ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಅರೋಪಿಯಾಗಿ ತಲೋಜಾ ಜೈಲಿನಲ್ಲಿ ಬಂಧಿಯಾಗಿದ್ದ, ಪ್ರಸ್ತುತ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಾ.ವರವರರಾವ್ ಅವರಿಗೆ ಜಾಮೀನು ಕೋರಿ ಇಂದು ಹಿರಿಯ ವಕೀಲರಾದ ಆನಂದ್ ಗ್ರೋವರ್ ಮತ್ತು ಇಂದಿರಾ ಜೈಸಿಂಗ್ ಬಾಂಬೆ ಹೈಕೋರ್ಟ್ ಮುಂದೆ ವಾದ ಮಂಡಿಸಿದರು.
ರಾವ್ ಅವರನ್ನು ಮರಳಿ ತಲೋಜಾ ಜೈಲಿಗೆ ಸ್ಥಳಾಂತರಿಸಿದರೆ ಅವರ ಆರೋಗ್ಯ ಸ್ಥಿತಿಯು ವಿಷಮಗೊಳ್ಳಬಹುದು ಎಂದು ಈ ಇಬ್ಬರು ಹಿರಿಯ ವಕೀಲರು ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಮನೀಷ್ ಪಿತಾಳೆ ಅವರಿದ್ದ ನ್ಯಾಯಪೀಠಕ್ಕೆ ತಿಳಿಸಿದರು. ಹಾಗೆ ಸ್ಥಳಾಂತರಿಸುವುದು ಆರೋಗ್ಯ ಚಿಕಿತ್ಸೆಯನ್ನು ಪಡೆಯುವ ರಾವ್ ಅವರ ಮೂಲಭೂತ ಹಕ್ಕನ್ನು ಮೊಟಕುಗೊಳಿಸಿದಂತೆ ಎಂದು ಈ ವೇಳೆ ವಾದ ಮಂಡಿಸಿದರು.
ರಾವ್ ಅವರಿಗೆ ಜಾಮೀನು ಕೋರಿದ ಹಿರಿಯ ವಕೀಲ ಆನಂದ್ ಗ್ರೋವರ್, ಅವರನ್ನು ಮರಳಿ ತಲೋಜಾ ಜೈಲಿಗೆ ಸ್ಥಳಾಂತರಿಸದಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು. ಈ ವೇಳೆ ಅವರು, ತಲೋಜಾ ಜೈಲಿನಲ್ಲಿರುವ ಆಸ್ಪತ್ರೆಯು ರಾವ್ ಅವರ ಗಂಭೀರ ಆರೋಗ್ಯ ಪರಿಸ್ಥಿತಿಗೆ ಚಿಕಿತ್ಸೆ ನೀಡಲು ಬೇಕಾದ ಅಗತ್ಯ ಸೌಕರ್ಯ ಹೊಂದಿಲ್ಲ. ಇದರಿಂದ ಅವರ ಆರೋಗ್ಯವು ಹಿಂದಿನ ವಿಷಮ ಸ್ಥಿತಿಗೆ ಮರಳುವ ಸಾಧ್ಯತೆ ಇರಲಿದೆ ಎಂದು ಹೇಳಿದರು.
ಒಂದು ವೇಳೆ ಗ್ರೋವರ್ ಅವರನ್ನು ಮರಳಿ ಬಾಹ್ಯ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಲಾಗುತ್ತದೆ ಎಂದು ಭಾವಿಸಿದರೆ ಆಗಲೂ ಅದು ಸರ್ಕಾರದ ಬೊಕ್ಕಸಕ್ಕೆ ಹೊರೆಯೇ ಆಗುತ್ತದೆ. “ನಾವು ಸರ್ಕಾರದ ಬೊಕ್ಕಸವನ್ನು ಇದಕ್ಕಾಗಿ ಪದೇಪದೇ ಬಳಸಲು ಬಯಸುವುದಿಲ್ಲ. ಅದರಲ್ಲಿಯೂ ಮನೆಯಲ್ಲಿ ಇಬ್ಬರು ವೈದ್ಯರು ಇರುವಾಗ ಇದರ ಅಗತ್ಯವಿಲ್ಲ. ಅವರ ಮಗಳು ಮತ್ತು ಅಳಿಯ ಇಬ್ಬರೂ ವೈದ್ಯರಾಗಿದ್ದಾರೆ.”
ಪ್ರಕರಣದ ವಿಚಾರಣೆ ಆರಂಭವಾದರೂ 200ಕ್ಕಿಂತ ಹೆಚ್ಚು ಸಾಕ್ಷಿಗಳ ವಿಚಾರಣೆ ನಡೆಸಬೇಕಿದೆ. ಆರೋಪಗಳನ್ನು ಸಾಬೀತುಗೊಳಿಸಬೇಕಿದೆ. ಇಷ್ಟು ಸುದೀರ್ಘ ವಿಚಾರಣೆಯನ್ನು ಅನಾರೋಗ್ಯ ಪೀಡಿತರಾದ 82ರ ವಯೋಮಾನದ ರಾವ್ ಅವರು ಎದುರಿಸುವುದು ದುಸ್ಸಾಧ್ಯ.
ಕಾನೂನು ವಿರೋಧಿ ಚಟುವಟಿಕೆಗಳ (ತಡೆ) ಕಾಯಿದೆಯ ಸೆಕ್ಷನ್ 43ಡಿ(5) ರ ಅಡಿಯಲ್ಲಿ ಜಾಮೀನು ನೀಡಲು ನಿರ್ಬಂಧಗಳಿದ್ದರೂ ಸೆಕ್ಷನ್ 437ರ ಅಡಿ, ವೈದ್ಯಕೀಯ ಕಾರಣಗಳ ಹಿನ್ನೆಲೆಯಲ್ಲಿ ಜಾಮೀನು ರಹಿತ ಪ್ರಕರಣಗಳಲ್ಲಿ ಕೂಡ ಜಾಮೀನು ನೀಡಲು ಯಾವುದೇ ನಿರ್ಬಂಧಗಳಿಲ್ಲ ಎನ್ನುವ ಬಗ್ಗೆ ಗಮನಸೆಳೆಯಲಾಯಿತು.
ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ರಾವ್ ಅವರ ಬಂಧನವು ಅಮಾನವೀಯುವೂ, ಕ್ರೌರ್ಯಯುತವೂ ಹಾಗೂ ಹೀನವೂ ಆಗಿರುವಂಥದ್ದು ಎಂದು ವಾದಿಸಿದರು. ಇದಕ್ಕಾಗಿ ಅವರು ಮಾನವ ಹಕ್ಕುಗಳ ಕುರಿತಾದ ಐರೋಪ್ಯ ನ್ಯಾಯಾಲಯಗಳ ತೀರ್ಪುಗಳನ್ನು ಉಲ್ಲೇಖಿಸಿದರು.
ವಿಚಾರಣಾಧೀನ ಕೈದಿಗಳು ಜೈಲಿನಲ್ಲಿರುವ ವೇಳೆ ತಮ್ಮ ಮೂಲಭೂತ ಹಕ್ಕುಗಳಿಂದ ವಂಚಿತರಾಗಿರುವುದಿಲ್ಲ.
ಸಂವಿಧಾನದ 21ನೇ ವಿಧಿಯಡಿ ಆರೋಗ್ಯಯುತ ಮತ್ತು ಘನತೆಯ ಜೀವನದ ಹಕ್ಕುಗಳು ಜೀವಿಸುವ ಹಕ್ಕಿನಡಿಯಲ್ಲಿಯೇ ಬರುವಂತಹದ್ದಾಗಿದೆ.
