ಸುದ್ದಿಗಳು

ಗ್ಯಾನ್‌ವಪಿ ಮಸೀದಿ ಸ್ಥಳದಲ್ಲಿ ದೇಗುಲ ಮರುನಿರ್ಮಾಣ: ರಾಜ್ಯ, ಕೇಂದ್ರದಿಂದ ಪ್ರತಿಕ್ರಿಯೆ ಕೇಳಿದ ವಾರಾಣಸಿ ನ್ಯಾಯಾಲಯ

Bar & Bench

ಗ್ಯಾನ್‌ವಪಿ ಮಸೀದಿ ಸ್ಥಳದಲ್ಲಿ ಪ್ರಾಚೀನ ದೇವಾಲಯ ಮರುಸ್ಥಾಪಿಸಬೇಕೆಂದು ಕೋರಿ ದೇವತೆ ʼಮಾ ಶೃಂಗಾರ್‌ ಗೌರಿ' ಪರವಾಗಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಹಾಗೂ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯಿಂದ ವಾರಾಣಸಿಯ ಜಿಲ್ಲಾ ನ್ಯಾಯಾಲಯವು ಪ್ರತಿಕ್ರಿಯೆ ಬಯಸಿದೆ.

ವಾರಾಣಸಿಯ ಸಿವಿಲ್‌ ಜಡ್ಜ್‌ (ಸೀನಿಯರ್‌ ಡಿವಿಷನ್‌) ನ್ಯಾಯಾಲಯದ ನ್ಯಾಯಾಧೀಶರಾದ ಕುಮುದ್‌ ಲತಾ ತ್ರಿಪಾಠಿ ಅವರು ವಾರಾಣಸಿಯ ಜಿಲ್ಲಾಧಿಕಾರಿ (ಡಿಎಂ), ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ, ಮಸೀದಿ ನಿರ್ವಹಿಸುವ ಅಂಜುಮಾನ್‌ ಇಂತಜಾಮಿಯಾ ಮತ್ತು ಕಾಶಿ ವಿಶ್ವನಾಥ ದೇಗುಲದ ಧರ್ಮದರ್ಶಿಗಳ ಮಂಡಳಿಗೆ ಕೂಡ ನೋಟಿಸ್‌ ನೀಡಿದ್ದಾರೆ.

ಅರ್ಜಿ ಸಂಬಂಧ ಏಪ್ರಿಲ್ 2ರಂದು ಲಿಖಿತ ಹೇಳಿಕೆ ಮತ್ತು ಏಪ್ರಿಲ್ 9ರಂದು ತಕರಾರು ದಾಖಲಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ. ಮಸೀದಿಯ ಆವರಣದಲ್ಲಿ ಅಸ್ತಿತ್ವದಲ್ಲಿತ್ತೆಂದು ಹೇಳಲಾದ ದೈವಗಳ ವಾದಮಿತ್ರರಾದ (ನೆಕ್ಸ್ಟ್‌ ಫ್ರೆಂಡ್ಸ್) ಹತ್ತು ವ್ಯಕ್ತಿಗಳ ಮೂಲಕ ಅರ್ಜಿ ಸಲ್ಲಿಸಲಾಗಿದೆ.

ಮೊಘಲ್ ದೊರೆ ಔರಂಗಜೇಬನ ಆದೇಶದ ಮೇರೆಗೆ 1669ರಲ್ಲಿ ಪ್ರಾಚೀನ ದೇವಾಲಯದಲ್ಲಿ ಜ್ಯೋತಿರ್ಲಿಂಗವನ್ನು ಅಪವಿತ್ರಗೊಳಿಸಲಾಯಿತು. ಮತ್ತು ದೇವಾಲಯವನ್ನು ಭಾಗಶಃ ಉರುಳಿಸಿದ ನಂತರ ಗ್ಯಾನ್‌ವಪಿ ಮಸೀದಿ ನಿರ್ಮಿಸಲಾಯಿತು ಎಂಬುದು ಫಿರ್ಯಾದಿಗಳ ಪ್ರತಿಪಾದನೆ. ಪ್ರಾಚೀನ ಆದಿ ವಿಶೇಶ್ವರ ದೇವಾಲಯವನ್ನು ಭಾಗಶಃ ಉರುಳಿಸಿದ ನಂತರ ಗ್ಯಾನ್‌ವಪಿ ಮಸೀದಿಯ ಹೊಸ ಕಟ್ಟಡ ನಿರ್ಮಾಣವಾಗಿದೆ ಎಂದು ವಕೀಲರಾದ ಹರಿಶಂಕರ್ ಜೈನ್ ಮತ್ತು ಪಂಕಜ್ ಕುಮಾರ್ ವರ್ಮಾ ಅವರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಲಾಗಿದೆ.

