Senthil Balaji and Madras High Court 
ಸುದ್ದಿಗಳು

ತಮಿಳುನಾಡು ಸಚಿವ ಸೆಂಥಿಲ್‌ ಬಾಲಾಜಿ ಬಂಧನ ಕುರಿತಂತೆ ಮದ್ರಾಸ್ ಹೈಕೋರ್ಟ್‌ನಲ್ಲಿ ಇ ಡಿ ಸಮರ್ಥನೆ

ಸಚಿವರ ಬಂಧನ ಪ್ರಶ್ನಿಸಿ ಅವರ ಪತ್ನಿ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯ ವಾದ ಮಂಗಳವಾರ ಮುಕ್ತಾಯಗೊಂಡಿದ್ದು, ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು ಬಾಲಾಜಿಗೆ ಜಾಮೀನು ನೀಡುವಂತೆ ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.

Bar & Bench

ಸರ್ಕಾರಿ ಹುದ್ದೆಗಳ ನೇಮಕಾತಿ ಹಗರಣದಲ್ಲಿ ಭಾಗಿಯಾದ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ ಅವರನ್ನು ಬಂಧಿಸಿರುವ ನಡೆಯಲ್ಲಿ ಯಾವುದೇ ಅಕ್ರಮವಿಲ್ಲ ಎಂದು ಜಾರಿ ನಿರ್ದೇಶನಾಲಯ (ಇ ಡಿ) ಮಂಗಳವಾರ ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿದೆ.

ಪ್ರಕರಣದ ತನಿಖೆ ಆರಂಭವಾದಾಗಿನಿಂದ ಬಾಲಾಜಿ ಅವರು ಸಹಕರಿಸಲು ನಿರಾಕರಿಸಿದ್ದರು. ಹೀಗಾಗಿ ಅವರನ್ನು ಬಂಧಿಸಬೇಕಾಗುತ್ತದೆ ಎಂದು ಜಾರಿ ನಿರ್ದೇಶನಾಲಯಕ್ಕೆ ಪ್ರಕರಣದ ತನಿಖೆಯ ಆರಂಭದಿಂದಲೂ ತಿಳಿದಿತ್ತು ಎಂಬುದಾಗಿ ನ್ಯಾಯಮೂರ್ತಿಗಳಾದ ನಿಶಾ ಬಾನು ಮತ್ತು ಡಿ ಭರತ ಚಕ್ರವರ್ತಿ ಅವರ ಪೀಠಕ್ಕೆ ಇ ಡಿ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು.

ಆದ್ದರಿಂದ, ಸಿಆರ್‌ಪಿಸಿ ಸೆಕ್ಷನ್‌ 41ಎ ಅಡಿಯಲ್ಲಿ ಅವರಿಗೆ ಮುಂಚಿತವಾಗಿ ಯಾವುದೇ ನೋಟಿಸ್‌ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಮೆಹ್ತಾ ವಾದಿಸಿದರು.

ಮೊದಲಿನಿಂದಲೂ ಸಚಿವರು ತನಿಖೆಗೆ ಸಹಕರಿಸುತ್ತಿರಲಿಲ್ಲ. ಸಮನ್ಸ್‌ಗೆ ಪ್ರತಿಕ್ರಿಯಿಸುತ್ತಿರಲಿಲ್ಲ ಹಾಗೂ ಪ್ರಶ್ನೆಗಳಿಗೆ ಉತ್ತರಿಸುತ್ತಿರಲಿಲ್ಲ. ಈ ಹಂತದಲ್ಲಿ ಪೊಲೀಸ್‌ ಅಧಿಕಾರಿ ಅವರನ್ನು ಬಂಧಿಸಲು ಬಯಸದೇ ಇದ್ದರೆ ಆಗ , ಸಿಆರ್‌ಪಿಸಿ ಸೆಕ್ಷನ್‌ 41 ಎ ಅಡಿಯಲ್ಲಿ ನೋಟಿಸ್‌ ನೀಡುತ್ತಾರೆ. ಆದರೆ ಈ ಪ್ರಕರಣದಲ್ಲಿ ಆರಂಭದಿಂದಲೂ ಇ ಡಿ ಅವರನ್ನು ಬಂಧಿಸಲು ಬಯಸಿತ್ತು ಮತ್ತು ಸಕಾರಣಗಳಿಗಾಗಿ ಅವರನ್ನು ಬಂಧಿಸಬೇಕಾಯಿತು ಎಂದು ಅವರು ಸಮರ್ಥಿಸಿಕೊಂಡರು.

ಸಚಿವರನ್ನು ಬಂಧಿಸಿದ್ದು ನಂತರದ ಅವರನ್ನು ಸೆರೆಯಲ್ಲಿಟ್ಟಿದ್ದು ಕಾನೂನುಬಾಹಿರ, ಏಕೆಂದರೆ ಅವರಿಗೆ ಸಿಆರ್‌ಪಿಸಿ ಸೆಕ್ಷನ್ 41ಎ  ಅಡಿಯಲ್ಲಿ ನೋಟಿಸ್ ನೀಡಿಲ್ಲ ಮತ್ತು  ಬಂಧನಕ್ಕೆ ಕಾರಣವೇನು ಎಂಬ ಬಗ್ಗೆ ಅವರಿಗೆ ಮಾಹಿತಿ ನೀಡಿಲ್ಲ ಎಂದು ಈ ಹಿಂದೆ ಬಾಲಾಜಿ ಅವರ ಪತ್ನಿ ಎಸ್.ಮೇಘಲಾ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎನ್.ಆರ್.ಎಳಂಗೋ ಅವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳಿಗೆ ಮೆಹ್ತಾ ಪ್ರತಿಕ್ರಿಯೆ ನೀಡಿದರು. ಬಾಲಾಜಿ ಅವರ ಪರವಾಗಿ ಹಿರಿಯ ನ್ಯಾಯವಾದಿ ಮುಕುಲ್‌ ರೋಹಟ್ಗಿ ವಾದ ಮಂಡಿಸಿದರು. ಬಾಲಾಜಿ ಅವರ ಪರವಾದ ವಾದದಲ್ಲಿ ಅರ್ಹತೆ ಕಂಡುಬಂದಿದ್ದರೆ ಅವರಿಗೆ ಜಾಮೀನು ನೀಡಬೇಕು ಎಂದು ಅವರು ಕೋರಿದರು.

ಆ ಮೂಲಕ ಪ್ರಕರಣದ ಎಲ್ಲಾ ಕಕ್ಷಿದಾರರು ತಮ್ಮ ವಾದ ಮುಕ್ತಾಯಗೊಳಿಸಿದ ಹಿನ್ನೆಲೆಯಲ್ಲಿ ಬುಧವಾರದೊಳಗೆ ತಮ್ಮ ಲಿಖಿತ ಸಲ್ಲಿಕೆಗಳನ್ನು ಸಲ್ಲಿಸುವಂತೆ ಪೀಠ ಅವರಿಗೆ ಸೂಚಿಸಿತು.