ವಿಜಯ್ ಅಭಿನಯದ ತಮಿಳು ಚಿತ್ರ ಜನ ನಾಯಗನ್ ಚಿತ್ರದ ಸೆನ್ಸಾರ್ ಅನುಮತಿ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಚಿತ್ರದ ಬಿಡುಗಡೆ ದಿನಾಂಕ ಅನಿಶ್ಚಿತವಾಗಿಟ್ಟ ಮದ್ರಾಸ್ ಹೈಕೋರ್ಟ್‌ನ ಮಧ್ಯಂತರ ಆದೇಶ ಪ್ರಶ್ನಿಸಿ ಚಿತ್ರ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಮೇಲ್ಮನವಿ ಸಲ್ಲಿಸಿದೆ.
ಮದ್ರಾಸ್ ಹೈಕೋರ್ಟ್ ಏಕಸದಸ್ಯ ಪೀಠ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಸಿಬಿಎಫ್‌ಸಿ ಶಿಫಾರಸಿಗೆ ಅನುಗುಣವಾಗಿ ಚಿತ್ರ ಬಿಡುಗಡೆಗೆ ಸಿಬಿಎಫ್‌ಸಿ ಕೂಡಲೇ ಅನುಮತಿ ನೀಡಬೇಕೆಂದು ಜನವರಿ 9ರ ಬೆಳಿಗ್ಗೆ ಆದೇಶಿಸಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಸಿಬಿಎಫ್‌ಸಿಯು ಆದೇಶವನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ವಿಭಾಗೀಯ ಪೀಠವನ್ನು ಕೋರಿತ್ತು. ವಾದ ಆಲಿಸಿದ್ದ ವಿಭಾಗೀಯ ಪೀಠ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿತ್ತು.
ವಿಭಾಗೀಯ ಪೀಠದ ಆದೇಶ ಪ್ರಶ್ನಿಸಿ ಚಿತ್ರ ನಿರ್ಮಾಣ ಸಂಸ್ಥೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ವಿಜಯ್ ಅವರು ತಾವು ಈಚೆಗೆ ಸ್ಥಾಪಿಸಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದ ಹಿನ್ನೆಲೆಯಲ್ಲಿ 'ಜನ ನಾಯಗನ್' ಅವರ ಕೊನೆಯ ಚಿತ್ರ ಎಂದು ಹೇಳಲಾಗುತ್ತಿದೆ. ಚಿತ್ರ ಕಳೆದ ಶುಕ್ರವಾರದಂದು (ಜನವರಿ 9) ತೆರೆ ಕಾಣಬೇಕಿತ್ತು.
ನಿರ್ಮಾಪಕರು 2025 ಡಿಸೆಂಬರ್ 18ರಂದು ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಸಿಬಿಎಫ್‌ಸಿ ಪರಿಶೀಲನಾ ಸಮಿತಿಯು ವೈಯಕ್ತಿಕ ವಿಚಾರಣೆಯ ನಂತರ, ಹಿಂಸಾಚಾರ, ಹೋರಾಟದ ದೃಶ್ಯಗಳು, ರಕ್ತಪಾತದ ದೃಶ್ಯಗಳು ಹಾಗೂ ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದ ಸಂಕ್ಷಿಪ್ತ ಉಲ್ಲೇಖಗಳನ್ನು ಉಲ್ಲೇಖಿಸಿ ಕೆಲವು ದೃಶ್ಯಗಳನ್ನು ತೆಗೆದು ಹಾಕುವಂತೆ ಸೂಚಿಸಿತ್ತು. ಹಾಗೆ ಮಾಡಿದರೆ ಚಿತ್ರಕ್ಕೆ ಯುಎ 16+ ಪ್ರಮಾಣ ಪತ್ರ ನೀಡುವಂತೆ ಶಿಫಾರಸ್ಸು ಮಾಡಿತ್ತು. ಸೂಚಿಸಿದ್ದ ಎಲ್ಲಾ ತಿದ್ದುಪಡಿ ಮಾಡಿದ್ದ ನಿರ್ಮಾಪಕರು ಚಿತ್ರದ ಹೊಸ ಆವೃತ್ತಿಯನ್ನು ಸಲ್ಲಿಸಿದ್ದರು. ನಂತರ ಚಿತ್ರಕ್ಕೆ ಯುಎ 16+ ಪ್ರಮಾಣಪತ್ರ ನೀಡಲಾಗುವುದು ಎಂದು ಅವರಿಗೆ ತಿಳಿಸಲಾಗಿತ್ತು.
ಇಷ್ಟೆಲ್ಲಾ ಆದರೂ ಧಾರ್ಮಿಕ ಭಾವನೆಗಳು ಮತ್ತು ಸಶಸ್ತ್ರ ಪಡೆಗಳ ಚಿತ್ರಣಕ್ಕೆ ಸಂಬಂಧಿಸಿದ ದೂರು ಬಂದಿರುವುದರಿಂದ ಚಲನಚಿತ್ರ (ಪ್ರಮಾಣೀಕರಣ) ನಿಯಮಾವಳಿ 24ರ ಅಡಿ ಚಿತ್ರವನ್ನು ಮರುಪರಿಶೀಲನಾ ಸಮಿತಿಗೆ ಕಳುಹಿಸಲಾಗಿದೆ ಎಂಬ ಇಮೇಲ್ ತಮಗೆ ಬಂದಿರುವುದನ್ನು ನಿರ್ಮಾಪಕರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಚಿತ್ರ ನಿರ್ಮಾಪಕರು ಈಗಾಗಲೇ ಸಿಬಿಎಫ್‌ಸಿ ಸೂಚಿಸಿದಂತೆ ಕೆಲ ದೃಶ್ಯಗಳನ್ನು ತೆಗೆದು ಹಾಕಿರುವುದರಿಂದ ನ್ಯಾಯಾಲಯ ಸಿಬಿಎಫ್‌ಸಿಗೆ ಯು/ಎ 16 ಪ್ರಮಾಣಪತ್ರವನ್ನು ತಕ್ಷಣವೇ ನೀಡುವಂತೆ ನ್ಯಾ. ಪಿ ಟಿ ಆಶಾ ಅವರಿದ್ದ ಏಕಸದಸ್ಯ ಪೀಠ ಆದೇಶಿಸಿತ್ತು.
ಆದರೆ ಮುಖ್ಯ ನ್ಯಾಯಮೂರ್ತಿ ಎಂ ಎಂ ಶ್ರೀವಾಸ್ತವ ನೇತೃತ್ವದ ವಿಭಾಗೀಯ ಪೀಠ ಏಕಸದಸ್ಯ ಪೀಠದ ತೀರ್ಪಿಗೆ ತಡೆ ನೀಡಿ ಮಧ್ಯಂತರ ಆದೇಶ ಪ್ರಕಟಿಸಿತ್ತು. ಕೇಂದ್ರ ಸರ್ಕಾರಕ್ಕೆ ಪ್ರತಿಕ್ರಿಯೆ ಸಲ್ಲಿಸಲು ಅವಕಾಶ ನೀಡಿಲ್ಲ ಎಂಬ ಕಾರಣ ಆಧರಿಸಿ ತಡೆ ನೀಡಲಾಗಿತ್ತು.