Vantara 
ಸುದ್ದಿಗಳು

ವಂತಾರಾ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ; ಕಳಂಕ ತರುವುದು ಬೇಡ: ಸುಪ್ರೀಂ ಕೋರ್ಟ್‌

ಪ್ರಾಣಿಗಳ ಅಕ್ರಮ ಖರೀದಿ, ಅವುಗಳನ್ನು ಸೆರೆಯಲ್ಲಿರಿಸಿ ದೌರ್ಜನ್ಯ ಎಸಗಿರುವುದು ಮತ್ತು ಆರ್ಥಿಕ ಅಕ್ರಮ ನಡೆಸಿರುವ ಬಗ್ಗೆ ಆರೋಪ ಕೇಳಿಬಂದಿದ್ದ ಹಿನ್ನೆಲೆಯಲ್ಲಿ ತನಿಖೆ ನಡೆಸುವುದಕ್ಕಾಗಿ ನ್ಯಾಯಾಲಯ ಆಗಸ್ಟ್ 25ರಂದು ಎಸ್ಐಟಿ ರಚಿಸಿತ್ತು.

Bar & Bench

ಗುಜರಾತ್‌ನ ಜಾಮ್‌ನಗರದಲ್ಲಿರುವ ರಿಲಯನ್ಸ್ ಪ್ರತಿಷ್ಠಾನ ಒಡೆತನದ ವಂತಾರಾ ಗ್ರೀನ್ಸ್ ವನ್ಯ ಜೀವಿ ಸಂರಕ್ಷಣೆ ಮತ್ತು ಪುನರ್‌ವಸತಿ ಕೇಂದ್ರದಲ್ಲಿ ಅಕ್ರಮ ನಡೆದಿಲ್ಲ ಎಂದು ನ್ಯಾಯಾಲಯ ನೇಮಿಸಿದ್ದ ವಿಶೇಷ ತನಿಖಾ ತಂಡದ ವರದಿ ತಿಳಿಸಿರುವುದಾಗಿ ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ [ಸಿಆರ್ ಜಯಾ ಸುಕಿನ್ ವಿರುದ್ಧ ಭಾರತ ಒಕ್ಕೂಟ].

ವಂತಾರಾ ಕಾನೂನು ಮತ್ತು ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಿರುವುದಾಗಿ ವರದಿ ಹೇಳುತ್ತಿದೆ. ವಂತಾರಾವನ್ನು ಮಾಧ್ಯಮಗಳು ಕಳಂಕಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಪಂಕಜ್‌ ಮಿತ್ತಲ್‌ ಮತ್ತು ಪ್ರಸನ್ನ ಬಿ ವರಾಳೆ ಅವರಿದ್ದ ಪೀಠ ತಿಳಿಸಿತು.

"ನಾವು ವರದಿಯ ಸಾರಾಂಶ ಪರಿಶೀಲಿಸಿದ್ದೇವೆ. ಇದರಲ್ಲಿ ನಿಯಂತ್ರಣಾತ್ಮಕ ಕ್ರಮಗಳ ಆಳವಾದ ಅನುಪಾಲನೆಯ ಬಗ್ಗೆ ಉಲ್ಲೇಖಿಸಲಾಗಿದೆ. ಭಾಗೀದಾರರೂ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದರೆಂದು ತಿಳಿಸಲಾಗಿದೆ. ಅಧಿಕಾರಿಗಳು ನಿಯಂತ್ರಣಾತ್ಮಕ ಅನುಪಾಲನೆ ಸಮರ್ಪಕವಾಗಿದೆ ಎಂದು ತೃಪ್ತಿ ವ್ಯಕ್ತಪಡಿಸಿದ್ದಾರೆ. ನಾವು ಆ ವರದಿಯನ್ನು ಆದೇಶದ ಭಾಗವಾಗಿ ಸೇರಿಸುತ್ತೇವೆ” ಎಂದು ನ್ಯಾಯಾಲಯ ಹೇಳಿತು.

