ಸುದ್ದಿಗಳು

ದೋಷಯುಕ್ತ ಶೂ ಧರಿಸಿ ಜಾರಿಬಿದ್ದ ಹಿನ್ನೆಲೆ: ʼಗುಚಿʼಯನ್ನು ಕಟಕಟೆಗೆ ಎಳೆದ ವಕೀಲ

ತಾನು ₹75,500 ಕೊಟ್ಟು ಖರೀದಿಸಿದ ಗುಚಿ ಕಂಪೆನಿಯ ಶೂಗಳು ದೋಷಪೂರಿತವಾಗಿದ್ದು ತಮಗೆ ಗಾಯವಾಗಲು ಹಾಗೂ ತಾವು ಸಾರ್ವಜನಿಕವಾಗಿ ಮುಜಗರಕ್ಕೆ ಒಳಗಾಗಲು ಕಾರಣವಾಯಿತು ಎಂದು ವಕೀಲ ತಿಳಿಸಿದ್ದಾರೆ.

Bar & Bench

ಜಾಗತಿಕ ಐಷಾರಾಮಿ ಫ್ಯಾಷನ್ ಹೌಸ್ ಗುಚಿಯ ಮುಂಬೈನ ಮಳಿಗೆಯೊಂದು ದೋಷಯುಕ್ತ ಶೂ ಮಾರಾಟ ಮಾಡಿದೆ ಎಂದು ಗ್ರಾಹಕರೊಬ್ಬರು ದೂರಿದ್ದ ಹಿನ್ನೆಲೆಯಲ್ಲಿ ದಕ್ಷಿಣ ಮುಂಬೈ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಹಾರ ಆಯೋಗ ಗುಚಿಗೆ ಶುಕ್ರವಾರ ನೋಟಿಸ್‌ ನೀಡಿದೆ  [ಅಲಿ ಕಾಶಿಫ್ ಖಾನ್ ದೇಶಮುಖ್ ಮತ್ತು ಗುಚಿ ನಡುವಣ ಪ್ರಕರಣ].

ಮಾರ್ಚ್ 6, 2024ರಂದು ಗುಚಿಯಿಂದ ₹75,500 ಗೆ ಖರೀದಿಸಿದ ಶೂಗಳ ಜೋಡಿ ದೋಷಪೂರಿತವಾಗಿದ್ದು, ತಮಗೆ ಗಾಯ ಉಂಟಾಗಲು ಮತ್ತು ತಾವು ಸಾರ್ವಜನಿಕವಾಗಿ ಮುಜಗರಕ್ಕೆ ಒಳಗಾಗಲು ಕಾರಣವಾಯಿತು ಎಂದು ವಕೀಲರೂ ಆಗಿರುವ ಅರ್ಜಿದಾರ ಅಲಿ ಕಾಶಿಫ್ ಖಾನ್ ದೇಶಮುಖ್ ಅವರು ದೂರಿದ್ದರು.

ಗ್ರಾಹಕ ಸಂರಕ್ಷಣಾ ಕಾಯಿದೆಯಡಿ  ಸಲ್ಲಿಸಲಾದ ಅರ್ಜಿಯಲ್ಲಿ, ಸೇವೆಯಲ್ಲಿನ ಕೊರತೆ ಮತ್ತು ಅನ್ಯಾಯದ ವ್ಯಾಪಾರ ಪದ್ಧತಿಗಾಗಿ ₹1 ಕೋಟಿಗೂ ಹೆಚ್ಚು ಪರಿಹಾರ ಕೋರಲಾಗಿದೆ.

ಅಸಮ ಎತ್ತರದಿಂದ ಕೂಡಿದ್ದ ಶೂಗಳನ್ನು ಧರಿಸಿ ಒಂದು ಗಂಟೆಯೊಳಗೆ ಸಾರ್ವಜನಿಕವಾಗಿ ಎಡವಿ ಬಿದ್ದೆ. ಇದರಿಂದ ದೈಹಿಕವಾಗಿ ಭಾರೀ ನೋವು ಉಂಟಾಯಿತು. ಶೂ ಮರಳಿಸಲು ಮಳಿಗೆಗೆ ತೆರಳಿದರೂ ಗುಚಿಯ ಸಿಬ್ಬಂದಿ ಪೂರಕವಾಗಿ ಸ್ಪಂದಿಸದೆ ತಿರಸ್ಕಾರ ಭಾವದಿಂದ ಕಂಡರು ಎಂದು ಅವರು ಹೇಳಿದ್ದರು.

ಇದೇ ವೇಳೆ ಶೂಗಳ ಎತ್ತರದಲ್ಲಿ ಕೊಂಚ ವ್ಯತ್ಯಾಸ ಇದೆ ಎಂದು ಗುಚಿ ಮಾರ್ಚ್ 7, 2024ರಂದು ನೀಡಿದ ಲಿಖಿತ ಸ್ವೀಕೃತಿ ದೃಢಪಡಿಸಿತ್ತು. ತಾನು ಮತ್ತೊಂದು ಶೂ ಖರೀದಿಸಲು ಹೆಚ್ಚುವರಿಯಾಗಿ ₹9,500 ಖರ್ಚು ಮಾಡಬೇಕಾಯಿತು. ಇಡೀ ಘಟನೆಯಿಂದ ತಾನು ದೈಹಿಕವಾಗಿ ನೋವನುಭವಿಸಿದ್ದಷ್ಟೇ ಅಲ್ಲದೆ ತೀವ್ರ ಭಾವನಾತ್ಮಕ ಆಘಾತ, ಮುಜುಗರ ಮತ್ತು ಆತ್ಮವಿಶ್ವಾಸದ ಕೊರತೆಯನ್ನೂ ಅನುಭವಿಸಿದೆ ಎಂದು ಅರ್ಜಿದಾರ ತಿಳಿಸಿದ್ದಾರೆ.

ತನಗಾದ ಮಾನಸಿಕ ಯಾತನೆ, ಅಪಮಾನ, ಸಮಯ ಪೋಲು ಹಾಗೂ ಮೊಕದ್ದಮೆ ವೆಚ್ಚಕ್ಕಾಗಿ ಇಡಿಯಾಗಿ ಒಟ್ಟು ₹1.14 ಕೋಟಿ ವಿಶೇಷ ಪರಿಹಾರ ನೀಡುವಂತೆ ಅವರು ಕೋರಿದ್ದಾರೆ.