ವಾಲ್ಮೀಕಿ ನಿಗಮದ ಹಗರಣ: ಶಾಸಕ ನಾಗೇಂದ್ರ ಸೇರಿ 25 ಆರೋಪಿಗಳ ವಿರುದ್ಧ 4,970 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ ಇ ಡಿ

ನಿಗಮದ ಖಾತೆಯಿಂದ ಒಟ್ಟಾರೆ 84 ಕೋಟಿಯ ಅಕ್ರಮವಾಗಿ ಬಳಕೆ ಮಾಡಲಾಗಿದೆ. ಮಾಜಿ ಸಚಿವ ನಾಗೇಂದ್ರ ಅವರು ನಕಲಿ ಖಾತೆ ಸೃಷ್ಟಿಸಲು ಸೂಚಿಸಿ, ಹಣ ವರ್ಗಾವಣೆ ಮಾಡಲು ನಿರ್ದೇಶಿಸಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ ಎನ್ನಲಾಗಿದೆ.
ED and B Nagendra
ED and B Nagendra
Published on

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (ಕೆಎಂವಿಎಸ್‌ಟಿಡಿಸಿಎಲ್‌) ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ ₹95 ಕೋಟಿ ಹಣ ವರ್ಗಾಯಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ ನಾಗೇಂದ್ರ ಸೇರಿ 25 ಆರೋಪಿಗಳ ವಿರುದ್ಧ ಜಾರಿ ನಿರ್ದೇಶನಾಲಯವು 4,970 ಪುಟಗಳ ಆರೋಪ ಪಟ್ಟಿ ಹಾಗೂ 144 ಪುಟಗಳ ದೂರನ್ನು ಸೋಮವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಅಕ್ರಮ ಹಣ ವರ್ಗಾವಣೆ ಕಾಯಿದೆಯ ಸೆಕ್ಷನ್‌ 3 ಮತ್ತು 4ರ ಅಡಿ ಜಾರಿ ನಿರ್ದೇಶನಾಲಯವು ವಿಸ್ತೃತ ತನಿಖೆ ನಡೆಸಿ ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ಅವರಿಗೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ಪ್ರಕರಣದಲ್ಲಿ ಬಳ್ಳಾರಿ ಗ್ರಾಮೀಣ ಶಾಸಕರಾಗಿರುವ ನಾಗೇಂದ್ರ ಮೊದಲನೇ ಆರೋಪಿಯಾಗಿದ್ದು, ಸತ್ಯನಾರಾಯಣ ವರ್ಮ (ಬ್ರೋಕರ್) ಎರಡನೇ ಆರೋಪಿ, ಮೂರನೇ ಆರೋಪಿಯಾಗಿ ಸತ್ಯನಾರಾಯಣ ವರ್ಮ ಏಕತಾರಿ (ಫಸ್ಟ್ ಬ್ಯಾಂಕ್ ಮಾಲೀಕ), ನಾಲ್ಕನೇ ಆರೋಪಿಯಾಗಿ ಜೆ ಜಿ ಪದ್ಮನಾಭ (ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕ) ಅವರನ್ನು ಹೆಸರಿಸಲಾಗಿದೆ.

