ವಣ್ಣಿಯಾರ್ ಸಮುದಾಯಕ್ಕೆ ಶೇ 10.5 ಮೀಸಲಾತಿ ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಉದ್ಯೋಗಕ್ಕೆ ಸಂಬಂಧಿಸಿದಂತೆ ವಣ್ಣಿಯಾರ್‌ಗಳ ಸಾಮಾಜಿಕ-ಶೈಕ್ಷಣಿಕ ಸ್ಥಿತಿಯ ಕುರಿತು ಯಾವುದೇ ಪ್ರಮಾಣೀಕರಿಸಬಹುದಾದ ಮಾಹಿತಿ ಇಲ್ಲದೆ ಕಾನೂನು ಜಾರಿ ಮಾಡಲಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.
Madras High Court, Principal Bench
Madras High Court, Principal Bench
Published on

ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ವಣ್ಣಿಯಾರ್ ಜಾತಿಗೆ ಶೇ 10.5 ಮೀಸಲಾತಿ ಒದಗಿಸುವ ತಮಿಳುನಾಡು ಸರ್ಕಾರದ ಕಾನೂನನ್ನು ಮದ್ರಾಸ್‌ ಹೈಕೋರ್ಟ್‌ ಸೋಮವಾರ ರದ್ದುಪಡಿಸಿದೆ. (ವಿ ವಿ ಸಾಮಿನಾಥನ್ ಮತ್ತು ತಮಿಳುನಾಡು ಸರ್ಕಾರ ಮತ್ತಿತರರ ನಡುವಣ ಪ್ರಕರಣ).

ತಮಿಳುನಾಡು ಖಾಸಗಿ ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿದ್ಯಾಸಂಸ್ಥೆಗಳಲ್ಲಿ ವಿಶೇಷ ಸೀಟು ಮತ್ತು ಅತ್ಯಂತ ಹಿಂದುಳಿದ ವರ್ಗಗಳು ಮತ್ತು ಡಿನೋಟಿಫೈಡ್ ಸಮುದಾಯಗಳ ಮೀಸಲಾತಿ ಕಾಯಿದೆಯ ಅಡಿಯಲ್ಲಿ ರಾಜ್ಯದ ವ್ಯಾಪ್ತಿಯ ಸೇವೆಗಳಲ್ಲಿ ನೇಮಕಾತಿ ಅಥವಾ ನಿಯುಕ್ತಿಯ ವಿಶೇಷ ಮೀಸಲಾತಿ ಕಾಯಿದೆ- 2021ನ್ನು ನ್ಯಾಯಮೂರ್ತಿಗಳಾದ ಎಂ ದುರೈಸ್ವಾಮಿ ಮತ್ತು ಕೆ ಮುರಳಿ ಶಂಕರ್ ಅವರಿದ್ದ ಪೀಠ ರದ್ದುಪಡಿಸಿತು. ಈ ಕಾಯಿದೆ ಎಲ್ಲಾ ಅತ್ಯಂತ ಹಿಂದುಳಿದ ವರ್ಗಗಳಿಗೆ (ಎಂಬಿಸಿ) ಮತ್ತು ಡಿನೋಟಿಫೈಡ್ ಸಮುದಾಯಗಳಿಗೆ (ಡಿಎನ್‌ಸಿ) ಶೇ 20 ಕೋಟಾ ವ್ಯಾಪ್ತಿಯಲ್ಲಿ ವಣ್ಣಿಯಾರ್ ಸಮುದಾಯಕ್ಕೆ ಶೇ 10.5ರಷ್ಟು ಒಳ ಮೀಸಲಾತಿ ಒದಗಿಸಲು ಯತ್ನಿಸಿತ್ತು.

ಸಂಖ್ಯಾತ್ಮಕವಾಗಿ ಪ್ರಬಲ ಸಮುದಾಯಕ್ಕೆ ಸೇರಿದವರಾಗಿದ್ದರೂ ಎಂಬಿಸಿ/ ಡಿಎನ್‌ಸಿಯ ಇತರ ಸಮುದಾಯಗಳೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿ ಎಂಬಿಸಿ ಜಾತಿಯಾದ ವಣ್ಣಿಯಾರ್‌ ಸಮುದಾಯದ ಬೇಡಿಕೆ ಈಡೇರಿಸಲು ವಿಶೇಷ ಕಾನೂನು ತರಲಾಗಿದೆ ಎಂದು ಕಾನೂನಿನಲ್ಲಿ ತಿಳಿಸಲಾಗಿತ್ತು.

ಉದ್ಯೋಗಕ್ಕೆ ಸಂಬಂಧಿಸಿದಂತೆ ವಣ್ಣಿಯಾರ್‌ಗಳ ಸಾಮಾಜಿಕ-ಶೈಕ್ಷಣಿಕ ಸ್ಥಿತಿಯ ಕುರಿತು ಯಾವುದೇ ಪ್ರಮಾಣೀಕರಿಸಬಹುದಾದ ಮಾಹಿತಿ ಇಲ್ಲದೆ ಕಾನೂನು ಜಾರಿ ಮಾಡಲಾಗಿದ್ದು ವಣ್ಣಿಯಾರ್‌ಗಳನ್ನು ಉಪ ವರ್ಗೀಕರಣ ಮಾಡಲು ಯಾವುದೇ ವಸ್ತುನಿಷ್ಠ ಮಾನದಂಡಗಳಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಎಂಬಿಸಿಗಳಿಗೆ ಒಟ್ಟಾರೆ ಮೀಸಲಿಟ್ಟ ಶೇ.20ರಷ್ಟು ಮೀಸಲಾತಿಯಲ್ಲಿ ವಣ್ಣಿಯಾರ್ ಸಮುದಾಯಕ್ಕೆ ಶೇ.10.5ರಷ್ಟು ಮೀಸಲಾತಿ ನೀಡಿದರೆ, ಉಳಿದ 115 ಎಂಬಿಸಿ ಸಮುದಾಯಗಳಿಗೆ ಶೇ.9.5ರಷ್ಟು ಪಾಲು ಮಾತ್ರ ಸಿಗಲಿದೆ ಎಂದು ಕೋರ್ಟ್ ಹೇಳಿದೆ.

Also Read
ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್‌ ನಿರ್ಧರಿಸುವವರೆಗೂ ನೀಟ್ ಸ್ನಾತಕೋತ್ತರ ಕೌನ್ಸೆಲಿಂಗ್ ಆರಂಭಿಸುವುದಿಲ್ಲ: ಕೇಂದ್ರ

ಎಐಎಡಿಎಂಕೆ ಆಡಳಿತದ ವೇಳೆ ಈ ವರ್ಷದ ಆರಂಭದಲ್ಲಿ ಮಸೂದೆ ಮಂಡಿಸಲಾಗಿತ್ತು. ಫೆಬ್ರವರಿಯಲ್ಲಿ ಶಾಸಕಾಂಗ ಸಭೆ ಮಸೂದೆಗೆ ಅನುಮೋದನೆ ನೀಡಿತ್ತು. ನಂತರ ಅಧಿಕಾರಕ್ಕೆ ಬಂದ ಡಿಎಂಕೆ ಸರ್ಕಾರ ವಣ್ಣಿಯಾರ್‌ ಮೀಸಲಾತಿಯನ್ನು ಫೆಬ್ರವರಿ 26, 2021ರಿಂದ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಲು ಜುಲೈನಲ್ಲಿ ಆದೇಶ ಹೊರಡಿಸಿತ್ತು.

ಇದನ್ನು ಪ್ರಶ್ನಿಸಿ ಇತರೆ ಎಂಬಿಸಿ ವರ್ಗಕ್ಕೆ ಸೇರಿದ ವ್ಯಕ್ತಿಗಳು ಹೈಕೋರ್ಟ್‌ಗೆ ಕನಿಷ್ಠ 35 ರಿಟ್ ಅರ್ಜಿಗಳನ್ನು ಸಲ್ಲಿಸಿದ್ದರು. ಭಾರತದ ಸಂವಿಧಾನದ 102 ನೇ ತಿದ್ದುಪಡಿ ಅಳವಡಿಕೆಯ ನಂತರ, ಯಾವುದೇ ಸಮುದಾಯವನ್ನು ಹಿಂದುಳಿದ ಸಮುದಾಯವೆಂದು ಗುರುತಿಸಲು/ವರ್ಗೀಕರಿಸಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಅದು ಸಂಸತ್ತಿನ ಏಕೈಕ ಅಧಿಕಾರವಾಗಿದೆ. ಆದ್ದರಿಂದ, ಕಾಯಿದೆ ಸಂವಿಧಾನದ 338-ಬಿ ಮತ್ತು 342-ಎ ಸೆಕ್ಷನ್‌ಗಳ ಉಲ್ಲಂಘನೆಯಾಗಿದೆ ಇತ್ಯಾದಿ ಅಂಶಗಳನ್ನುಅರ್ಜಿದಾರರು ವಾದಿಸಿದ್ದರು.

