ವಾರಾಣಸಿ ನ್ಯಾಯಾಧೀಶರ ವಿರುದ್ಧ ಪೋಸ್ಟ್‌: ವಕೀಲ ಚಾನ್‌ ಪಾಷಾ ವಿರುದ್ಧದ ಎಫ್‌ಐಆರ್‌ ರದ್ದತಿಗೆ ಹೈಕೋರ್ಟ್‌ ನಕಾರ

ಅರ್ಜಿದಾರರ ಪರ ವಕೀಲರು “ಚಾನ್‌ ಪಾಷಾ ರಾಮನಗರದಲ್ಲಿ ವಕೀಲಿಕೆ ನಡೆಸುತ್ತಿದ್ದು, ಅವರ ಫೇಸ್‌ಬುಕ್‌ ಖಾತೆ ಹ್ಯಾಕ್‌ ಮಾಡಲಾಗಿದೆ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ” ಎಂದರು.
Chan Pasha
Chan Pasha
Published on

ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ಕಲ್ಪಿಸಿ ತೀರ್ಪು ನೀಡಿದ್ದ ಉತ್ತರ ಪ್ರದೇಶದ ಜಿಲ್ಲಾ ನ್ಯಾಯಾಧೀಶರ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿದ್ದಾರೆ ಎಂಬ ಆರೋಪದಡಿ ರಾಮನಗರದ ವಕೀಲ ಚಾನ್ ಪಾಷಾ ಐಜೂರು ವಿರುದ್ಧದ ಎಫ್‌ಐಆರ್‌ ರದ್ದುಪಡಿಸಲು‌ ಕರ್ನಾಟಕ ಹೈಕೋರ್ಟ್‌ ಸೋಮವಾರ ನಿರಾಕರಿಸಿದೆ.

ರಾಮನಗರದ ಗೌಸಿಯಾ ನಗರ್ ನಿವಾಸಿಯಾದ ವಕೀಲ ಚಾನ್‌ ಪಾಷಾ ಎಫ್‌ಐಆರ್ ರದ್ದತಿ ಕೋರಿದ್ದ ಅರ್ಜಿ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ವಿಚಾರಣಾಧೀನ ನ್ಯಾಯಾಲಯದಲ್ಲಿಯೇ ಅರ್ಜಿ ಸಲ್ಲಿಸಿ ಎಂದು ಅರ್ಜಿದಾರರ ಪರ ವಕೀಲರಿಗೆ ತಾಕೀತು ಮಾಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು “ಚಾನ್‌ ಪಾಷಾ ರಾಮನಗರದಲ್ಲಿ ವಕೀಲಿಕೆ ನಡೆಸುತ್ತಿದ್ದು, ಅವರ ಫೇಸ್‌ಬುಕ್‌ ಖಾತೆ ಹ್ಯಾಕ್‌ ಮಾಡಲಾಗಿದೆ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ” ಎಂದರು.

ಅರ್ಜಿ ಪರಿಶೀಲಿಸಿದ ಪೀಠವು “ಯಾವುದೇ ಹೇಳಿಕೆ ನೀಡುವುದಕ್ಕೂ ಒಂದು ಇತಿ-ಮಿತಿ ಇರುತ್ತದೆ. ಪೋಸ್ಟ್‌ನಲ್ಲಿ ಭಯಾನಕ ಪದಗಳನ್ನು ಬಳಸಲಾಗಿದೆ. ನಿಜವಾಗಿಯೂ ಇದೊಂದು ದುರ್ವರ್ತನೆ. ಹೀಗಾಗಿ, ಪ್ರಕರಣದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಬೇಕಿದ್ದರೆ ವಿಚಾರಣಾ ನ್ಯಾಯಾಲಯದ ಮುಂದೆಯೇ ಆರೋಪಗಳನ್ನು ಕೈ ಬಿಡುವಂತೆ ಕೋರಿ ಅರ್ಜಿ ಹಾಕಿಕೊಳ್ಳಬಹುದು” ಎಂದು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿತು.

