Virtual Hearing and Supreme Court  
ಸುದ್ದಿಗಳು

[ವರ್ಚುವಲ್‌ ವಿಚಾರಣೆ] ಕೆಲವರಿಗೆ ನ್ಯಾಯಾಲಯ ತೆರೆಯಬೇಕು, ಕೆಲವರಿಗೆ ಬೇಡ: ಸುಪ್ರೀಂ ಕೋರ್ಟ್

ಆಗಸ್ಟ್ 24ರಿಂದ ಸಂಪೂರ್ಣ ಭೌತಿಕ ವಿಚಾರಣೆಗೆ ಮರಳುವ ಉತ್ತರಾಖಂಡ ಹೈಕೋರ್ಟ್ ನಿರ್ಧಾರ ಪ್ರಶ್ನಿಸಿ ವಕೀಲರ ಸಂಘಟನೆಯೊಂದು ಸಲ್ಲಿಸಿದ್ದ ಅರ್ಜಿಯನ್ನು ಸಿಜೆಐ ಎನ್‌ ವಿ ರಮಣ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್‌ ಅವರಿದ್ದ ಪೀಠ ವಿಚಾರಣೆ ನಡೆಸಿತು.

Bar & Bench

ಪ್ರಕರಣಗಳ ವರ್ಚುವಲ್‌ ವಿಚಾರಣೆಗೆ ಸಂಬಂಧಿಸಿದಂತೆ ವಕೀಲ ವರ್ಗ ಹೇಗೆ ವಿಭಜನೆಯಾಗಿದೆ ಮತ್ತು ಭೌತಿಕ ಅಥವಾ ನೇರ ವಿಚಾರಣೆಗೆ ನ್ಯಾಯಾಲಯಗಳು ಹಿಂತಿರುಗುವ ಬಗ್ಗೆ ವಕೀಲರಲ್ಲಿ ಹೇಗೆ ಅಭಿಪ್ರಾಯ ಭೇದ ಉಂಟಾಗಿದೆ ಎಂಬುದನ್ನು ಸುಪ್ರೀಂಕೋರ್ಟ್‌ ಮಂಗಳವಾರ ಗಮನಿಸಿತು.

ಆಗಸ್ಟ್ 24 ರಿಂದ ಸಂಪೂರ್ಣ ಭೌತಿಕ ಅಥವಾ ನೇರ ವಿಚಾರಣೆಗೆ ಮರಳುವ ಉತ್ತರಾಖಂಡ ಹೈಕೋರ್ಟ್ ನಿರ್ಧಾರವನ್ನು ಪ್ರಶ್ನಿಸಿ ವಕೀಲರ ಸಂಘಟನೆಯೊಂದು ಸಲ್ಲಿಸಿದ್ದ ಅರ್ಜಿಯನ್ನು ಸಿಜೆಐ ಎನ್‌ ವಿ ರಮಣ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್‌ ಅವರಿದ್ದ ಪೀಠ ವಿಚಾರಣೆ ನಡೆಸುವ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿತು. "ನಾವು ಇದನ್ನು ಪರಿಶೀಲಿಸುತ್ತೇವೆ. ಕೆಲವರಿಗೆ ನ್ಯಾಯಾಲಯ ತೆರೆಯಬೇಕು ಕೆಲವರಿಗೆ ಬೇಡ" ಎಂದು ಪೀಠ ಹೇಳಿತು.

ಅರ್ಜಿದಾರ ಅಖಿಲ ಭಾರತ ನ್ಯಾಯವಾದಿಗಳ ಸಂಘದ (ಎಐಜೆಎ) ಪರವಾಗಿ ಹಾಜರಾದ ವಕೀಲ ಸಿದ್ದಾರ್ಥ್ ಆರ್ ಗುಪ್ತಾ,” ಉತ್ತರಾಖಂಡ ಹೈಕೋರ್ಟ್ ವರ್ಚುವಲ್ ವಿಚಾರಣೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ನಿರ್ಧರಿಸಿದೆ” ಎಂದು ವಾದಿಸಿದ ಬಳಿಕ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಕೋವಿಡ್ ಪ್ರಕರಣದ ಇಳಿಕೆಯ ನಂತರ, ವಿವಿಧ ಹೈಕೋರ್ಟ್‌ಗಳು ಪ್ರಕರಣಗಳ ಭೌತಿಕ ವಿಚಾರಣೆಯನ್ನು ಪುನರಾರಂಭಿಸುತ್ತಿವೆ, ಆದರೂ ಅನೇಕ ಹೈಕೋರ್ಟ್‌ಗಳು ವಕೀಲರು ಬಯಸಿದಲ್ಲಿ ವೀಡಿಯೊ ಕಾನ್ಫರೆನ್ಸ್‌ ಮೂಲಕ ಕಲಾಪದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುತ್ತಿವೆ. ಆದರೂ ಆಗಸ್ಟ್ 16 ರಂದು ಹೊರಡಿಸಿದ ಅಧಿಸೂಚನೆಯಲ್ಲಿ ಉತ್ತರಾಖಂಡ ಹೈಕೋರ್ಟ್ ಆಗಸ್ಟ್ 24 ರಿಂದ ಭೌತಿಕವಾಗಿ ಹಾಜರಾಗುವಂತೆ ವಕೀಲರಿಗೆ ಸೂಚಿಸಿತ್ತು.

ಈ ನಿರ್ಧಾರವನ್ನು ಪ್ರಶ್ನಿಸುವ ಜೊತೆಗೆ ಎಐಜೆಎ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಯಲ್ಲಿ ಭಾಗವಹಿಸುವುದನ್ನು ಸಂವಿಧಾನದ 19ನೇ ವಿಧಿಯ (1) (ಎ) ಮತ್ತು (ಜಿ) ಕಲಮಿನ ಅಡಿ ಮೂಲಭೂತ ಹಕ್ಕು ಎಂದು ಘೋಷಿಸುವಂತೆ ಕೋರಿತ್ತು. ಆದ್ದರಿಂದ ವರ್ಚುವಲ್‌ ವಿಧಾನದ ಮೂಲಕ ವಕೀಲರು ವಾದ ಮಂಡಿಸುವುದನ್ನು ದೇಶದ ಯಾವ ಹೈಕೋರ್ಟ್‌ಗಳು ಕೂಡ ನಿರಾಕರಿಸದಂತೆ ನಿರ್ದೇಶನ ನೀಡಬೇಕು ಎಂದು ಅದು ವಾದಿಸಿತ್ತು.