ಬಂಧನವು ವ್ಯಕ್ತಿಯನ್ನು ಮಾರ್ಪಡಿಸಿ ಮರಳಿ ಸಮಾಜಕ್ಕೆ ಕರೆತರುವ ಉದ್ದೇಶ ಹೊಂದಿರುತ್ತದೆ. ರಾವ್ ಅವರ ವಯಸ್ಸು ಹಾಗೂ ವಿಚಾರಣೆಯು ಮುಕ್ತಾಯವಾಗುವಲ್ಲಿನ ಅನಿಶ್ಚಿತತೆಯನ್ನು ಗಮನದಲ್ಲಿರಿಸಿಕೊಂಡು ನೋಡಿದರೆ ಅವರ ಬಂಧನವು ಯಾವುದೇ ತಾರ್ಕಿಕ ಉದ್ದೇಶವನ್ನು ಈಡೇರಿಸುವುದಿಲ್ಲ.
“ಈ ಪ್ರಕರಣದಲ್ಲಿ ಇದಾಗಲೇ ಆರೋಪಪಟ್ಟಿಯ ಸಲ್ಲಿಕೆಯಾಗಿದ್ದು, ಸಾಕ್ಷ್ಯ ಅಥವಾ ಸಾಕ್ಷಿಗಳ ಮೇಲಿನ ಹಸ್ತಕ್ಷೇಪ ಸಾಧ್ಯವಿಲ್ಲ. ಆರೋಪಿಗೆ ನಡೆದಾಡಲು ಸಹ ಸಾಧ್ಯವಿಲ್ಲ!”
ಇದೇ ವೇಳೆ, ಇಂದಿರಾ ಜೈಸಿಂಗ್ ಅವರು ಭಾರತವು ಕೈದಿಗಳಿಗಿರುವ ಮಾನವ ಹಕ್ಕುಗಳನ್ನು ಎತ್ತಿಹಿಡಿಯುವ ಮೂರು ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ಭಾರತವು ಸಹಿ ಹಾಕಿರುವುದನ್ನು ಸಹ ನ್ಯಾಯಾಲಯದ ಗಮನಕ್ಕೆ ತಂದರು.
ಇಬ್ಬರು ಹಿರಿಯ ನ್ಯಾಯವಾದಿಗಳ ವಾದ ಮಂಡನೆಯ ನಂತರ ಮುಖ್ಯ ಸಾರ್ವಜನಿಕ ಅಭಿಯೋಜಕರು ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರ ಈ ಹಿಂದಿನ ವಾದಕ್ಕೆ ಸೀಮಿತಗೊಂಡಂತೆ ತಾವು ನ್ಯಾಯಾಲಯಕ್ಕೆ ಹೇಳಿಕೆ ನೀಡಲು ಸೂಚಿತರಾಗಿರುವುದಾಗಿ ತಿಳಿಸಿದರು.
ಮುಂದುವರೆದು, “ರಾವ್ ಅವರನ್ನು ಜೆಜೆ ಅಸ್ಪತ್ರೆಯಲ್ಲಿನ ಬಂಧೀಖಾನೆಯ ವಾರ್ಡಿಗೆ ಸ್ಥಳಾಂತರಿಸಲಾಗುವುದು. ಅವರಿಗೆ ಎಲ್ಲ ಶುಶ್ರೂಷೆಯನ್ನು ನೀಡಲಾಗುವುದು. ನಾನಾವತಿ ಆಸ್ಪತ್ರೆಯಲ್ಲಿದ್ದಂತೆಯೇ, ಇಲ್ಲಿಯೂ ನಿಯಮಾವಳಿಗಳು ಮತ್ತು ಚಿಕಿತ್ಸೆಗೊಳಪಟ್ಟಂತೆ ಅವರ ಕುಟುಂಬದ ಸದಸ್ಯರ ಭೇಟಿಗೆ ಅನುವು ಮಾಡಿಕೊಡಲಾಗುವುದು,” ಎಂದು ನ್ಯಾಯಾಲಯಕ್ಕೆ ತಿಳಿಸಿದರು.