಗಳ ವಿರುದ್ಧ ಜಾರಿ ನಿರ್ದೇಶನಾಲಯವು 4,970 ಪುಟಗಳ ಆರೋಪ ಪಟ್ಟಿ ಹಾಗೂ 144 ಪುಟಗಳ ದೂರನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.