ಗುಜರಾತ್‌ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಎಸ್‌ಐಟಿ ವರದಿಯನ್ನು ತೀರ್ಪಿನ ಭಾಗವಾಗಿಸಬೇಕಿಲ್ಲ. ನ್ಯಾಯಾಲಯ ಅದನ್ನು ಓದಿರುವುದಾಗಿ ತೀರ್ಪಿನಲ್ಲಿ ಉಲ್ಲೇಖಿಸಿದರೆ ಸಾಕು ಎಂದರು.

ವಂತಾರಾವನ್ನು ಪ್ರತಿನಿಧಿಸಿದ್ದ ನ್ಯಾಯವಾದಿ ಹರೀಶ್‌ ಸಾಳ್ವೆ  ಅವರು ಕೂಡ ಇದಕ್ಕೆ ಬೆಂಬಲ ವ್ಯಕ್ತಪಡಿಸಿದರು. ಎಸ್‌ಐಟಿಯಲ್ಲಿ ಪ್ರಾಣಿಗಳ ಆಯ್ಕೆ ಕುರಿತಾದ ಗುಪ್ತ ಹಾಗೂ ವಾಣಿಜ್ಯ ಸಂಬಂಧಿತ ಮಾಹಿತಿ ಇದೆ. ಇದು ಜಗತ್ತಿಗೆ ಬಹಿರಂಗಗೊಳ್ಳುವಂತಿಲ್ಲ. ಇಂತಹ ಮಾಹಿತಿಗಳು ನ್ಯೂಯಾರ್ಕ್ ಟೈಮ್ಸ್ ಮುಂತಾದ ಮಾಧ್ಯಮಗಳಲ್ಲಿ ಪ್ರಕಟವಾದರೆ ತೊಂದರೆ ಆಗಬಹುದು ಎಂದರು. ಅದಕ್ಕೆ ತಲೆದೂಗಿದ ನ್ಯಾಯಾಲಯ , ಒಮ್ಮೆ ಈ ಪ್ರಕರಣವನ್ನು ಮುಕ್ತಾಯಗೊಳಿಸಿದ ಮೇಲೆ, ಅಂತಹ ಯಾವುದೇ ಬೆಳವಣಿಗೆ ಆಗಲು ಬಿಡುವುದಿಲ್ಲ ಎಂದಿತು.

ಮುಂದುವರೆದು, ನಾವು ಮತ್ತೆ ಮತ್ತೆ ಇದೇ ರೀತಿಯ ಪ್ರಶ್ನೆಗಳನ್ನು ಎತ್ತಲು ಯಾರಿಗೂ ಬಿಡುವುದಿಲ್ಲ. ನಾವು ಸಮಿತಿಗೆ ಹತ್ತು ಪ್ರಶ್ನೆಗಳನ್ನು ಕೊಟ್ಟಿದ್ದೆವು, ಅದಕ್ಕೆ ಸಮಿತಿಯು ಉತ್ತರಗಳನ್ನೂ ಸಹ ಕೊಟ್ಟಿದೆ ಎಂದು ನ್ಯಾಯಾಲಯ ತಿಳಿಸಿತು.

ದೇವಸ್ಥಾನಕ್ಕೆ ಸೇರಿದ ಆನೆಯೊಂದನ್ನು ವಂತಾರಾ ತನ್ನ ವಶಕ್ಕೆ ಪಡೆದಿದೆ ಎಂಬ ಅರ್ಜಿದಾರರಾದ ಸಿಆರ್ ಜಯಾ ಸುಕಿನ್ ಅವರ ವಾದವನ್ನೂ ನ್ಯಾಯಾಲಯ ತಿರಸ್ಕರಿಸಿತು. ದೇಶ ಹೆಮ್ಮೆಪಡುವಂತಹ ಕೆಲವು ವಿಷಯಗಳಿವೆ. ನಾವು ವಿಚಾರ ಎತ್ತಲು ಮತ್ತು ಗದ್ದಲ ಸೃಷ್ಟಿಸಲು ಸಾಧ್ಯವಿಲ್ಲ. ದೇಶದಲ್ಲಿಯೂ ಕೆಲ ಒಳ್ಳೆಯ ಸಂಗತಿಗಳು ನಡೆಯಲಿ. ಒಳ್ಳೆಯ ವಿಷಯಗಳ ಬಗ್ಗೆ ಸಂತೋಷಪಡಬೇಕು ಎಂದು ಕಿವಿಮಾತು ಹೇಳಿತು.

