ಸುದ್ದಿಗಳು

ಪ್ರಕರಣಗಳ ಪಟ್ಟಿ ವಿಚಾರದಲ್ಲಿ ನ್ಯಾಯಾಲಯಗಳು ಪಾರದರ್ಶಕವಾಗಿರಬೇಕು: ಖ್ಯಾತ ವಕೀಲ‌ ಕಪಿಲ್‌ ಸಿಬಲ್‌

Bar & Bench

“ಸಾಮಾನ್ಯ ಜನರ ಪ್ರಕರಣಗಳು ರಿಜಿಸ್ಟ್ರಿಗಳಲ್ಲಿ ಲಯವಾಗುತ್ತಿದ್ದು ಬಲಾಢ್ಯರ ಪ್ರಕರಣಗಳನ್ನಷ್ಟೇ ಪಟ್ಟಿ ಮಾಡಲಾಗುತ್ತಿದೆ. ಪ್ರಕರಣಗಳನ್ನು ಪಟ್ಟಿ ಮಾಡುವ ವಿಷಯದಲ್ಲಿ ನ್ಯಾಯಾಲಯ ಪಾರದರ್ಶಕವಾಗಿರಬೇಕು. ನ್ಯಾಯಾಲಯದೊಳಗಿನ ಕಾರ್ಯವಿಧಾನ ನ್ಯಾಯಾಲಯದ ವಿಷಯ. ವ್ಯವಸ್ಥೆಯನ್ನು ಹಳಿಗೆ ತರಲು ನ್ಯಾಯಾಲಯದ ಮೇಲೆ ಸಾಕಷ್ಟು ಹೊರೆ ಇದೆ” ಎಂದು ಹಿರಿಯ ವಕೀಲ ಕಪಿಲ್‌ ಸಿಬಲ್‌ ಅಭಿಪ್ರಾಯಪಟ್ಟರು.

ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಹಾಗೂ ಸೊಸೈಟಿ ಆಫ್‌ ಇಂಡಿಯನ್‌ ಲಾ ಫರ್ಮ್ಸ್‌ ಜಂಟಿಯಾಗಿ ಆಯೋಜಿಸಿದ್ದ ವರ್ಚುವಲ್‌ ಕಲಾಪ ಕುರಿತ ಆನ್‌ಲೈನ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾಲ ಕಲಾಪಗಳ ಕುರಿತಂತೆ ಅನಿಸಿಕೆ ಹಂಚಿಕೊಂಡ ಅವರು “ತಂತ್ರಜ್ಞಾನ ಎಲ್ಲದಕ್ಕೂ ಪೂರ್ಣಾವಧಿಯ ಪರಿಹಾರವಾಗದು. ತಂತ್ರಜ್ಞಾನ ಕೆಲಸ ಮಾಡಲು ಮೂಲಸೌಕರ್ಯದ ಅಗತ್ಯತವಿದೆ. ತಂತ್ರಜ್ಞಾನ ಎಂಬುದು ಶ್ರೀಮಂತರು ಮತ್ತು ಬಲಾಢ್ಯರಿಗಾಗಿ ಇದೆʼ ಎಂದರು. ಜೊತೆಗೆ "ಮೂಲಸೌಕರ್ಯ ಬಡವರಿಗೆ ದೊರೆಯದಿದ್ದರೆ ಏನಾಗಲಿದೆ” ಎಂದು ಪ್ರಶ್ನಿಸಿದರು. ವರ್ಚುವಲ್‌ ಕಲಾಪಗಳಿಗಾಗಿ ವಿವಿಧ ಬಗೆಯ ಪ್ಲಾಟ್‌ಫಾರ್ಮ್‌ಗಳನ್ನು ಬಳಸಲಾಗುತ್ತಿದೆ ಎಂದು ಹೇಳಿದ ಅವರು “ವಿಡ್ಯೊ ನಾನು ಬಳಸಿದ ಅತ್ಯಂತ ಕೆಟ್ಟ ಪ್ಲಾಟ್‌ಫಾರ್ಮಗಳಲ್ಲಿ ಒಂದು” ಎಂಬುದಾಗಿ ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ “ಮಾಹಿತಿ ಹಕ್ಕು ಎಂಬುದೇ ಮೂಲಭೂತ ಹಕ್ಕಾಗಿ ದೊರೆಯದಿರುವ ಈ ದೇಶದಲ್ಲಿ ಅಂತರ್ಜಾಲವನ್ನು ಮೂಲಭೂತ ಹಕ್ಕಾಗಿ ಪರಿಗಣಿಸಬೇಕೆಂಬ ಅತಿರೇಕಕ್ಕೆ ಹೋಗುವ ಅಗತ್ಯವಿಲ್ಲ. ಮೊದಲು ಮೂಲಭೂತ ಹಕ್ಕುಗಳನ್ನು ರಕ್ಷಿಸಿಕೊಳ್ಳೋಣ” ಎಂದು ಕರೆ ನೀಡಿದರು. “ನ್ಯಾಯಾಧೀಶರು ಸಾಕ್ಷಿಯ ಗುಣಗಳನ್ನು ಪರೀಕ್ಷಿಸಲು ಭೌತಿಕ ಉಪಸ್ಥಿತಿ ತುಂಬಾ ಮುಖ್ಯವಾಗುತ್ತದೆ. ಅಂತಹ ಕಲಾಪಗಳ ಬಗ್ಗೆ ಭವಿಷ್ಯದಲ್ಲಿ ನಿರ್ಧಾರ ಕೈಗೊಳ್ಳುವಾಗ ವಕೀಲರು, ಸರ್ಕಾರ, ನ್ಯಾಯಾಧೀಶರು ಸೇರಿದಂತೆ ಸಾರ್ವಜನಿಕರನ್ನು ಸಂಪರ್ಕಿಸುವುದು ಮುಖ್ಯ” ಎಂದರು.