ನಿಗಮದ ಖಾತೆಯಿಂದ ಒಟ್ಟಾರೆ 84 ಕೋಟಿಯ ಅಕ್ರಮವಾಗಿ ಬಳಕೆ ಮಾಡಲಾಗಿದೆ. ಮಾಜಿ ಸಚಿವ ನಾಗೇಂದ್ರ ಅವರು ನಕಲಿ ಖಾತೆ ಸೃಷ್ಟಿಸಲು ಸೂಚಿಸಿ, ಹಣ ವರ್ಗಾವಣೆ ಮಾಡಲು ನಿರ್ದೇಶಿಸಿದ್ದಾರೆ. ನಾಗೇಂದ್ರ ಸೂಚನೆಯಂತೆ ಪದ್ಮನಾಭರಿಂದ ಹಣ ವರ್ಗಾವಣೆಯಾಗಿದೆ. ಈ ಪ್ರಕರಣದಲ್ಲಿ ನಾಗೇಂದ್ರ ಒಳಸಂಚು ರೂಪಿಸಿದ್ದು, ಆನಂತರ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ್ದಾರೆ. ಆನಂತರ ವಸಂತ ನಗರದ ಶಾಂಗ್ರೀಲಾ ಹೋಟೆಲ್‌ನಲ್ಲಿ ನಾಗೇಂದ್ರ ಸಭೆ ನಡೆಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮನಕ್ಕೆ ಪದ್ಮನಾಭ ಅವರನ್ನು ನಾಗೇಂದ್ರ ಆಪ್ತನಾದ ನೆಕ್ಕಂಟಿ ನಾಗರಾಜ್‌ ಮೂಲಕ ನೇಮಕ ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಬಳಕೆ ಮಾಡಲಾಗಿದೆ. ನಾಗೇಂದ್ರನ ಆಪ್ತ ಸಹಾಯಕನಾದ 8ನೇ ಆರೋಪಿ ವಿಜಯ್ ಕುಮಾರ್ ಮೊಬೈಲಿನಲ್ಲಿ ಹಣದ ಮೊತ್ತ, ಯಾರಿಗೆಲ್ಲಾ ಪೂರೈಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಬಳ್ಳಾರಿ ಲೋಕಸಭಾ ಚುನಾವಣೆಗೆ 20.19 ಕೋಟಿ ರೂಪಾಯಿ ಬಳಕೆ ಮಾಡಲಾಗಿದೆ ಎಂದು ವಿವರಿಸಲಾಗಿದೆ. ಈ ಸಂಬಂಧ ಎಲ್ಲಾ ಆರೋಪಿಗಳ ಹೇಳಿಕೆ ದಾಖಲಿಸಲಾಗಿದೆ ಎನ್ನಲಾಗಿದೆ.

ಪ್ರಕರಣದಲ್ಲಿ ಸದ್ಯ 15 ಸಾಕ್ಷಿಗಳ ಕಲೆ ಹಾಕಲಾಗಿದ್ದು, ನಾಗೇಂದ್ರ 5.26 ಕೋಟಿ ರೂಪಾಯಿ ಬಳಕೆ ಮಾಡಿದ್ದಾರೆ. ಆದರೆ, ಈ ಸಂಬಂಧ ಉತ್ತರಿಸಲು ನಾಗೇಂದ್ರ ನಿರಾಕರಿಸಿದ್ದಾರೆ. ಸಣ್ಣ ಕೆಲಸಗಳಿಗೆ ಹೆಚ್ಚಿನ ಮೊತ್ತದ ನಕಲಿ ಬಿಲ್‌ಗಳನ್ನು ಸೃಷ್ಟಿಸಲಾಗಿದೆ. ಹಗರಣದಲ್ಲಿ ಆರ್ಥಿಕ ಇಲಾಖೆ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಜಾರಿ ನಿರ್ದೇಶನಾಲಯ ಸಂಶಯ ವ್ಯಕ್ತಪಡಿಸಿದೆ ಎನ್ನಲಾಗಿದೆ.

ಕಳೆದ ಆಗಸ್ಟ್‌ 6ರಂದು ಕೆಎಂವಿಎಸ್‌ಟಿಡಿಸಿಎಲ್‌ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ರಾಜ್ಯ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ದಳವು (ಎಸ್‌ಐಟಿ) ಏಳು ಸಂಪುಟಗಳಲ್ಲಿ 3,072 ಪುಟಗಳ ಪ್ರಾಥಮಿಕ ಆರೋಪ ಪಟ್ಟಿ ಸಲ್ಲಿಸಿತ್ತು.

