Supreme Court 
ಸುದ್ದಿಗಳು

ರಾಜಕಾರಣಿ ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣ: ಮಾಜಿ ಪಿ ಎ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪುತ್ರಿ

ಕೃತ್ಯದಲ್ಲಿ ವಿವೇಕಾನಂದ ರೆಡ್ಡಿ ಅವರ ಪಿ ಎ ಆಗಿದ್ದ ಕೃಷ್ಣರೆಡ್ಡಿ ಅವರ ಪಾತ್ರ ಇದ್ದರೂ ಆತ ತನ್ನನ್ನು ಬಲಿಪಶು ಎಂದು ಬಿಂಬಿಸಿಕೊಳ್ಳಲು ಆತ ಯತ್ನಿಸುತ್ತಿದ್ದಾರೆ ಎಂಬುದು ಸುನೀತಾ ರೆಡ್ಡಿ ಅವರ ಆರೋಪ.

Bar & Bench

ಆಂಧ್ರಪ್ರದೇಶದ ಕಡಪ ಕ್ಷೇತ್ರದ ಮಾಜಿ ಸಂಸದ ಹಾಗೂ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ಅವರ ಚಿಕ್ಕಪ್ಪ ವಿವೇಕಾನಂದ ರೆಡ್ಡಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮೂಲ ದೂರುದಾರರಾದ ಕೃಷ್ಣ ರೆಡ್ಡಿ ವಿರುದ್ಧ ವಿವೇಕಾನಂದ ರೆಡ್ಡಿ ಅವರ ಪುತ್ರಿ ಸುನೀತಾ ರೆಡ್ಡಿ ಸುಪ್ರೀಂ ಕೋರ್ಟ್‌ಗೆ ದೂರು ಸಲ್ಲಿಸಿದ್ದಾರೆ.

ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಪಿ ವಿ ಸಂಜಯ್ ಕುಮಾರ್ ಅವರಿದ್ದ ಪೀಠ ಶುಕ್ರವಾರ ಸುನೀತಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ಒಪ್ಪಿದೆ. ಅರ್ಜಿಯಲ್ಲಿ, ಕೃಷ್ಣರೆಡ್ಡಿ ಅವರು ಕ್ಷಮಾದಾನ ಪಡೆಯಲು ಅರ್ಹರಾಗಿರುವ ʼಸಂತ್ರಸ್ತʼ ಎಂದು ಈ ಹಿಂದೆ ನೀಡಲಾದ ಆದೇಶಕ್ಕೆ ಸ್ಪಷ್ಟೀಕರಣ ನೀಡಬೇಕೆಂದು ಸುನೀತಾ ಅವರು ನ್ಯಾಯಾಲಯವನ್ನು ಕೋರಿದ್ದಾರೆ.

ಕೃಷ್ಣಾ ರೆಡ್ಡಿ ಅವರು ವಿವೇಕಾನಂದ ರೆಡ್ಡಿಯವರ ಪಿಎ ಆಗಿದ್ದರು. ಅರ್ಜಿ ಸಂಬಂಧ ಸಿಬಿಐಗೆ ಕೂಡ ನೋಟಿಸ್‌ ನೀಡಿರುವ ಸುಪ್ರೀಂ ಕೋರ್ಟ್‌ ಜುಲೈ 3 ರಂದು ವಿಚಾರಣೆ ನಡೆಸಲಿದೆ.

ಕೃತ್ಯದಲ್ಲಿ ಪಿಎ ಕೃಷ್ಣರೆಡ್ಡಿ ಅವರ ಪಾತ್ರ ಇದ್ದರೂ ಆತ ತನ್ನನ್ನು ಬಲಿಪಶು ಎಂದು ಬಿಂಬಿಸಿಕೊಳ್ಳಲು ಆತ ಯತ್ನಿಸುತ್ತಿದ್ದಾರೆ ಎಂದು ಸುನೀತಾ ರೆಡ್ಡಿ ಅವರು ವಕೀಲ ಜೆಸಲ್ ವಾಹಿ ಅವರ ಮೂಲಕ ಸಲ್ಲಿಸಿದ ಮನವಿಯಲ್ಲಿ ಆರೋಪಿಸಿದ್ದಾರೆ.

ಮತ್ತೊಂದೆಡೆ, ಸಹ ಆರೋಪಿಗಳಲ್ಲಿ ಒಬ್ಬರಿಗೆ ಕ್ಷಮಾದಾನ ಮಾಡುತ್ತಿರುವುದನ್ನು ಪ್ರಶ್ನಿಸುತ್ತಿರುವುದಾಗಿ ಕೃಷ್ಣರೆಡ್ಡಿ ಸುಪ್ರೀಂ ಕೋರ್ಟ್‌ಗೆ ಈ ವಾರದ ಆರಂಭದಲ್ಲಿ ತಿಳಿಸಿದ್ದರು.

ತನ್ನ ವಿರುದ್ಧದ ತನಿಖೆ ನಡೆಯದಂತೆ ಮಾಡಲು ಈ ದೂರು ಸಲ್ಲಿಸಲಾಗಿದೆ ಎಂದು ಸುನೀತಾ ಅರ್ಜಿಯಲ್ಲಿ ವಾದಿಸಿದ್ದಾರೆ. ದೂರುದಾರರು  ಸಿಬಿಐ, ಅರ್ಜಿದಾರರು ಹಾಗೂ ಆಕೆಯ ಪತಿ ವಿರುದ್ಧ ದೂರುದಾರರು ಆಧಾರ ರಹಿತ ಆರೋಪ ಮಾಡುತ್ತಿದ್ದು ಈ ಅರ್ಜಿ ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗವಾಗಿದೆ. ಇದರ ಹಿಂದೆ ಪಿತೂರಿಯಲ್ಲಿ ಭಾಗಿಯಾದ ಪ್ರಭಾವಿ ಮತ್ತು ಬಲಾಢ್ಯ ವ್ಯಕ್ತಿಗಳು ರಕ್ಷಿಸುವ ಗುರಿ ಇದೆ ಎಂದು ಅವರು ದೂರಿದ್ದಾರೆ.

ಶುಕ್ರವಾರ ಸುನೀತಾ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಸಿದ್ಧಾರ್ಥ್‌ ಲೂತ್ರಾ ಅವರು ಕಾನೂನಿನ ಪ್ರಕಾರ ಆಕೆ ಮತ್ತು ಆಕೆಯ ತಾಯಿಯನ್ನು ಮಾತ್ರ ಸಂತ್ರಸ್ತರು ಎಂದು ಪರಿಗಣಿಸಬೇಕು ಎಂದರು.

ವಿವೇಕಾನಂದ ರೆಡ್ಡಿ ಅವರನ್ನು ಮಾರ್ಚ್ 2019ರಲ್ಲಿ ಕಡಪಾದಲ್ಲಿನ ಅವರ ನಿವಾಸದಲ್ಲಿ ಚಾಕುವಿನಿಂದ ಇರಿದು ಕೊಲ್ಲಲಾಗಿತ್ತು. 2020ರಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ಹತ್ಯೆಯ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿತ್ತು.