ವಕೀಲ ಲಲಿತ್‌ ಭಾಸಿನ್‌ ಮಾತನಾಡಿ “ನಾವು ನ್ಯಾಯಾಂಗದ ಆಡಳಿತದ ಕಾರಣಕ್ಕಾಗಿ ಬೆಂಬಲ ಒದಗಿಸುತ್ತಿದ್ದೇವೆ. ಉನ್ನತ ನ್ಯಾಯಾಲಯಗಳ ಮೂಲಕ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ. ಆದರೆ ಅದು ಕೆಳಹಂತದ ನ್ಯಾಯಾಲಯಗಳಿಂದ ಆರಂಭವಾಗಬೇಕಿತ್ತು. ಪ್ರಕರಣಗಳನ್ನು ನ್ಯಾಯಮಂಡಳಿಗಳು ಕೇವಲ ಪುನರ್‌ ಗುರುತಿಸುತ್ತಿವೆ” ಎಂದು ಅಭಿಪ್ರಾಯಪಟ್ಟರು. ಒಂದು ಹಂತದಲ್ಲಿ ಅವರು "ಪ್ರಕರಣಗಳಿಗೆ ಯಾವುದೇ ಅರ್ಥಪೂರ್ಣ ಕೊಡುಗೆ ನೀಡುತ್ತಿಲ್ಲ. ಯಾವುದು ಮುಖ್ಯ ಮತ್ತು ತುರ್ತು ಎಂಬುದನ್ನು ರಿಜಿಸ್ಟ್ರಿ ನಿರ್ಧರಿಸುತ್ತಿದೆ” ಎಂದು ಹೇಳಿದರು.

ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ರಾಜೀವ್‌ ಸಹಾಯ್‌ ಎಂಡ್ಲಾ ಮಾತನಾಡಿ “ಜಾಲ ಕಲಾಪಗಳು ಹೊಸಬಗೆಯ ಸಾಮಾನ್ಯತೆಯಾಗಿಲ್ಲ. ಅವುಗಳನ್ನು ಭೌತಿಕ ಕಲಾಪಕ್ಕೆ ಬದಲಿಯಾಗಿ ಪರಿಗಣಿಸಲು ಸಾಧ್ಯವಿಲ್ಲ” ಎಂದು ಹೇಳಿದರು.

“ಕೆಳಹಂತದ ನ್ಯಾಯಾಲಯಗಳಲ್ಲಿ ಕಲಾಪ ಏರ್ಪಡಿಸುವಾಗ ಬ್ಯಾಂಡ್‌ವಿಡ್ತ್‌, ಇ- ಫೈಲ್‌ ಅಲಭ್ಯತೆ, ಮನೆಗಳಲ್ಲಿ ಕೆಲಸದ ವಾತಾವರಣ ಇಲ್ಲದಿರುವುದು ಸಮಸ್ಯೆಯಾಗುತ್ತಿದೆ ಎಂದ ಅವರು ವರ್ಚುವಲ್‌ ಆಗಿ ವಿಚಾರಣೆ ನಡೆಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತ “ವಿಶೇಷವಾಗಿ ಪಾಟಿ ಸವಾಲುಗಳನ್ನು ನಡೆಸುವಾಗ ನ್ಯಾಯಾಲಯದ ಔಪಚಾರಿಕ ವಾತಾವರಣ ಅತ್ಯಗತ್ಯವಾಗಿದೆ” ಎಂದರು.