ವಿಸ್ಮಯಾ ವರದಕ್ಷಿಣೆ ಸಾವಿನ ಪ್ರಕರಣದಲ್ಲಿ ಆಕೆಯ ಪತಿ ಕಿರಣ್ ಕುಮಾರ್‌ಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಅಮಾನತ್ತಿನಲ್ಲಿರಿಸಲು ಕೇರಳ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ [ಕಿರಣ್ ಕುಮಾರ್ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].
ನ್ಯಾಯಮೂರ್ತಿಗಳಾದ ಅಲೆಕ್ಸಾಂಡರ್ ಥಾಮಸ್ ಮತ್ತು ಸೋಫಿ ಥಾಮಸ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಪೀಠವು ತನ್ನ ಆದೇಶದಲ್ಲಿ, "ಕ್ರಿಮಿನಲ್ ಮಿಸಲೇನಿಯಸ್ ಅರ್ಜಿಯನ್ನು ವಜಾಗೊಳಿಸಲಾಗಿದೆ. ಈ ಆದೇಶದಲ್ಲಿ ಮಾಡಲಾಗಿರುವ ಅವಲೋಕನಗಳು ಕೇವಲ ಈ ಅರ್ಜಿಗೆ ಸೀಮಿತಗೊಂಡು ಮಾಡಿರುವಂತಹದ್ದಾಗಿದೆ. ಅರ್ಜಿದಾರ ಮೇಲ್ಮನವಿದಾರರು ಯಾವುದೇ ಮೇಲ್ಮನವಿಗಳಲ್ಲಿ ಎತ್ತುವ ಪ್ರಶ್ನೆಗಳ ಮೇಲೆ ಇದು ಪರಿಣಾಮ ಬೀರುವುದಿಲ್ಲ," ಎಂದು ಸ್ಪಷ್ಟಪಡಿಸಿದೆ.
ಕೊಲ್ಲಂನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕಳೆದ ಮೇ ತಿಂಗಳಲ್ಲಿ ಅಪರಾಧಿ ಕಿರಣ್ ಕುಮಾರ್‌ಗೆ ಹತ್ತು ವರ್ಷಗಳ ಜೈಲು ಶಿಕ್ಷೆ ಮತ್ತು ₹ 12.5 ಲಕ್ಷ ದಂಡ ವಿಧಿಸಿತ್ತು. ತರುವಾಯ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅಪರಾಧಿ ಕುಮಾರ್, ವಿಸ್ಮಯಾಳ ತಂದೆ ಹಾಗೂ ರಾಜ್ಯ ಸರ್ಕಾರ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಮೂರೂ ಅರ್ಜಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ಒಟ್ಟಿಗೆ ವಿಚಾರಣೆ ಆರಂಭಿಸಿತ್ತು. ಆದರೂ ತನ್ನ ಶಿಕ್ಷೆ ಅಮಾನತುಗೊಳಿಸುವಂತೆ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನೇ ನ್ಯಾಯಾಲಯ ಮೊದಲು ಕೈಗೆತ್ತಿಕೊಂಡಿತ್ತು.
ವಿಸ್ಮಯಾ ಹತ್ಯೆಯ ಹಿಂದೆ…
24 ವರ್ಷದ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿನಿ ವಿಸ್ಮಯಾ ಅವರ ಮೃತದೇಹ ಜೂನ್ 21, 2021ರಂದು ಕಿರಣ್ ಕುಮಾರ್ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಕಿರಣ್ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 498ಎ (ವರದಕ್ಷಿಣೆಗಾಗಿ ಮಹಿಳೆಗೆ ಹಿಂಸೆ), 306 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು 304 ಬಿ (ವರದಕ್ಷಿಣೆ ಸಾವು) ಹಾಗೂ ವರದಕ್ಷಿಣೆ ನಿಷೇಧ ಕಾಯಿದೆ-1961 ರ ಸೆಕ್ಷನ್ 3 ಮತ್ತು 4ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಸಾಯುವ ಕೆಲ ದಿನಗಳ ಮುನ್ನ ವಿಸ್ಮಯ ತಮ್ಮ ಪತಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿರುವುದನ್ನು ಬಿಂಬಿಸುವ ತನ್ನ ದೇಹದ ಮೇಲಾಗಿದ್ದ ಗಾಯಗಳ ಚಿತ್ರಗಳನ್ನು ಸಂಬಂಧಿಕರಿಗೆ ವಾಟ್ಸಾಪ್ ಮಾಡಿದ್ದಳು. ಆಕೆ ಸಾವನ್ನಪ್ಪಿದ ಬಳಿಕ ಈ ಚಿತ್ರಗಳು ಮತ್ತು ಆಕೆಯ ಧ್ವನಿಯನ್ನು ಕುಟುಂಬದವರು ಹಂಚಿಕೊಂಡಿದ್ದರು. ಮೊದಲು ಆತ್ಮಹತ್ಯೆ ಎಂದೇ ಬಿಂಬಿಸಲಾಗಿತ್ತಾದರೂ ತನಿಖೆ ಬಳಿಕ ಇದೊಂದು ಕೊಲೆ ಎಂಬುದು ಪತ್ತೆಯಾಗಿತ್ತು.