A1
ಸುದ್ದಿಗಳು

ಕೇಜ್ರಿವಾಲ್ ನಿವಾಸದ ಹೊರಗೆ ದಾಳಿ: ಸಿಎಂ ಸಚಿವಾಲಯಕ್ಕೆ ವರದಿ ಸಲ್ಲಿಸಲು ಪೊಲೀಸರಿಗೆ ದೆಹಲಿ ಹೈಕೋರ್ಟ್ ನಿರ್ದೇಶನ

ಪ್ರಕರಣದ ತನಿಖೆ ಮತ್ತು ಅಪರಾಧಕ್ಕೆ ಸಂಬಂಧಿಸಿದಂತೆ ಬಂಧಿಸಲಾದ, ಪ್ರಶ್ನಿಸಲಾದ ಜನರ ವಿವರಗಳಿರುವ ಮತ್ತೊಂದು ವಸ್ತುಸ್ಥಿತಿ ವರದಿಯನ್ನೂ ಸಲ್ಲಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ.

Bar & Bench

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಹೊರಗೆ ದಾಳಿ ನಡೆಸಿ, ದಾಂಧಲೆಗೈದ ಪ್ರಕರಣದ ತನಿಖೆಯ ವಸ್ತುಸ್ಥಿತಿ ವರದಿಯನ್ನು ಸಿಎಂ ಸಚಿವಾಲಯಕ್ಕೆ ಹಸ್ತಾಂತರಿಸುವಂತೆ ದೆಹಲಿ ಹೈಕೋರ್ಟ್ ಸೋಮವಾರ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದೆ.

ʼದ ಕಾಶ್ಮೀರ್‌ ಫೈಲ್ಸ್‌ʼ ಚಿತ್ರಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್‌ ನೀಡಿದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ನಿವಾಸದೆದುರು ಕೆಲ ದಿನಗಳ ಹಿಂದೆ ಬಿಜೆಪಿ ಯುವ ಮೋರ್ಚಾ ನಡೆಸಿದ ದಾಂಧಲೆ ಬಗ್ಗೆ ಎಸ್‌ಐಟಿ ತನಿಖೆ ನಡೆಸಬೇಕೆಂದು ಕೋರಿ ಆಮ್ ಆದ್ಮಿ ಪಕ್ಷದ ಶಾಸಕ ಸೌರಭ್ ಭಾರದ್ವಾಜ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು ಎನ್ನಲಾಗಿತ್ತು.

ವರದಿಯನ್ನು ಸಿಎಂಗೆ ಹಸ್ತಾಂತರಿಸುವ ಮೊದಲು ವರದಿಯಲ್ಲಿ ಭದ್ರತಾ ಲೋಪಕ್ಕೆ ಕಾರಣರಾದ ದೆಹಲಿ ಪೊಲೀಸ್‌ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಗೆ ಸಂಬಂಧಿಸಿದ ಕೆಲವು ಭಾಗಗಳನ್ನು ಮಸುಕಾಗಿಸಿ ಕೊಡಲು ಅವಕಾಶ ಮಾಡಿಕೊಡುವಂತೆ ಕೋರಿ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಸಂಜಯ್ ಜೈನ್ ಅವರು ಮಾಡಿದ ಮನವಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಾಂಘಿ ಮತ್ತು ನ್ಯಾಯಮೂರ್ತಿ ಸಚಿನ್ ದತ್ತಾ ಅವರಿದ್ದ ವಿಭಾಗೀಯ ಪೀಠ ತಿರಸ್ಕರಿಸಿತು.

“ಇಡೀ ವಿವಾದ (ಭದ್ರತಾ) ಲೋಪಗಳಿಗೆ ಸಂಬಂಧಿಸಿದೆ. ಲೋಪಗಳಾಗಿರುವುದನ್ನು ನಾವು ಗಮನಿಸಿದ್ದು ಶಿಸ್ತು ಕ್ರಮದ ವಿಚಾರವೂ ಅದರಲ್ಲಿರಬೇಕು. ನೀವು ಯಾವುದನ್ನೂ ಮಸುಕು ಮಾಡಿ (ರೆಡಾಕ್ಟ್) ಕೊಡುವ ಅಗತ್ಯವಿಲ್ಲ. ಸಂಪೂರ್ಣ ವರದಿ ನೀಡಿ” ಎಂದು ಎಎಸ್‌ಜಿ ಅವರಿಗೆ ಪೀಠ ತಾಕೀತು ಮಾಡಿತು.

ಪ್ರಕರಣದ ತನಿಖೆ ಮತ್ತು ಅಪರಾಧಕ್ಕೆ ಸಂಬಂಧಿಸಿದಂತೆ ಬಂಧಿಸಲಾದ, ಪ್ರಶ್ನಿಸಲಾದ ಜನರ ವಿವರಗಳಿರುವ ಮತ್ತೊಂದು ವಸ್ತುಸ್ಥಿತಿ ವರದಿಯನ್ನೂ ಸಲ್ಲಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ.