ಸುದ್ದಿಗಳು

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸೆ.30 ರಂದು ತೀರ್ಪು; ಎಲ್ಲಾ ಆರೋಪಿಗಳ ಉಪಸ್ಥಿತಿಗೆ ವಿಶೇಷ ನ್ಯಾಯಾಲಯ ಆದೇಶ

Bar & Bench

ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ ಕರಾಳ ಅಧ್ಯಾಯವಾಗಿ ದಾಖಲಾಗಿರುವ ಬಾಬರಿ ಮಸೀದಿ ಧ್ವಂಸ ಪ್ರಕರಣದ ಕುರಿತಾದ ತೀರ್ಪನ್ನು ಸೆಪ್ಟೆಂಬರ್ 30ರಂದು ಲಖನೌ ವಿಶೇಷ ನ್ಯಾಯಾಲಯ ಪ್ರಕಟಿಸಲಿದೆ.

ಆಡಳಿತಾರೂಢ ಬಿಜೆಪಿಯ ಪ್ರಮುಖ ನೇತಾರರಾದ ಎಲ್ ಕೆ ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್ ಮತ್ತು ಉಮಾ ಭಾರತಿ ಒಳಗೊಂಡಂತೆ 32 ಮಂದಿ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ನೇತೃತ್ವದ ಲಖನೌನ ವಿಶೇಷ ಸಿಬಿಐ ನ್ಯಾಯಾಲಯವು ಪ್ರಕರಣದ ತೀರ್ಪು ಪ್ರಕಟಿಸುವುದಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಿದೆ.

LK Advani, Uma Bharti, Kalyan Singh, Muralidhar Manohar

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿಯ ಜಾಗವು ರಾಮನ ಜನ್ಮಭೂಮಿ ಎಂದು 1992ರ ಡಿಸೆಂಬರ್ 6ರಂದು ಕರಸೇವಕರು ಮಸೀದಿಯನ್ನು ಧ್ವಂಸಗೊಳಿಸಿದ್ದ ಪ್ರಕರಣ ಇದಾಗಿದೆ. ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಕ್ರಿಮಿನಲ್ ಪಿತೂರಿ ನಡೆಸಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ 2017ರ ಏಪ್ರಿಲ್ ನಲ್ಲಿ ಅಡ್ವಾಣಿ, ಜೋಶಿ, ಉಮಾ ಭಾರತಿ ಹಾಗೂ ಮತ್ತಿತರ ನಾಯಕರ ವಿರುದ್ಧ ಆರೋಪ ಪಟ್ಟಿ ದಾಖಲಿಸಲು ಕೇಂದ್ರೀಯ ತನಿಖಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು.

ಇದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ಪ್ರಕರಣದ ವಿಚಾರಣೆಯು ಎರಡು ವರ್ಷಗಳ ಒಳಗೆ ಪೂರ್ಣಗೊಳ್ಳಬೇಕು ಮತ್ತು ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರನ್ನು ಯಾವುದೇ ಕಾರಣಕ್ಕೂ ವರ್ಗಾಯಿಸಬಾರದು ಎಂದು ಆದೇಶಿಸಿತ್ತು.

ಕಳೆದ ಆಗಸ್ಟ್‌ ನಲ್ಲಿ ಪ್ರಕರಣದ ವಿಚಾರಣೆ ಮತ್ತು ತೀರ್ಪು ಪ್ರಕಟ ವಿಚಾರಕ್ಕೆ ನಿಗದಿಗೊಳಿಸಿದ್ದ ಗಡುವನ್ನು ಸುಪ್ರೀಂ ಕೋರ್ಟ್ ವಿಸ್ತರಿಸಿತ್ತು. ಸುಪ್ರೀಂ ಕೋರ್ಟ್ ವಿಧಿಸಿದ್ದ ಗಡುವುದು ಸೆಪ್ಟೆಂಬರ್ 30ಕ್ಕೆ ಮುಗಿಯಲಿದೆ.