Stone crushers and Karnataka HC 
ಸುದ್ದಿಗಳು

ಕೆಆರ್‌ಎಸ್‌ ಸುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ನಿಷೇಧ: ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲು ಅನುಮತಿ

ಘೋಷಿತ ಜಲಾಶಯಗಳನ್ನು ರಕ್ಷಿಸುವ ಸದುದ್ದೇಶದಿಂದ ಮಧ್ಯಂತರ ಆದೇಶ ಮಾಡಲಾಗಿದೆ. ಇಂಥ ಪ್ರಕರಣಗಳಲ್ಲಿ ಹಕ್ಕಿನ ವಿಚಾರ ಅನ್ವಯಿಸುವುದಿಲ್ಲ. ಯಾರು ಬೇಕಾದರೂ ನ್ಯಾಯಾಲಯದ ಮೆಟ್ಟಿಲೇರಬಹುದು ಎಂದು ನ್ಯಾಯಾಲಯ ಆದೇಶ ಮಾಡಿದೆ.

Bar & Bench

ಮಂಡ್ಯ ಜಿಲ್ಲೆಯಲ್ಲಿರುವ ಕೃಷ್ಣರಾಜಸಾಗರ ಜಲಾಶಯದ 20 ಕಿ.ಮೀ. ವ್ಯಾಪ್ತಿಯಲ್ಲಿ ಸ್ಫೋಟ ಗಣಿಗಾರಿಕೆಗೆ ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಕಳೆದ ವರ್ಷ ಮಾಡಿರುವ ಮಧ್ಯಂತರ ಆದೇಶ ಪಾಲಿಸದಿರುವುದರಿಂದ ಸಂಬಂಧಿತರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಕರ್ನಾಟಕ ಹೈಕೋರ್ಟ್‌ ಈಚೆಗೆ ಅನುಮತಿಸಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ವೈ ಸಿ ಮಧು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್.‌ ದೀಕ್ಷಿತ್‌ ಮತ್ತು ಉಮೇಶ್‌ ಎಂ. ಅಡಿಗ ಅವರ ರಜಾಕಾಲೀನ ವಿಭಾಗೀಯ ಪೀಠ ಇತ್ಯರ್ಥಪಡಿಸಿತು.

ಘೋಷಿತ ಜಲಾಶಯಗಳನ್ನು ರಕ್ಷಿಸುವ ಸದುದ್ದೇಶದಿಂದ ಮಧ್ಯಂತರ ಆದೇಶ ಮಾಡಲಾಗಿದೆ. ಇಂಥ ಪ್ರಕರಣಗಳಲ್ಲಿ ಹಕ್ಕಿನ ವಿಚಾರ ಅನ್ವಯಿಸುವುದಿಲ್ಲ. ಯಾರು ಬೇಕಾದರೂ ನ್ಯಾಯಾಲಯದ ಮೆಟ್ಟಿಲೇರಬಹುದು ಎಂದು ನ್ಯಾಯಾಲಯ ಆದೇಶ ಮಾಡಿದೆ. ಮಂಚಮ್ಮ ದೇವಿ ಸ್ಟೋನ್‌ ಕ್ರಷರ್‌ ಮತ್ತು ಎಂ-ಸ್ಯಾಂಡ್‌ಗೆ ಆದೇಶದ ಪ್ರತಿ ಕಳುಹಿಸುವಂತೆಯೂ ನ್ಯಾಯಾಲಯವು ರಿಜಿಸ್ಟ್ರಿಗೆ ನಿರ್ದೇಶಿಸಿದೆ. ಅಲ್ಲದೇ, ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದರೆ ಸರ್ಕಾರವು ಹಕ್ಕಿನ ಪ್ರಶ್ನೆಯನ್ನು (ಲೋಕಸ್‌ ಸ್ಟಾಂಡೈ) ಎತ್ತುವಂತಿಲ್ಲ ಎಂದೂ ಸ್ಪಷ್ಟಪಡಿಸಿದೆ.