ಪ್ರಕರಣದ ಹಿನ್ನೆಲೆ: ಉತ್ತರಪ್ರದೇಶದ ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅಲ್ಲಿನ ಜಿಲ್ಲಾ ನ್ಯಾಯಾಲಯ ಜನವರಿ 31ರಂದು ಅವಕಾಶ ಕಲ್ಪಿಸಿ ಆದೇಶ ಮಾಡಿತ್ತು. ಇದಕ್ಕೆ ಆಕ್ಷೇಪಿಸಿ ರಾಮನಗರ ವಕೀಲರ ಸಂಘದ ಸದಸ್ಯ ಹಾಗೂ ಎಸ್‌ಡಿಪಿಐ ಮುಖಂಡ ಚಾನ್‌ ಪಾಷಾ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು.

ಇದನ್ನು ಆಧರಿಸಿ ಬಿಜೆಪಿ ಮುಖಂಡ ಪಿ ಶಿವಾನಂದ ಅವರು ಪಾಷ ವಿರುದ್ಧ ರಾಮನಗರ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಪಾಷ ವಿರುದ್ಧ ದಾಖಲಾದ ಪ್ರಕರಣದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾ ವಕೀಲರ ಸಂಘವು ಅವರ ವಿರುದ್ಧ ಕ್ರಮ ಕೈಗೊಳ್ಳಲು ಫೆಬ್ರವರಿ 6ರಂದು ಸಂಜೆ ಸರ್ವ ಸದಸ್ಯರ ಸಭೆ ಕರೆದಿತ್ತು.  ಆಗ, ದಲಿತ ಮತ್ತು ಪ್ರಗತಿಪರ ಮುಖಂಡರ ನಿಯೋಗವು ರಾಮನಗರ ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿಯನ್ನು ಭೇಟಿ ಮಾಡಿ, ಪ್ರಕರಣವನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳುವಂತೆ ಮನವಿ ಸಲ್ಲಿಸಿತ್ತು.

Also Read
ವಾರಾಣಸಿ ಜಿಲ್ಲಾ ನ್ಯಾಯಾಧೀಶರ ವಿರುದ್ಧ ಆಕ್ಷೇಪಾರ್ಹ ಪೋಸ್ಟ್: ರಾಮನಗರದ ವಕೀಲ ಪಾಷಾಗೆ ಜಾಮೀನು ಮಂಜೂರು

ಈ ವೇಳೆ ಕೆಲ ವಕೀಲರು ಪಾಷ ಪರವಾಗಿ ಬಂದಿದ್ದ ಮುಖಂಡರನ್ನು ಪ್ರಶ್ನಿಸಿದಾಗ, ವಾಗ್ವಾದ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಆವರಣಕ್ಕೆ ಅತಿಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಆರೋಪಿಸಿ, ವಕೀಲರ ಸಂಘದ ಅಧ್ಯಕ್ಷರು ಅಂದು ರಾತ್ರಿ ನೀಡಿದ ದೂರಿನ ಮೇರೆಗೆ, ಪಾಷ ಮತ್ತು 40 ಮುಖಂಡರ ವಿರುದ್ಧ ಐಜೂರು ಠಾಣೆ ಪಿಎಸ್‌ಐ ಸಯ್ಯದ್‌ ತನ್ವೀರ್ ಹುಸೇನ್ ಎಫ್‌ಐಆರ್ ದಾಖಲಿಸಿಕೊಂಡಿದ್ದರು.

ಇದಾದ ಮಾರನೇಯ ದಿನ ವಕೀಲರ ಸಂಘಕ್ಕೆ ತೆರಳಿದ್ದವರ ಪೈಕಿ ರಫೀಕ್ ಖಾನ್ ಎಂಬುವರು, ವಕೀಲರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನೀಡಿದ ದೂರಿನ ಮೇರೆಗೆ ಪಿಎಸ್‌ಐ ತನ್ವೀರ್‌ ಅವರು 40 ವಕೀಲರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದರಿಂದ ಕೆರಳಿದ ವಕೀಲರು ಪಿಎಸ್‌ಐ ಅಮಾನತಿಗೆ ಆಗ್ರಹಿಸಿ ಧರಣಿ ನಡೆಸಿದ್ದರು. ಈ ವಿಚಾರ ವಿಧಾನಸಭೆಯಲ್ಲಿ ಮಾರ್ದನಿಸಿತ್ತು. ವಿಪಕ್ಷದ ಒತ್ತಡಕ್ಕೆ ಮಣಿದು ಪಿಎಸ್‌ಐ ತನ್ವೀರ್‌ ಅವರನ್ನು ಸರ್ಕಾರ ಅಮಾನತ್ತು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Kannada Bar & Bench
kannada.barandbench.com