Vijayanagara Srikrishnadevaraya University VC Prof. Siddu alagur and Karnataka HC 
ಸುದ್ದಿಗಳು

ಶ್ರೀಕೃಷ್ಣದೇವರಾಯ ವಿವಿ ಕುಲಪತಿ ಪ್ರೊ. ಸಿದ್ದು ಅಲಗೂರು ನೇಮಕಾತಿ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ಮೋತಿಲಾಲ್ ನೆಹರೂ ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯ (ಎಂಎಂಎನ್‌ಐಟಿ) ರಿಜಿಸ್ಟ್ರಾರ್ 2020ರ ಮೇ 18ರಂದು ನೀಡಿದ ಪತ್ರವನ್ನು ಸಿದ್ದು ಅಲಗೂರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

Bar & Bench

ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ಸಿದ್ದು ಅಲಗೂರು ಅವರನ್ನು ಬಳ್ಳಾರಿಯಲ್ಲಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ನೇಮಕ ಮಾಡಿ ಹೊರಡಿಸಿದ ಆದೇಶ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

ಬೆಳಗಾವಿಯ ತಿಳಕವಾಡಿ ನಿವಾಸಿ ಹಾಗೂ ಶಿಕ್ಷಣ ತಜ್ಞ ಡಾ. ಎಂ ಆರ್ ನಿಂಬಾಳ್ಕರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ರಾಣಿ ಚನ್ನಮ್ಮ ವಿವಿಯಲ್ಲಿ ಕಂಪ್ಯೂಟರ್ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾಗಿರುವ ಪ್ರೊ. ಸಿದ್ದು ಅಲಗೂರು, 1988-89ರಿಂದ 1991-92ನೇ ಸಾಲಿನಲ್ಲಿ ಉತ್ತರ ಪ್ರದೇಶದ ಅಲಾಹಾಬಾದ್ ವಿವಿಯಿಂದ ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವುದಾಗಿ ತಿಳಿಸಿದ್ದಾರೆ. ಅಲಾಹಾಬಾದ್ ವಿವಿ ರಿಜಿಸ್ಟ್ರಾರ್ ಮಾಹಿತಿ ಹಕ್ಕು ಕಾಯಿದೆ ಅಡಿ 2019ರ ನವೆಂಬರ್‌ 14ರಂದು ನೀಡಿದ್ದ ಪತ್ರದಲ್ಲಿ 1989ರಿಂದ 1991-92 ಅವಧಿಯಲ್ಲಿ ವಿವಿಯಲ್ಲಿ ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸ್ನಾತಕೊತ್ತರ ಕೋರ್ಸ್ ಇರಲಿಲ್ಲ ಎಂದು ದೃಢಪಡಿಸಿದ್ದಾರೆ. ಹೀಗಾಗಿ, ನಕಲಿ ದಾಖಲೆ ಸಲ್ಲಿಸಿ ಗಿಟ್ಟಿಸಿಕೊಂಡಿರುವ ಪ್ರಾಧ್ಯಾಪಕ ಹುದ್ದೆಯಿಂದ ಸಿದ್ದು ಅಲಗೂರು ಅವರನ್ನು ವಜಾಗೊಳಿಸಬೇಕು. ಶ್ರೀಕೃಷ್ಣದೇವರಾಯ ವಿವಿಗೆ ಕುಲಪತಿಯಾಗಿ ಅವರನ್ನು ನೇಮಕ ಮಾಡಿ 2019ರ ಜುಲೈ 30ರಂದು ಹೊರಡಿಸಿದ ಆದೇಶ ರದ್ದುಪಡಿಸಬೇಕೆಂದು ಅರ್ಜಿದಾರರು ಕೋರಿದ್ದರು.

ಆದರೆ, ಮೋತಿಲಾಲ್ ನೆಹರೂ ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯ (ಎಂಎಂಎನ್‌ಐಟಿ) ರಿಜಿಸ್ಟ್ರಾರ್ 2020ರ ಮೇ 18ರಂದು ನೀಡಿದ ಪತ್ರವನ್ನು ಸಿದ್ದು ಅಲಗೂರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಎಂಎಂಎನ್‌ಐಟಿ ಅಲಾಹಾಬಾದ್ ವಿವಿಯ ಸಂಯೋಜಿತ ಕಾಲೇಜು ಆಗಿದೆ. ಸಿದ್ದು ಅಲಗೂರು ಸ್ನಾತಕೊತ್ತರ ಪದವಿ ಪ್ರಮಾಣ ಪತ್ರ ನೈಜ ಮತ್ತು ಸರಿಯಾಗಿದೆ ಎಂಬುದಾಗಿ ಎಂಎಂಎನ್‌ಐಟಿ ರಿಜಿಸ್ಟ್ರಾರ್ ತಿಳಿಸಿದ್ದಾರೆ. ಆದ್ದರಿಂದ ಅಲಹಾಬಾದ್ ವಿವಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸ್ನಾತಕೋತ್ತರ ಕೋರ್ಸ್ ಹೊಂದಿರಲಿಲ್ಲ ಎನ್ನುವ ವಿವಿಯ ರಿಜಿಸ್ಟ್ರಾರ್ ಪತ್ರವನ್ನು ಅಧಿಕೃತ ದಾಖಲೆ ಎಂಬುದಾಗಿ ಪರಿಗಣಿಸಲಾಗದು. ಅಂತೆಯೇ, ಸಿದ್ದು ಅಲಗೂರು ನಕಲಿ ದಾಖಲೆ ಸಲ್ಲಿಸಿ ಅಕ್ರಮವಾಗಿ ರಾಣಿ ಚನ್ನಮ್ಮ ವಿವಿಯಲ್ಲಿ ಕಂಪ್ಯೂಟರ್ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಮತ್ತು ಶ್ರೀಕೃಷ್ಣದೇವರಾಯ ವಿವಿಯ ಕುಲಪತಿ ಹುದ್ದೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗದು ಎಂದು ಅಭಿಪ್ರಾಯಪಟ್ಟ ಪೀಠವು ಮನವಿ ವಜಾಗೊಳಿಸಿತು.