ಅರ್ಜಿದಾರರ ಪರ ವಕೀಲ ಎನ್‌ ಕಿರಣ್‌ ಅವರು “ಕೆಆರ್‌ಎಸ್‌ ಸುತ್ತಲು 20 ಕಿ.ಮೀ. ವ್ಯಾಪ್ತಿಯಲ್ಲಿ ಸ್ಫೋಟ ಗಣಿಗಾರಿಕೆಗೆ ಅವಕಾಶವಿಲ್ಲ ಎಂದು ಹೈಕೋರ್ಟ್‌ ಮಧ್ಯಂತರ ಆದೇಶ ಮಾಡಿದೆ. ಅದಾಗ್ಯೂ, ಸ್ಫೋಟ ಮತ್ತು ಗಣಿಗಾರಿಕೆ ನಡೆಸಲಾಗುತ್ತಿದೆ. ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸಲು ಅಧಿಕೃತ ಪ್ರತಿವಾದಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ” ಎಂದು ಆಕ್ಷೇಪಿಸಿದರು.

ರಾಜ್ಯ ಸರ್ಕಾರದ ಪರ ವಕೀಲರು “ಮೂಲ ಅರ್ಜಿಯಲ್ಲಿ ದಾವೆದಾರರಾಗಿಲ್ಲ ಎನ್ನದೇ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸುವ ಮೂಲಕ ಅರ್ಜಿದಾರರು ಹೈಕೋರ್ಟ್‌ ಆದೇಶ ಜಾರಿಗೆ ಮುಂದಾಗಬಹುದು” ಎಂದರು.

ಇದಕ್ಕೂ ಮುನ್ನ, ಕೆಲಕಾಲ ವಾದ ಆಲಿಸಿದ ಪೀಠವು ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲು ಅನುಮತಿಸಿ, ಅರ್ಜಿ ಇತ್ಯರ್ಥಪಡಿಸಬಹುದೇ ಎಂದಿತು. ಅದಕ್ಕೆ ಅರ್ಜಿದಾರರ ಪರ ವಕೀಲರು ಒಪ್ಪಿಕೊಂಡರು.

ಅರ್ಜಿಯಲ್ಲಿ ರಾಜ್ಯ ಸರ್ಕಾರ, ರಾಜ್ಯಮಟ್ಟದ ಜಲಾಶಯ ಸುರಕ್ಷತಾ ಸಮಿತಿ, ಮಂಚಮ್ಮ ದೇವಿ ಸ್ಟೋನ್‌ ಕ್ರಷರ್‌ ಮತ್ತು ಎಂ-ಸ್ಯಾಂಡ್‌ ಮತ್ತು ಮಂಡ್ಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ಪ್ರತಿವಾದಿಗಳನ್ನಾಗಿಸಲಾಗಿತ್ತು.

2024ರ ಜನವರಿ 8ರಂದು ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಕೃಷ್ಣರಾಜ ಸಾಗರ ಜಲಾಶಯದ ಸುತ್ತಲಿನ 20 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಗಣಿಗಾರಿಕೆ/ಕ್ವಾರಿ ಚಟುವಟಿಕೆಗಳನ್ನು ನಿಷೇಧಿಸಿ ಕರ್ನಾಟಕ ಹೈಕೋರ್ಟ್‌ ಮಧ್ಯಂತರ ಆದೇಶ ಮಾಡಿದೆ.

ಜಲಾಶಯ ಸುರಕ್ಷತಾ ಕಾಯಿದೆ 2021ರ ನಿಬಂಧನೆಗಳ ಅಡಿ ಶತಮಾನಕ್ಕೂ ಹಳೆಯದಾದ ಜಲಾಶಯದ ಸುರಕ್ಷತೆ ಕುರಿತು ಮೇಲಿನ ಆದೇಶ ಮಾಡಲಾಗಿದೆ. ಇದಕ್ಕೆ ಪೂರಕವಾಗಿ ಆದೇಶ ಹೊರಡಿಸುವಂತೆ ಜಿಲ್ಲಾಡಳಿತ ಮತ್ತು ಗಣಿಗಾರಿಕೆ ಇಲಾಖೆಗೆ ನ್ಯಾಯಾಲಯ ನಿರ್ದೇಶಿಸಿದೆ. ರಾಜ್ಯ ಸರ್ಕಾರವು ನ್ಯಾಯಾಲಯದ ಆದೇಶಕ್ಕೆ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ನೀಡಬೇಕು ಎಂದೂ ನ್ಯಾಯಾಲಯ ಹೇಳಿದೆ.