ಹೈದರಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ವೈ ಎಸ್ ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣ ವರ್ಗಾಯಿಸಿದ ಸುಪ್ರೀಂ ಕೋರ್ಟ್

ಆಂಧ್ರಪ್ರದೇಶದಲ್ಲಿ ನ್ಯಾಯಯುತ ವಿಚಾರಣೆ ನಡೆಯದಿರಬಹುದು ಅಥವಾ ಇದರ ಹಿಂದೆ ದೊಡ್ಡ ಪಿತೂರಿ ಇದೆ ಎಂಬ ಅರ್ಜಿದಾರರ ಆತಂಕ ಕಪೋಲಕಲ್ಪಿತವಲ್ಲ ಎಂದು ನ್ಯಾಯಾಲಯ ಹೇಳಿದೆ.
Supreme Court
Supreme Court

ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್‌ ಮೋಹನ್ ರೆಡ್ಡಿ ಅವರ ಚಿಕ್ಕಪ್ಪ ಮತ್ತು ಮಾಜಿ ಲೋಕಸಭಾ ಸದಸ್ಯ ವೈ ಎಸ್ ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಹೈದರಾಬಾದ್‌ನ  ಸಿಬಿಐ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿದೆ.

ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದ ತನಿಖೆ ತ್ವರಿತಗೊಳಿಸಲು ಸಿಬಿಐಗೆ ನಿರ್ದೇಶನ ನೀಡುವಂತೆ ಕೋರಿ ರೆಡ್ಡಿ ಪುತ್ರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ  "ಪ್ರಕರಣದ ನ್ಯಾಯಯುತ ವಿಚಾರಣೆ ನಡೆಯದಿರಬಹುದು ಅಥವಾ ಇದರ ಹಿಂದೆ ದೊಡ್ಡ ಪಿತೂರಿ ಇದೆ ಎಂಬ ಅರ್ಜಿದಾರರ ಆತಂಕ ಕಪೋಲಕಲ್ಪಿತ ಎಂದು ಹೇಳಲಾಗುವುದಿಲ್ಲ. ಅರ್ಜಿದಾರರಿಗೆ ನ್ಯಾಯ ಪಡೆಯುವ ಮೂಲಭೂತ ಹಕ್ಕಿದೆ” ಎಂದಿದೆ.

“ಆಂಧ್ರಪ್ರದೇಶದ ಹೊರತಾಗಿ ಬೇರೆ ರಾಜ್ಯಕ್ಕೆ ವರ್ಗಾಯಿಸಲು ಇದು ಸೂಕ್ತವಾದ ಪ್ರಕರಣವಾಗಿದ್ದು ನ್ಯಾಯ ದೊರೆಯುವಂತೆ ಮಾಡುವುದಷ್ಟೇ ಅಲ್ಲದೆ ನ್ಯಾಯ ದೊರೆತಿದೆಯೇ ಎಂಬುದನ್ನು ಕೂಡ ಗಮನಿಸಬೇಕಿದೆ. ಕ್ರಿಮಿನಲ್‌ ವಿಚಾರಣೆ ಪಕ್ಷಪಾತದಿಂದ ಕೂಡಿದ್ದರೆ ಕ್ರಿಮಿನಲ್‌ ನ್ಯಾಯ ಕೂಡ ಅಪಾಯಕ್ಕೆ ತುತ್ತಾಗುತ್ತದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.

Also Read
ರಾಜೀವ್‌ ಗಾಂಧಿ ಹತ್ಯೆ ಅಪರಾಧಿಗಳ ಬಿಡುಗಡೆ: ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ ಕೇಂದ್ರ

ಎಲ್ಲಾ ಆರೋಪಪಟ್ಟಿಗಳು ಮತ್ತು ಪೂರಕ ಆರೋಪಪಟ್ಟಿಗಳನ್ನು ಹೈದರಾಬಾದ್‌ಗೆ ವರ್ಗಾಯಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ರೆಡ್ಡಿ ಸಾವಿನ ಸುತ್ತ ದೊಡ್ಡ ಪಿತೂರಿ ಮತ್ತು ಪ್ರಕರಣದ ಸಾಕ್ಷ್ಯ ನಾಶದ ಬಗೆಗಿನ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಆಧರಿಸಿ ಸಿಬಿಐ ತನಿಖೆ ನಡೆಸಲಿದೆ.

ಮೂಲತಃ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದ ವಿವೇಕಾನಂದ ಅವರು ನಂತರ ತಮ್ಮ ಹಿರಿಯ ಸಹೋದರ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಸೇರಿದ್ದರು. ರಾಜ್ಯ ಸರ್ಕಾರದ ಕೃಷಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಮಾರ್ಚ್ 2019ರಲ್ಲಿ ಕಡಪಾದಲ್ಲಿನ ವಿವೇಕಾನಂದ ಅವರ ನಿವಾಸದಲ್ಲಿ ಅವರನ್ನು ಚಾಕುವಿನಿಂದ ಇರಿದು ಕೊಲ್ಲಲಾಗಿತ್ತು. 2020ರಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ಕೊಲೆಯ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿತ್ತು.

Kannada Bar & Bench
kannada.barandbench.com