ಯಾರಿಗೂ ಪದೇ ಪದೇ ಪ್ರಶ್ನೆಗಳನ್ನು ಎತ್ತಲು ಬಿಡುವುದಿಲ್ಲ.
ಸುಪ್ರೀಂ ಕೋರ್ಟ್

ಅನಂತ್ ಮುಖೇಶ್ ಅಂಬಾನಿ ಸ್ಥಾಪಿಸಿದ ವಂತಾರಾವನ್ನು 2024ರಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.

ವಂತಾರಾ ವಿರುದ್ಧ ಕೇಳಿ ಬಂದಿದ್ದ ಆರೋಪಗಳ ತನಿಖೆಗಾಗಿ ಆಗಸ್ಟ್ 25, 2025 ರಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಜಸ್ತಿ ಚೆಲಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ನ್ಯಾಯಾಲಯ ಎಸ್‌ಐಟಿ ರಚಿಸಿತ್ತು. ಪ್ರಾಣಿಗಳ ಖರೀದಿಯಲ್ಲಿ ಅಕ್ರಮವೆಸಗಿರುವುದು, ಸೆರೆಯಲ್ಲಿರಿಸಿ ದುರ್ವರ್ತನೆ ತೋರಿರುವುದು, ಹಣಕಾಸು ಮತ್ತು ಕಾರ್ಯವಿಧಾನದ ಅಕ್ರಮಗಳು ಮಾತ್ರವಲ್ಲದೆ ವಂತಾರಾ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಶಂಕಿತ ಹಣ ವರ್ಗಾವಣೆ ಆರೋಪಗಳ ಕುರಿತು ತನಿಖೆ ಮಾಡುವ ಕಾರ್ಯವನ್ನು ತಂಡಕ್ಕೆ ವಹಿಸಲಾಗಿತ್ತು.

ದೇಶ  ಹೆಮ್ಮೆ ಪಡುವಂತಹ ಕೆಲವು ವಿಷಯಗಳಿವೆ. ನಾವು ಇಂತಹ ತಗಾದೆಗಳನ್ನು ತೆಗೆದು ಗದ್ದಲ  ಸೃಷ್ಟಿಸಲು ಸಾಧ್ಯವಿಲ್ಲ. ಕೆಲ ಒಳ್ಳೆಯ ಸಂಗತಿಗಳು ನಡೆಯಲಿ.
- ಸುಪ್ರೀಂ ಕೋರ್ಟ್

ಉತ್ತರಾಖಂಡ ಮತ್ತು ತೆಲಂಗಾಣ ಹೈಕೋರ್ಟ್‌ಗಳ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್, ಮಾಜಿ ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಾಗ್ರಾಲೆ ಮತ್ತು ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿ ಅನೀಶ್ ಗುಪ್ತಾ ಅವರನ್ನು ಎಸ್‌ಐಟಿ ಒಳಗೊಂಡಿತ್ತು.

ಮೂರು ದಿನಗಳ ಕಾಲ ವಂತಾರದಲ್ಲಿ ತನಿಖೆ ನಡೆಸಿದ್ದ ಎಸ್‌ಐಟಿ ತನ್ನ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತ್ತು. ತನಿಖೆಗೆ ಸಹಾಯ ಮಾಡಲು ಹದಿನಾರು ಸಂಸ್ಥೆಗಳನ್ನು ನೇಮಿಸಲಾಗಿತ್ತು. ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ಅಧಿಕಾರಿಗಳೂ ತನಿಖೆಯಲ್ಲಿ ಭಾಗಿಯಾಗಿದ್ದರು. ಇಂದು ನ್ಯಾಯಾಲಯದಲ್ಲಿ ವರದಿಯನ್ನು ತೆರೆಯಲಾಯಿತು.