ಗ್ಯಾನ್‌ವಪಿ ಮಸೀದಿ ಹಿಂಭಾಗದಲ್ಲಿರುವ ವಿವಾದಾತ್ಮಕ ಆಸ್ತಿಯೊಳಗೆ ಈಶಾನ್ಯ ಮೂಲೆಯಲ್ಲಿ ಮಾ ಶೃಂಗಾರ್ ಗೌರಿಯ ಪ್ರತಿಮೆ ಇದೆ. ಭಕ್ತರು ಈ ಸ್ಥಳದಲ್ಲಿ ಪ್ರತಿದಿನ ಪೂಜೆ ಮಾಡುತ್ತಿದ್ದರು. ಆದರೆ 1990 ರಲ್ಲಿ ಅಯೋಧ್ಯೆ ವಿವಾದದ ವೇಳೆ ಮುಸ್ಲಿಮರನ್ನು ಸಮಾಧಾನಪಡಿಸಲು ಉತ್ತರ ಪ್ರದೇಶ ಸರ್ಕಾರ ಭಕ್ತರ ಪೂಜಾ ಕಾರ್ಯಗಳಿಗೆ ಕೆಲ ನಿರ್ಬಂಧಗಳನ್ನು ಹೇರಿತು. 1993ರ ನಂತರ ರಾಜ್ಯ ಸರ್ಕಾರವು ಶೃಂಗಾರ್ ಗೌರಿ ದೇವತೆ ಮತ್ತಿತರ ಸಹ ದೇವತೆಗಳನ್ನು ಪೂಜಿಸಲು ಕಠಿಣ ಷರತ್ತುಗಳನ್ನು ಹೇರಿತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಗುರುತಿಸಲಾದ ಆವರಣದಲ್ಲಿ ಪೂಜೆ ಸಲ್ಲಿಸುವ ಮೂಲಭೂತ ಹಕ್ಕು ನಮಗಿದೆ ಎಂದು ಫಿರ್ಯಾದಿಗಳು ಪ್ರತಿಪಾದಿಸಿದ್ದಾರೆ.

"ಫಿರ್ಯಾದಿಗಳು ಮತ್ತು ಶಿವನ ಭಕ್ತರು ಐದು ಕೋಸ್ (ಕ್ರೋಷ್) ನ ಎಲ್ಲಾ ಪ್ರದೇಶದೊಳಗೆ ಶಿವ ಮತ್ತಿತರ ದೇವತೆಗಳ ಪೂಜೆ, ದರ್ಶನ, ಆರತಿ, ಭೋಗ್ ಇತ್ಯಾದಿಗಳನ್ನು ನಡೆಸಲು ಸಂವಿಧಾನದ 25ನೇ ವಿಧಿ ಪ್ರಕಾರ ನೀಡಲಾದ ಹಕ್ಕು ಹೊಂದಿದ್ದಾರೆ” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಸ್ಥಳ ಮುಸ್ಲಿಮರಿಗೆ ಸೇರಿದ್ದಲ್ಲ ಮತ್ತು 1950 ರ ಜನವರಿ 26 ರ ಮೊದಲು ಸೃಷ್ಟಿಸಲಾದ ಯಾವುದೇ ನಿರ್ಮಿತಿ ಸಂವಿಧಾನದ 13 (1) ನೇ ವಿಧಿಯ ಹಿನ್ನೆಲೆಯಲ್ಲಿ ಅನೂರ್ಜಿತ ಎಂದು ಹೇಳಲಾಗಿದೆ.

1995ರ ವಕ್ಫ್ ಕಾಯಿದೆ ಸೆಕ್ಷನ್ 89 ರ ಅಡಿಯಲ್ಲಿ ಈಗಾಗಲೇ ಉತ್ತರ ಪ್ರದೇಶ ಸುನ್ನಿ ವಕ್ಫ್ ಮಂಡಳಿಗೆ ನೋಟಿಸ್‌ ಕಳುಹಿಸಲಾಗಿದೆ, ಆದರೆ " ಸಂಬಂಧಪಟ್ಟ ಪ್ರತಿವಾದಿ ನೋಟಿಸ್‌ಗೆ ಯಾವುದೇ ಉತ್ತರ ನೀಡಿಲ್ಲ ಮತ್ತು ನೋಟಿಸ್‌ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ತಿಳಿಸಲಾಗಿದೆ.

ಫಿರ್ಯಾದಿಗಳು ನ್ಯಾಯಾಲಯದಿಂದ ಕೋರಿರುವ ಪರಿಹಾರಗಳು ಈ ರೀತಿ ಇವೆ:

  1. ಇಡೀ ಅವಿಮುಕ್ತೇಶ್ವರ ಪ್ರದೇಶ, ವಾರಾಣಸಿಯ ಹೃದಯಭಾಗದಲ್ಲಿರುವ ಫಿರ್ಯಾದಿ ದೈವ ಭಗವಾನ್ ಆದಿ ವಿಶ್ವೇಶ್ವರನಿಗೆ ಸೇರಿದೆ ಎಂದು ಘೋಷಿಸಬೇಕು.

  2. ಅಲ್ಲಿ ಅಸ್ತಿತ್ವದಲ್ಲಿರುವ ಕಟ್ಟಡಗಳು ಮತ್ತು ರಚನೆಗಳನ್ನು ಉರುಳಿಸಿ ತೆಗೆದ ನಂತರ. ಪ್ರತಿವಾದಿಗಳು ಮತ್ತು ಅವರಡಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ವ್ಯಕ್ತಿ ನೂತನ ದೇವಾಲಯ ನಿರ್ಮಾಣದಲ್ಲಿ ಯಾವುದೇ ಹಸ್ತಕ್ಷೇಪ ಅಥವಾ ಅಡೆತಡೆ ಉಂಟುಮಾಡುವುದನ್ನು ನಿಷೇಧಿಸಬೇಕು,

  3. ಪೂಜೆ ಪುನರಾರಂಭಿಸಲು ಉತ್ತರಪ್ರದೇಶ ಸರ್ಕಾರ ಮತ್ತು ಕಾಶಿ ವಿಶ್ವನಾಥ ದೇವಸ್ಥಾನದ ಟ್ರಸ್ಟಿಗಳ ಮಂಡಳಿಗೆ ನಿರ್ದೇಶನ ನೀಡುವುದು ಮತ್ತು ಆರಾಧಕರ ದರ್ಶನ ಮತ್ತು ಪೂಜೆಗೆ ಸೂಕ್ತ ವ್ಯವಸ್ಥೆ ಮಾಡುವುದು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು.