Ballot Box 
ಸುದ್ದಿಗಳು

ಮತದಾರರ ಮಾಹಿತಿ ಕಳವು ಪ್ರಕರಣ: ಚಿಲುಮೆಯ ಇಬ್ಬರು, ಬಿಬಿಎಂಪಿಯ ನಾಲ್ವರು ಅಧಿಕಾರಿಗಳಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ

ಜನರ ಖಾಸಗಿತನದ ರಕ್ಷಣೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಪದೇಪದೇ ಎಚ್ಚರಿಸುತ್ತಾ ಬಂದಿದೆ. ಆರೋಪಿಗಳು ಜನರ ವೈಯಕ್ತಿಕ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸಿದ್ದು ಏತಕ್ಕಾಗಿ ಈ ಕೆಲಸ ಮಾಡಿದ್ದಾರೆ ಎಂಬುದು ಗೊತ್ತಿಲ್ಲ ಎಂದ ನ್ಯಾಯಾಲಯ.

Bar & Bench

ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರೇತರ ಸಂಸ್ಥೆ ಚಿಲುಮೆಯ ಇಬ್ಬರು ಉದ್ಯೋಗಿಗಳು ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಾಲ್ವರು ಪ್ರಥಮ ದರ್ಜೆ ಅಧಿಕಾರಿಗಳಿಗೆ ಜಾಮೀನು ನೀಡಲು ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ನಿರಾಕರಿಸಿದೆ.

ಚಿಲುಮೆಯ ಉದ್ಯೋಗಿಗಳಾದ ಬೆಂಗಳೂರಿನ ಬಿ ವಿ ಧರ್ಮೇಶ್‌ ಮತ್ತು ರಾಮನಗರದ ರೇಣುಕಪ್ರಸಾದ್‌ ಹಾಗೂ ಬಿಬಿಎಂಪಿ ಅಧಿಕಾರಿಗಳಾದ ಚಂದ್ರಶೇಖರ್‌, ಸುಹೇಲ್‌ ಅಹ್ಮದ್‌, ಬಿ ವಿ ಭೀಮಾಶಂಕರ್‌ ಹಾಗೂ ಎಸ್‌ ಮಹೇಶ್‌ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬೆಂಗಳೂರಿನ 3ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಧೀಶರಾದ ಬಿ ಸಿ ಚಂದ್ರಶೇಖರ್‌ ಅವರು ವಜಾ ಮಾಡಿದ್ದಾರೆ.

“ಚಿಲುಮೆ ಸಂಸ್ಥೆಯು ಆರೋಪಿಗಳಾದ ಧರ್ಮೇಶ್‌ ಮತ್ತು ರೇಣುಕ ಪ್ರಸಾದ್‌ ಅವರನ್ನೂ ಬೂತ್‌ ಮಟ್ಟದ ಅಧಿಕಾರಿಗಳಾಗಿ ನೇಮಿಸಿದ್ದು, ಬಿಬಿಎಂಪಿ ಅಧಿಕಾರಿಗಳಾದ 10ರಿಂದ 13ನೇ ಆರೋಪಿಗಳು ಧರ್ಮೇಶ್‌ ಮತ್ತು ರೇಣುಕ ಪ್ರಸಾದ್‌ಗೆ ಗುರುತಿನ ಚೀಟಿ ನೀಡಿದ್ದಾರೆ. ಚಿಲುಮೆ ಉದ್ಯೋಗಿಗಳಾದ ಧರ್ಮೇಶ್‌ ಮತ್ತು ರೇಣುಕ ಪ್ರಸಾದ್‌ ಅವರು ಮನಮನೆಗೆ ತೆರಳಿ, ಜನರ ವೈಯಕ್ತಿಕ ದಾಖಲೆ ಸಂಗ್ರಹಿಸಿದ್ದಾರೆ. ಆರೋಪ ಪರಿಗಣಿಸಿದರೆ ಅದನ್ನು ಕ್ಷಮಿಸಬಹುದಾದ ಅಪರಾಧ ಎನ್ನಲಾಗದು. ಆದರೆ, ಇದು ದೇಶದ ಜನರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದಾಗಿದೆ. ಜನರ ಖಾಸಗಿತನ ಮತ್ತು ವೈಯಕ್ತಿಕ ಸ್ವಾತಂತ್ರ್ಯ ರಕ್ಷಣೆಯ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಪದೇಪದೇ ಎಚ್ಚರಿಸುತ್ತಾ ಬಂದಿದೆ. ಆರೋಪಿಗಳು ಜನರ ವೈಯಕ್ತಿಕ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸಿದ್ದು, ಏತಕ್ಕಾಗಿ ಈ ಕೆಲಸ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಪ್ರಕರಣವು ವಿಚಾರಣೆಯ ಹಂತದಲ್ಲಿರುವುದರಿಂದ ಆರೋಪಿಗಳಿಗೆ ಜಾಮೀನು ನೀಡಲಾಗದು” ಎಂದು ನ್ಯಾಯಾಲಯವು ಆದೇಶದಲ್ಲಿ ಉಲ್ಲೇಖಿಸಿದೆ.