Supreme Court  
ಸುದ್ದಿಗಳು

ವಾರಾಣಸಿ ರೋಪ್‌ ವೇ ಯೋಜನೆ: ದಶಾಶ್ವಮೇಧ ಘಾಟ್ ನಿಲ್ದಾಣ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ತಡೆ

ದಶಾಶ್ವಮೇಧದಲ್ಲಿ ರೋಪ್‌ ವೇ ನಿಲ್ದಾಣ ನಿರ್ಮಿಸುವುದಕ್ಕಾಗಿ ಖಾಸಗಿ ಆಸ್ತಿಯನ್ನು ಅಕ್ರಮವಾಗಿ ಕೆಡವಲಾಗುತ್ತಿದೆ ಎಂದು ಆರೋಪಿಸಲಾಗಿತ್ತು.

Bar & Bench

ಮಹತ್ವಾಕಾಂಕ್ಷೆಯ ವಾರಾಣಸಿ ರೋಪ್‌ ವೇ ಯೋಜನೆಗಾಗಿ ಉತ್ತರ ಪ್ರದೇಶದ ದಶಾಶ್ವಮೇಧದಲ್ಲಿ ರೋಪ್‌ವೇ ನಿಲ್ದಾಣ ನಿರ್ಮಾಣವನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ತಡೆಹಿಡಿದಿದೆ [ಮನ್ಷಾ ಸಿಂಗ್ ಮತ್ತಿತರರು ಹಾಗೂ ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಯೋಜನೆಗಾಗಿ ಅಧಿಕಾರಿಗಳು ಖಾಸಗಿ ಆಸ್ತಿಯನ್ನು ಅಕ್ರಮವಾಗಿ ಕೆಡವಿದ್ದಾರೆ ಎಂದು ಆರೋಪಿಸಿ ಮೂವರು ದಾವೆದಾರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ಎಂ ಸುಂದರೇಶ್‌ ಮತ್ತು ನ್ಯಾಯಮೂರ್ತಿ ಸಂಜಯ್ ಕರೋಲ್ ಅವರಿದ್ದ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿತು.

ಪ್ರಕರಣದ ಮುಂದಿನ ವಿಚಾರಣೆ ನಿಗದಿಯಾಗಿರುವ ಏಪ್ರಿಲ್ 14ರೊಳಗೆ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಉತ್ತರ ಪ್ರದೇಶ ಸರ್ಕಾರ ಮತ್ತು ವಾರಾಣಸಿ ಅಭಿವೃದ್ಧಿ ಪ್ರಾಧಿಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದ್ದು, ಅಲ್ಲಿಯವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ.

ವಾರಾಣಸಿ ರೋಪ್‌ವೇ ಯೋಜನೆ ಅಥವಾ ಕಾಶಿ ರೋಪ್‌ವೇ ನಿರ್ಮಾಣ ಹಂತದಲ್ಲಿದ್ದು, ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಗುರಿ ಯೋಜನೆಯದ್ದಾಗಿದೆ. ಇದನ್ನು ಭಾರತದ ಮೊದಲ ಸಾರ್ವಜನಿಕ ಸಾರಿಗೆ ರೋಪ್‌ವೇ ಎಂದು ಹೇಳಲಾಗುತ್ತಿದ್ದು, ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣ (ವಾರಾಣಸಿ ಜಂಕ್ಷನ್) ಮತ್ತು ಚರ್ಚ್ ಚೌಕಿ (ಗೋದೌಲಿಯಾ) ನಡುವೆ ಸುಮಾರು 4.2 ಕಿಲೋಮೀಟರ್ ದೂರವನ್ನು ಕ್ರಮಿಸುವ ನಿರೀಕ್ಷೆಯಿದೆ. ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ದಶಾಶ್ವಮೇಧ ಘಾಟ್ ಬಳಿಯಿರುವ ರೋಪ್‌ವೇ ನಿಲ್ದಾಣಗಳು ಇದರಲ್ಲಿ ಸೇರಿವೆ.

ಅರ್ಜಿದಾರರು ಮೊದಲು ಅಲಾಹಾಬಾದ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರಾದರೂ ನಿರ್ಮಾಣ ಕಾಮಗಾರಿ ತಡೆಗೆ ಅದು ನಿರ್ದೇಶಿಸದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಮೊರೆ ಹೋಗಲಾಗಿತ್ತು.