Also Read
ವಾಲ್ಮೀಕಿ ನಿಗಮದ ಹಗರಣ: ₹50 ಕೋಟಿ ಮೌಲ್ಯದ ನಗದು, ಬಂಗಾರ, ಕಾರು ಜಪ್ತಿ; 3,072 ಪುಟಗಳ ಆರೋಪ ಪಟ್ಟಿ ಸಲ್ಲಿಕೆ

ಕೆಎಂವಿಎಸ್‌ಟಿಡಿಸಿಎಲ್‌ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ ಜಿ ಪದ್ಮನಾಭ, ನಿಗಮದ ಮಾಜಿ ಲೆಕ್ಕಾಧಿಕಾರಿ ಪರಶುರಾಮ್‌ ದುರ್ಗಣ್ಣನವರ್‌, ಫಸ್ಟ್‌ ಫೈನಾನ್ಸ್‌ ಕ್ರೆಡಿಟ್‌ ಕೊ-ಆಪರೇಟಿವ್‌ ಸೊಸೈಟಿ ಲಿಮಿಟೆಡ್‌ನ ಅಧ್ಯಕ್ಷ ಸತ್ಯನಾರಾಯಣ ಏಕತಾರಿ, ಮಾಜಿ ಸಚಿವ ಬಿ ನಾಗೇಂದ್ರ ಅವರ ಆಪ್ತ ನೆಕ್ಕುಂಟೆ ನಾಗರಾಜ್‌, ನಾಗರಾಜ್‌ ಅವರ ಭಾವ-ಮೈದುನ ನಾಗೇಶ್ವರ ರಾವ್‌, ಹೈದರಬಾದ್‌ನ ಎಂ ಚಂದ್ರಮೋಹನ್‌ ಮತ್ತು ಸಾಯಿತೇಜ, ಜಿ ಸತ್ಯನಾರಾಯಣ ವರ್ಮಾ, ಶಿವಮೊಗ್ಗದ ಜಿ ಕೆ ಜಗದೀಶ್‌, ಬೆಂಗಳೂರಿನ ತೇಜ ತಮ್ಮಯ್ಯ, ಆಂಧ್ರಪ್ರದೇಶದ ಪಿ ಶ್ರೀನಿವಾಸ ಮತ್ತು ಕೆ ಶ್ರೀನಿವಾಸ್‌ ರಾವ್‌ ಅವರನ್ನು ಎಸ್‌ಐಟಿ ಬಂಧಿಸಿತ್ತು.

ತನಿಖೆಯ ವೇಳೆ ಒಟ್ಟು ₹49,86,92,918 ಮೌಲ್ಯದ ನಗದು, ಬಂಗಾರ, ಕಾರು ಜಪ್ತಿ ಮಾಡಲಾಗಿದೆ. ಒಂಭತ್ತು ಆರೋಪಿಗಳಿಂದ ₹16,83,35,000 ನಗದು ಹಾಗೂ ನಾಲ್ವರು ಆರೋಪಿಗಳಿಂದ ₹11,70,33,120 ಮೌಲ್ಯದ 16.2546 ಕೆಜಿ ಬಂಗಾರ ಜಪ್ತಿ ಮಾಡಲಾಗಿದೆ. ಸತ್ಯನಾರಾಯಣ ವರ್ಮಾಗೆ ಸೇರಿದ ₹3,31,19,166 ಮೌಲ್ಯದ ಲ್ಯಾಂಬೊರ್ಗಿನಿ ಮತ್ತು ₹1.2 ಕೋಟಿ ಮೌಲ್ಯದ ಮರ್ಸಿಡೀಸ್‌ ಬೆಂಜ್‌ ಕಾರು ಜಪ್ತಿ ಮಾಡಲಾಗಿದೆ. ತನಿಖಾಧಿಕಾರಿಯ ಬ್ಯಾಂಕ್‌ ಖಾತೆಯಲ್ಲಿ ₹3,19,11,500 ಹಣವಿದ್ದು, ಜಪ್ತಿ ಮಾಡಲಾದ ಖಾತೆಗಳಲ್ಲಿ ₹13,72,94,132 ಹಣವಿದೆ ಎಂದು ಎಸ್‌ಐಟಿಯ ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

Kannada Bar & Bench
kannada.barandbench.com