ಜಾತಿಗಳ ವರ್ಗೀಕರಣಕ್ಕೆ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ ಸೂಕ್ತವಾದ ಅಂಗವಾಗಿದೆ. ಆದರೆ ಆಯೋಗದ ಶಿಫಾರಸಿಗೆ ಕಾಯದೆ ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ಅಥವಾ ಚರ್ಚೆಯನ್ನೂ ನಡೆಸದೆ ರಾಜ್ಯ ಸರ್ಕಾರ ಕಾಯಿದೆ ಜಾರಿಗೊಳಿಸಿದೆ. ವಣ್ಣಿಯಾರ್‌ಗಳಿಗೆ ದೊಡ್ಡ ಪ್ರಮಾಣದಲ್ಲಿ ಮೀಸಲಾತಿ ಒದಗಿಸಿರುವುದು ಸೂಕ್ತವಲ್ಲ. ಯಾವುದೇ ಜನಗಣತಿಯಿಲ್ಲದೆ, ಜಾತಿವಾರು ಜನಸಂಖ್ಯೆ ಗಣನೆ ಮಾಡದೆ ತಮಿಳುನಾಡು ಸರ್ಕಾರ ಮೀಸಲಾತಿ ಜಾರಿಗೆ ತಂದಿದೆ. ವಣ್ಣಿಯಾರ್‌ಗಳ ಸಾಮಾಜಿಕ-ಶೈಕ್ಷಣಿಕ ಸ್ಥಿತಿಯ ಕುರಿತು ಯಾವುದೇ ಪ್ರಮಾಣೀಕರಿಸಬಹುದಾದ ಮಾಹಿತಿ ಇಲ್ಲ ಎಂದು ವಾದ ಮಂಡಿಸಲಾಗಿತ್ತು. ಇತ್ತ ರಾಜ್ಯ ಸರ್ಕಾರ ನ್ಯಾಯಾಲಯದಲ್ಲಿ ಪ್ರತಿಕ್ರಿಯೆ ಸಲ್ಲಿಸುವಾಗ ತನ್ನ ನಡೆಯನ್ನು ಸಮರ್ಥಿಸಿಕೊಂಡಿತ್ತು.

ಎರಡೂ ಕಡೆಯ ವಾದಗಳನ್ನು ಪರಿಶೀಲಿಸಿದ ನ್ಯಾಯಾಲಯ ಈ ಕಾನೂನು ಜಾತಿ ಆಧಾರದಲ್ಲಿ ತಾರತಮ್ಯ ಎಸಗುತ್ತದೆ ಎಂದು ಅಭಿಪ್ರಾಯಪಟ್ಟಿತು. ಇಂದಿರಾ ಸಾಹ್ನಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಕೇವಲ ಜಾತಿಯನ್ನು ಆಧರಿಸಿ ಮಾತ್ರವೇ ಮೀಸಲಾತಿ ಸಾಧ್ಯವಿಲ್ಲ ಎನ್ನುವ ಸುಪ್ರೀಂ ಕೋರ್ಟ್‌ ತೀರ್ಪನ್ನು ಒತ್ತಿಹೇಳಿತು. ಅಲ್ಲದೆ ಪ್ರತಿವಾದಿಗಳು ಒಂದು ಜಾತಿಯ 6 ಉಪಜಾತಿಗಳು ಮತ್ತು 115 ಇತರ ಜಾತಿಗಳ ನಡುವೆ ತಾರತಮ್ಯ ಉಂಟು ಮಾಡಿದ್ದಾರೆ. ಮುಖ್ಯವಾಗಿ, 102ನೇ ತಿದ್ದುಪಡಿಯ ನಂತರ ರಾಜ್ಯವು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು (SEBC) ಅಧಿಸೂಚಿಸುವ ಅಧಿಕಾರ ಪಡೆದಿಲ್ಲವಾದ್ದರಿಂದ ರಾಜ್ಯ ಸರ್ಕಾರ ಕಾಯಿದೆ ಜಾರಿಗೆ ತರಲು ಸಮರ್ಥವಲ್ಲ ಎಂದು ನ್ಯಾಯಾಲಯ ಹೇಳಿತು.

Kannada Bar & Bench
kannada.barandbench.com