
ನೂರು ರೂಪಾಯಿಯ ರಾಖಿ ತಲುಪಿಸದ ಅಮೆಜಾನ್‌ಗೆ ಪರಿಹಾರ ಮತ್ತು ದಾವೆ ವೆಚ್ಚ ಸೇರಿ ₹40,000 ದಂಡ ವಿಧಿಸಿ ಮುಂಬೈನ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ (ಡಿಸಿಡಿಆರ್‌ಸಿ) ಇತ್ತೀಚೆಗೆ ಆದೇಶಿಸಿದೆ.
ಅಮೆಜಾನ್ ಆರ್ಡರ್ ರದ್ದುಗೊಳಿಸಿತ್ತು. ಬಳಿಕ ಆರ್ಡರ್‌ಗಾಗಿ ಪಾವತಿಸಿದ್ದ ₹100ನ್ನು ಅದರ ನಿಗದಿತ ವಿತರಣಾ ದಿನದ ಒಂದು ದಿನದ ನಂತರ ಮರುಪಾವತಿಸಿತ್ತು.
ರಾಖಿಯ ವಿತರಣೆಯನ್ನು ನಿಷ್ಕ್ರಿಯಗೊಂಡ ಕೊರಿಯರ್ ಸೇವೆಗೆ ವಹಿಸಲಾಗಿದೆ ಎಂಬ ಗ್ರಾಹಕರ ದೂರನ್ನು ಗಮನಿಸಿದ ಡಿಸಿಡಿಆರ್‌ಸಿ ಹೆಚ್ಚುವರಿ ಪರಿಹಾರ ಪಾವತಿಸಲು ಆದೇಶಿಸಿತು.
ರಾಖಿ ಉತ್ಪನ್ನವನ್ನು ಅಮೆಜಾನ್ ಜಾಲತಾಣದಲ್ಲಿ ಜಾಹೀರಾತು ಮಾಡಿದ್ದ ಮಾರಾಟಗಾರನಿಗೆ ಮಧ್ಯಸ್ಥಗಾರ ಅಮೆಜಾನ್ ₹100 ಅನ್ನು ಕಳಿಸಿಲ್ಲ ಎಂಬುದನ್ನೂ ಕಂಡುಕೊಂಡ ಆಯೋಗ ಉತ್ಪನ್ನ ತಲುಪಿಸಲು ಅಮೆಜಾನ್ ಜವಾಬ್ದಾರವಾಗಿದ್ದರೂ ಹಾಗೆ ಮಾಡಿಲ್ಲ ಎಂದಿತು.
ಹೀಗಾಗಿ ಸೇವಾ ನ್ಯೂನತೆ ಮತ್ತು ಅನ್ಯಾಯದ ವ್ಯಾಪಾರ ಪದ್ಧತಿಗೆ ಅಮೆಜಾನ್ ಹೊಣೆಗಾರನಾಗಿದೆ ಎಂದು ಅಧ್ಯಕ್ಷ ಸಮಿಂದರ ಆರ್ ಸುರ್ವೆ ಮತ್ತು ಸದಸ್ಯ ಸಮೀರ್ ಎಸ್ ಕಾಂಬ್ಳೆ ಅವರಿದ್ದ ಗ್ರಾಹಕ ನ್ಯಾಯಾಲಯ ತೀರ್ಪು ನೀಡಿದೆ.
ಗ್ರಾಹಕರಿಗೆ 60 ದಿನಗಳ ಒಳಗೆ ₹30,000 ಪರಿಹಾರ ಮತ್ತು ₹10,000 ದಾವೆ ವೆಚ್ಚ ಪಾವತಿಸಲು ಅಮೆಜಾನ್‌ಗೆ ಅದು ನಿರ್ದೇಶನ ನೀಡಿತು. ಸಮಯಕ್ಕೆ ಸರಿಯಾಗಿ ಪಾವತಿಸದಿದ್ದರೆ, ಪಾವತಿ ಮಾಡುವವರೆಗೆ ವಾರ್ಷಿಕ ಶೇ.6 ರಷ್ಟು ಬಡ್ಡಿ ವಿಧಿಸಲಾಗುತ್ತದೆ ಎಂದು ಗ್ರಾಹಕ ನ್ಯಾಯಾಲಯ ಎಚ್ಚರಿಕೆ ನೀಡಿತು.
2019ರಲ್ಲಿ ತನ್ನ ಸೋದರನಿಗೆ ₹100 ಮೌಲ್ಯದ 'ಮೋಟು ಪತ್ಲು ಕಿಡ್ಸ್ ರಾಖಿ' ಆರ್ಡರ್ ಮಾಡಿದ್ದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಈ ತೀರ್ಪು ನೀಡಲಾಗಿದೆ.