ಕೆಆರ್‌ಎಸ್‌ ಸುತ್ತಮುತ್ತಲಿನ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ನಿಷೇಧ ವಿಧಿಸಿದ ಕರ್ನಾಟಕ ಹೈಕೋರ್ಟ್‌

ರಾಜ್ಯ ಸರ್ಕಾರವು ನ್ಯಾಯಾಲಯದ ಆದೇಶಕ್ಕೆ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ನೀಡಬೇಕು ಎಂದೂ ನ್ಯಾಯಾಲಯ ಹೇಳಿದೆ.
Stone crushers and Karnataka HC
Stone crushers and Karnataka HC

ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಕೃಷ್ಣರಾಜ ಸಾಗರ ಜಲಾಶಯದ ಸುತ್ತಲಿನ 20 ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಗಣಿಗಾರಿಕೆ/ಕ್ವಾರಿ ಚಟುವಟಿಕೆಗಳನ್ನು ನಿಷೇಧಿಸಿ ಕರ್ನಾಟಕ ಹೈಕೋರ್ಟ್‌ ಸೋಮವಾರ ಆದೇಶಿಸಿದೆ.

ಗಣಿಗಾರಿಕೆಗೆ ಪರವಾನಗಿ ನೀಡುವುದಕ್ಕೆ ಭೂಪರಿವರ್ತನೆಗೂ ಮುನ್ನ ಪರೀಕ್ಷಾರ್ಥ ಸ್ಫೋಟ ನಡೆಸಿದ ಹಾನಿಯ ಸಾಧ್ಯತೆಯನ್ನು ಪರಿಗಣಿಸಬೇಕು ಎಂದು ಜಿಲ್ಲಾಧಿಕಾರಿ ಷರತ್ತು ವಿಧಿಸಿರುವುದನ್ನು ಪ್ರಶ್ನಿಸಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸಿ ಜಿ ಕುಮಾರ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಜಲಾಶಯ ಸುರಕ್ಷತಾ ಕಾಯಿದೆ 2021 ನಿಬಂಧನೆಗಳ ಅಡಿ ಶತಮಾನಕ್ಕೂ ಹಳೆಯದಾದ ಜಲಾಶಯದ ಸುರಕ್ಷತೆ ಕುರಿತು ಮೇಲಿನ ಆದೇಶ ಮಾಡಲಾಗಿದೆ. ಇದಕ್ಕೆ ಪೂರಕವಾಗಿ ಆದೇಶ ಹೊರಡಿಸುವಂತೆ ಜಿಲ್ಲಾಡಳಿತ ಮತ್ತು ಗಣಿಗಾರಿಕೆ ಇಲಾಖೆಗೆ ನ್ಯಾಯಾಲಯ ನಿರ್ದೇಶಿಸಿದೆ. ರಾಜ್ಯ ಸರ್ಕಾರವು ನ್ಯಾಯಾಲಯದ ಆದೇಶಕ್ಕೆ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ನೀಡಬೇಕು ಎಂದೂ ನ್ಯಾಯಾಲಯ ಹೇಳಿದೆ.

ಕಾವೇರಿ ನೀರಾವರಿ ನಿಗಮ ನಡೆಸಿದ ಪರೀಕ್ಷಾರ್ಥ ಸ್ಫೋಟ ವರದಿ ಆಧರಿಸಿ ಸಕ್ಷಮ ಪ್ರಾಧಿಕಾರ ಕೈಗೊಳ್ಳುವ ನಿರ್ಧಾರವನ್ನು ಅರ್ಜಿದಾರರು ಪಾಲಿಸಬೇಕು. ಪರೀಕ್ಷಾರ್ಥ ವರದಿ ಸ್ವೀಕಾರವಾಗುವವರೆಗೆ ಭೂಮಿಯನ್ನು ಕೃಷಿಯೇತರ ಚಟುವಟಿಕೆಗೆ ಬಳಸಲು ಅರ್ಜಿದಾರರಿಗೆ ಅನುಮತಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಎಲ್‌ ಚಿದಾನಂದಯ್ಯ ಅವರು ಕ್ವಾರಿ ಚಟುವಟಿಕೆ ಅಥವಾ ಸ್ಫೋಟ ಚಟುವಟಿಕೆ ನಡೆಸಲು ಅನುಮತಿಸಬೇಕು. ಈಗಾಗಲೇ ಇತರರಿಗೆ ಅನುಮತಿಸಲಾಗಿದೆ ಎಂದರು.

ಇದಕ್ಕೆ ಸಿಜೆ ಅವರು “ಬೇರೆಯವರಿಗೆ ಅನುಮತಿಸುವಾಗ ಜಲಾಶಯ ಸುರಕ್ಷತಾ ಕಾಯಿದೆ ಇರುವಿಕೆಯ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಲಾಗಿರಲಿಲ್ಲ ಎಂದೆನಿಸುತ್ತದೆ. ಸ್ಫೋಟ ನಡೆಸದೇ ಗಣಿಗಾರಿಕೆಗೆ ಅನುಮತಿ ನೀಡುವುದು ಕೆಆರ್‌ಎಸ್ ಜಲಾಶಯ ಪ್ರದೇಶದಲ್ಲಿ ಮಾತ್ರವಲ್ಲದೆ ಇಡೀ ಕರ್ನಾಟಕ ಮತ್ತು ಸಂಬಂಧಿತ ಎಲ್ಲರ ಮೇಲೆ ಪರಿಣಾಮ ಬೀರುತ್ತದೆ” ಎಂದರು.

Also Read
ಕೆಆರ್‌ಎಸ್‌ ಸುರಕ್ಷತೆ ಕುರಿತ ಪ್ರಕರಣ: ಜಲಾಶಯ ಸುರಕ್ಷತಾ ಸಮಿತಿಯನ್ನು ಪಕ್ಷಕಾರನಾಗಿಸಲು ಸೂಚಿಸಿದ ಹೈಕೋರ್ಟ್‌

ನ್ಯಾ. ದೀಕ್ಷಿತ್‌ ಅವರು “ತಿ.ತಾ. ಶರ್ಮಾ ಅವರ ಪುಸ್ತಕ ಓದಿದರೆ ರಾಜ್ಯದಲ್ಲಿ ಮೂರನೇ ಅತಿದೊಡ್ಡ ಜಲಾಶಯವಾದ ಕೆಆರ್‌ಎಸ್‌ ಅನ್ನು ಸ್ಥಳೀಯರ ರಕ್ತ ಮತ್ತು ಬೆವರಿನ ಶ್ರಮದಿಂದ ನಿರ್ಮಿಸಲಾಗಿದ್ದು, ಅದು ಇನ್ನು ಮಾಸಿಲ್ಲ ಎಂಬುದು ಅರಿವಿಗೆ ಬರುತ್ತದೆ” ಎಂದರು.

ಅಮಿಕಸ್‌ ಕ್ಯೂರಿ ಆದಿತ್ಯ ಸೋಂಧಿ ಅವರು “ಕಾನೂನಿನ ಪ್ರಕಾರ ಜಲಾಶಯ ಸುರಕ್ಷತಾ ರಾಜ್ಯ ಸಮಿತಿಯು ಕೆಆರ್‌ಎಸ್‌ ಮೇಲೆ ನಿಗಾ ಇಡಬೇಕು” ಎಂದರು. ಇದಕ್ಕೆ ಪೀಠ ಸಹಮತ ವ್ಯಕ್ತಪಡಿಸಿತು.

Related Stories

No stories found.
Kannada Bar & Bench
kannada.barandbench.com