<div class="paragraphs"><p>Supreme Court</p></div>

Supreme Court

 
ಸುದ್ದಿಗಳು

ವಣ್ಣಿಯಾರ್ ಒಳಮೀಸಲಾತಿ ವಿವಾದ: ವಿಚಾರಣೆಗೆ ಮುಂದಾದ ಸುಪ್ರೀಂಕೋರ್ಟ್

Bar & Bench

ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ವಣ್ಣಿಯಾರ್ ಜಾತಿಗೆ ಶೇ 10.5 ಮೀಸಲಾತಿ ಒದಗಿಸುವ ತಮಿಳುನಾಡು ಸರ್ಕಾರದ ಕಾನೂನನ್ನು ರದ್ದುಪಡಿಸಿದ್ದ ಮದ್ರಾಸ್‌ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.

ನ್ಯಾಯಾಲಯವು ನೋಟಿಸ್ ಜಾರಿ ಮಾಡುವಾಗ ಮಧ್ಯಂತರ ಆದೇಶವನ್ನು ನೀಡಿದ್ದು ಮೀಸಲಾತಿ ಪ್ರಕಾರ ಹೊಸದಾಗಿ ಯಾವುದೇ ನೇಮಕಾತಿ ಮಾಡಬಾರದು. ಆದರೆ ಈಗಾಗಲೇ ನೇಮಕಾತಿಯಾಗಿದ್ದರೆ ಅದಕ್ಕೆ ಅಡ್ಡಿಪಡಿಸುವಂತಿಲ್ಲ ಎಂದಿದೆ. ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್, ಬಿ.ಆರ್.ಗವಾಯಿ ಮತ್ತು ಬಿ.ವಿ.ನಾಗರತ್ನ ಅವರಿದ್ದ ಪೀಠ ಪ್ರಕರಣದ ವಿಚಾರಣೆ ನಡೆಸಿತು.

ಎಲ್ಲಾ ಅತ್ಯಂತ ಹಿಂದುಳಿದ ವರ್ಗಗಳಿಗೆ (ಎಂಬಿಸಿ) ಮತ್ತು ಡಿನೋಟಿಫೈಡ್ ಸಮುದಾಯಗಳಿಗೆ (ಡಿಎನ್‌ಸಿ) ಶೇ 20 ಕೋಟಾವನ್ನು ಕಲ್ಪಿಸಲಾಗಿದೆ. ಇದರಡಿ ವಣ್ಣಿಯಾರ್ ಸಮುದಾಯಕ್ಕೆ ಶೇ 10.5ರಷ್ಟು ಒಳ ಮೀಸಲಾತಿ ಒದಗಿಸಲು ʼ2021ರ ತಮಿಳುನಾಡು ಖಾಸಗಿ ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿದ್ಯಾಸಂಸ್ಥೆಗಳಲ್ಲಿ ವಿಶೇಷ ಸೀಟು ಮತ್ತು ಅತ್ಯಂತ ಹಿಂದುಳಿದ ವರ್ಗಗಳು ಮತ್ತು ಡಿನೋಟಿಫೈಡ್ ಸಮುದಾಯಗಳ ಮೀಸಲಾತಿ ಕಾಯಿದೆಯ ಅಡಿಯಲ್ಲಿ ರಾಜ್ಯದ ವ್ಯಾಪ್ತಿಯ ಸೇವೆಗಳಲ್ಲಿ ನೇಮಕಾತಿ ಅಥವಾ ನಿಯುಕ್ತಿಯ ವಿಶೇಷ ಮೀಸಲಾತಿ ಕಾಯಿದೆʼ ಯತ್ನಿಸಿತ್ತು.

ಸಂಖ್ಯಾತ್ಮಕವಾಗಿ ಪ್ರಬಲ ಸಮುದಾಯಕ್ಕೆ ಸೇರಿದವರಾಗಿದ್ದರೂ ಎಂಬಿಸಿ/ ಡಿಎನ್‌ಸಿಯ ಇತರ ಸಮುದಾಯಗಳೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿ ಎಂಬಿಸಿ ಜಾತಿಯಾದ ವಣ್ಣಿಯಾರ್‌ ಸಮುದಾಯದ ಬೇಡಿಕೆ ಈಡೇರಿಸಲು ವಿಶೇಷ ಕಾನೂನು ತರಲಾಗಿದೆ ಎಂದು ಕಾಯಿದೆಯಲ್ಲಿ ತಿಳಿಸಲಾಗಿತ್ತು.

ಆದರೆ ಕಾಯಿದೆಯ ಬಗ್ಗೆ ನವೆಂಬರ್ 1ರಂದು ತೀರ್ಪು ನೀಡಿದ್ದ ಮದ್ರಾಸ್‌ ಹೈಕೋರ್ಟ್‌ ವಿಭಾಗೀಯ ಪೀಠ ಉದ್ಯೋಗಕ್ಕೆ ಸಂಬಂಧಿಸಿದಂತೆ ವಣ್ಣಿಯಾರ್‌ಗಳ ಸಾಮಾಜಿಕ-ಶೈಕ್ಷಣಿಕ ಸ್ಥಿತಿಯ ಕುರಿತು ಯಾವುದೇ ಪ್ರಮಾಣೀಕರಿಸಬಹುದಾದ ಮಾಹಿತಿ ಇಲ್ಲದೆ ಕಾನೂನು ಜಾರಿ ಮಾಡಲಾಗಿದ್ದು ವಣ್ಣಿಯಾರ್‌ಗಳನ್ನು ಉಪ ವರ್ಗೀಕರಣ ಮಾಡಲು ಯಾವುದೇ ವಸ್ತುನಿಷ್ಠ ಮಾನದಂಡಗಳಿಲ್ಲ ಎಂದಿತ್ತು.