Pinarayi Vijayan
Pinarayi Vijayan  Facebook
ಸುದ್ದಿಗಳು

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪುತ್ರಿ ವಿರುದ್ಧದ ಲಂಚ ಆರೋಪ: ಅರ್ಜಿ ತಿರಸ್ಕರಿಸಿದ ವಿಚಕ್ಷಣಾ ನ್ಯಾಯಾಲಯ

Bar & Bench

ಕೊಚ್ಚಿನ್‌ ಗಣಿಗಾರಿಕೆ ಮತ್ತು ರುಟೈಲ್‌ ಲಿಮಿಟೆಡ್‌ನೊಂದಿಗೆ (ಸಿಎಂಆರ್‌ಎಲ್‌) ಗಣಿಗಾರಿಕೆ ಹಾಗೂ ಇತರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಉನ್ನತ ಹುದ್ದೆಯಲ್ಲಿರುವವರು ಲಂಚ ಪಡೆದಿದ್ದು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪಗಳ ಕುರಿತಾಗಿ ತನಿಖೆ ನಡೆಸುವಂತೆ ಕೋರಿದ್ದ ಅರ್ಜಿಯನ್ನು ಕೇರಳದ ವಿಚಕ್ಷಣಾ ನ್ಯಾಯಾಲಯ ಶನಿವಾರ ತಿರಸ್ಕರಿಸಿದೆ [ಗಿರೀಶ್‌ ಬಾಬು ಮತ್ತು ವೀಣಾ ಥೈಕಂಡಿಯಲ್‌ ನಡುವಣ ಪ್ರಕರಣ].

ಪಿಣರಾಯಿ ಅವರ ಪುತ್ರಿ ವೀಣಾ ಥೈಕಂಡಿಯಿಲ್ ಒಡೆತನದ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಎಕ್ಸಾಲಾಜಿಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಸಿಎಂಆರ್‌ಎಲ್‌ ₹ 1.72 ಕೋಟಿಗಳಷ್ಟು ಹಣವನ್ನು ಅಕ್ರಮವಾಗಿ ಪಾವತಿ ಮಾಡಿದೆ ಎಂದು ಆದಾಯ ತೆರಿಗೆ ಅಧಿಕಾರಿಗಳು ಸಲ್ಲಿಸಿದ್ದ ವರದಿ ಆಧರಿಸಿ ಮುವಾಟ್ಟುಪುಳದ ವಿಚಕ್ಷಣಾ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ವೀಣಾ ಅವರು ಅನಧಿಕೃತ ಲಾಭಕ್ಕಾಗಿ ಹಣ ಪಡೆದಿದ್ದಾರೆ ಎಂದು ಅರ್ಜಿದಾರರಾದ ಗಿರೀಶ್ ಬಾಬು ಎಂಬುವವರು ಆರೋಪಿಸಿದ್ದರು.

ಪಿಣರಾಯಿ ಅವರಲ್ಲದೆ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ನಾಯಕ ರಮೇಶ್‌ ಚೆನ್ನಿತ್ತಲ, ರಾಜಕಾರಣಿಗಳಾದ ಕುಂಜಾಲಿ ಕುಟ್ಟಿ, ವಿ ಕೆ ಇಬ್ರಾಹಿಂ ಕುಂಜು ಮತ್ತು ಎ ಗೋವಿಂದನ್ ಸೇರಿದಂತೆ ಉನ್ನತ ಹುದ್ದೆಯಲ್ಲಿರುವವರು ಲಂಚ ಪಡೆದಿದ್ದಾರೆ ಎಂದು ಬಾಬು ಹೆಸರಿಸಿದ್ದರು. ಈ ಎಲ್ಲರನ್ನೂ ಬಾಬು ಅವರ ಅರ್ಜಿ ಆರೋಪಿಗಳೆಂದು ಗುರುತಿಸಿತ್ತು.

ಪ್ರಕರಣದಲ್ಲಿ ಮೇಲ್ನೋಟಕ್ಕೆ ಹುರುಳಿಲ್ಲ ಎಂದು ಶನಿವಾರ ನಡೆದ ವಿಚಾರಣೆ ವೇಳೆ ತಿಳಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್‌ ವಿ ರಾಜು ಅವರು ಅರ್ಜಿ ತಿರಸ್ಕರಿಸಿದರು. ಭ್ರಷ್ಟಾಚಾರ ತಡೆ ಕಾಯಿದೆಯಡಿ ಆರೋಪಿಗಳು  ಅಪರಾಧ ಎಸಗಿದ್ದಾರೆ ಎಂದು ಮೇಲ್ನೋಟಕ್ಕೆ ಪ್ರಕರಣ ಸಾಬೀತುಪಡಿಸುವಷ್ಟು ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಅರ್ಜಿದಾರರು  ಕೇವಲ ಸಾಮಾನ್ಯ ಆರೋಪ ಮಾಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಸಿಎಂಆರ್‌ಎಲ್‌ ಮತ್ತಿತರರ ವಿರುದ್ಧ ಮಾಡಲಾದ ಸಡಿಲ ಆರೋಪಗಳ ಹೊರತಾಗಿ ಲಂಚದ ಆರೋಪ ಬೆಂಬಲಿಸುವಂತಹ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ ಎಂದು ನ್ಯಾಯಾಲಯ ನುಡಿದಿದೆ.

“ದೂರುದಾರರು ಮೇಲ್ನೋಟದ ಪ್ರಕರಣವನ್ನು ಸಾಬೀತುಪಡಿಸದ ಕಾರಣ, ಸೆಕ್ಷನ್‌ 19  ಅಥವಾ ಸೆ.17 ಎ ಅಡಿಯಲ್ಲಿ ಶಿಕ್ಷೆ ನೀಡುವುದಕ್ಕಾಗಿ ದೂರನ್ನು ಪೋಷಿಸುವ ಅಗತ್ಯವಿಲ್ಲ,  ಪ್ರತಿವಾದಿಗಳನ್ನು 1988ರ ಭ್ರಷ್ಟಾಚಾರ ತಡೆ ಕಾಯಿದೆಯಡಿ ಶಿಕ್ಷಿಸಬಹುದು ಎನ್ನುವುದನ್ನು ತೋರಿಸುವಂತಹ ಸಾಕಷ್ಟು ಸಾಕ್ಷ್ಯಾಂಶಗಳನ್ನು ದೂರು ಮತ್ತು ಅದರ ಜೊತೆಗೆ ಸಲ್ಲಿಸಲಾದ ಸಾಕ್ಷ್ಯಾಧಾರಗಳು ಬಹಿರಂಗಪಡಿಸುವುದಿಲ್ಲ. ಈ ದೂರು ತಿರಸ್ಕಾರಕ್ಕೆ ಅರ್ಹವಾಗಿದೆ” ಎಂದು ನ್ಯಾಯಾಲಯ ನುಡಿದಿದೆ.