Karnataka High Court
Karnataka High Court 
ಸುದ್ದಿಗಳು

ಲೈಂಗಿಕ ದೌರ್ಜನ್ಯದ ಸಂತ್ರಸ್ತರ ಪರಿಹಾರ ಯೋಜನೆ: ₹7 ಕೋಟಿ ಬಾಕಿ ಬಿಡುಗಡೆಗೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

Bar & Bench

ಲೈಂಗಿಕ ದೌರ್ಜನ್ಯ ಸಂತ್ರಸ್ತರ ಪರಿಹಾರ ಯೋಜನೆ ಜಾರಿಗಾಗಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಕೆಎಸ್‌ಎಲ್‌ಎಸ್‌ಎ) ತಕ್ಷಣ ಬಾಕಿ ಉಳಿದಿರುವ ಏಳು ಕೋಟಿ ರೂಪಾಯಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರಕ್ಕೆ ಮಂಗಳವಾರ ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ.

ಅತ್ಯಾಚಾರ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲು ಸೂಕ್ತ ಮಾರ್ಗಸೂಚಿ ರಚಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ‘ಪೀಪಲ್ಸ್ ಮೂವ್‌ಮೆಂಟ್ ಅಗೈನ್ಸ್ಟ್ ಸೆಕ್ಷ್ಯುಯಲ್ ಅಸಾಲ್ಟ್’ (ಪಿಎಂಎಎಸ್‌ಎ) ಎಂಬ ಸಂಘಟನೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

“ಆದಷ್ಟು ಬೇಗ ಬಾಕಿ ಉಳಿದಿರುವ ಏಳು ಕೋಟಿ ರೂಪಾಯಿ ಹಣವನ್ನು ಕೆಎಸ್‌ಎಲ್‌ಎಸ್‌ಎಗೆ ಬಿಡುಗಡೆ ಆಗುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಮಂಜುಳಾ ಅವರು ಖಾತರಿಪಡಿಸಬೇಕು. ಮುಂದಿನ ವಿಚಾರಣೆಗೆ ಡಾ. ಮಂಜುಳಾ ಅವರು ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

ಕೆಎಸ್‌ಎಲ್‌ಎಸ್‌ಎ ಪರ ವಕೀಲೆ ನಿಧಿಶ್ರೀ ವೇಣುಗೋಪಾಲ್‌ ಅವರು “ಜನವರಿ 20ರಂದು ಸಲ್ಲಿಸಿರುವ ಮೆಮೊದಲ್ಲಿ 13 ಕೋಟಿ ರೂಪಾಯಿ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಸಂತ್ರಸ್ತರಿಗೆ ಬಿಡುಗಡೆ ಮಾಡಿರುವುದನ್ನು ವಿವರಿಸಲಾಗಿದೆ. ಜನವರಿ 1ರವರೆಗೆ 15 ಕೋಟಿ ರೂಪಾಯಿ ಬಿಡುಗಡೆ ಮಾಡಲು ಕೋರಿಕೆ ಸಲ್ಲಿಸಲಾಗಿತ್ತು” ಎಂದು ಪೀಠಕ್ಕೆ ವಿವರಿಸಿದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ಎಸ್‌ ರಾಜಶೇಖರ್‌ ಅವರು “ಅನುದಾನ ಬಿಡುಗಡೆ ಕೋರಿ ರಾಜ್ಯ ಸರ್ಕಾರಕ್ಕೆ ಯಾವುದೇ ಮನವಿ ಬಂದಿಲ್ಲ. ಸಂತ್ರಸ್ತ ಪರಿಹಾರ ಯೋಜನೆಗೆ ಬಿಡುಗಡೆ ಮಾಡಲು ಅನುದಾನ ಹಂಚಿಕೆ ಮಾಡಲಾಗಿದ್ದು, ಆ ಹಣವಿದೆ. ಔಪಚಾರಿಕತೆ ಪೂರೈಸಲು ಕಾಯಲಾಗುತ್ತಿದೆ. ಇದಕ್ಕಾಗಿ ಅವರು ಮನವಿ ಸಲ್ಲಿಸಬೇಕು. ತಕ್ಷಣ ಹಣ ಬಿಡುಗಡೆ ಮಾಡಲಾಗುವುದು” ಎಂದು ಪೀಠಕ್ಕೆ ವಿವರಿಸಿದರು. ವಾದ-ಪ್ರತಿವಾದ ಆಲಿಸಿದ ಪೀಠವು ಮನವಿ ಸಲ್ಲಿಸಲು ಕೆಎಸ್‌ಎಲ್‌ಎಸ್‌ಎಗೆ ಆದೇಶಿಸಿ, ವಿಚಾರಣೆಯನ್ನು ಫೆಬ್ರವರಿ 9ಕ್ಕೆ ಮುಂದೂಡಿತು.