ಕೇಂದ್ರ ವಕ್ಫ್ ಮಂಡಳಿ ಮತ್ತು ರಾಜ್ಯ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರರ ನೇಮಕ ಮತ್ತು ನ್ಯಾಯಾಲಯಗಳು ವಕ್ಫ್ ಎಂದು ಘೋಷಿಸಿದ ಆಸ್ತಿಗಳನ್ನು ಡಿ-ನೋಟಿಫೈ ಮಾಡುವ ನಿಬಂಧನೆ ಸೇರಿದಂತೆ ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಕಾಯಿದೆ, 2025ರ ಕೆಲವು ಪ್ರಮುಖ ಸೆಕ್ಷನ್‌ಗಳಿಗೆ ಸಂಬಂಧಿಸಿದಂತೆ ಸದ್ಯಕ್ಕೆ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದೆ.
ಈ ಸಂಬಂಧ ಕೇಂದ್ರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನೀಡಿದ ಭರವಸೆಯನ್ನು ಸಿಜೆಐ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಪಿ ವಿ ಸಂಜಯ್ ಕುಮಾರ್ ಹಾಗೂ ಕೆ ವಿ ವಿಶ್ವನಾಥನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ದಾಖಲಿಸಿಕೊಂಡಿತು.
ಮುಂದಿನ ವಿಚಾರಣೆಯವರೆಗೆ, ಕಾಯಿದೆಯಡಿಯಲ್ಲಿ ವಕ್ಫ್ ಮಂಡಳಿ ಮತ್ತು ಸಮಿತಿಗಳಿಗೆ ಯಾವುದೇ ನೇಮಕಾತಿ ನಡೆಯುವುದಿಲ್ಲ ಎಂದು ಎಸ್‌ಜಿ ಮೆಹ್ತಾ ಭರವಸೆ ನೀಡಿದ್ದಾರೆ. ಅಧಿಸೂಚನೆ ಅಥವಾ ಗೆಜೆಟ್ ಮೂಲಕ ಈಗಾಗಲೇ ಘೋಷಿಸಲಾದ ಬಳಕೆಯ ಕಾರಣದಿಂದಾದ ವಕ್ಫ್ ಸೇರಿದಂತೆ ವಕ್ಫ್ ಆಸ್ತಿಗಳ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಕಾಯಿದೆಯ ಸೆಕ್ಷನ್‌ಗಳಿಗೆ ತಡೆಯಾಜ್ಞೆ ನೀಡಬೇಕೆಂಬ ಮನವಿಗೆ ಪ್ರತಿಕ್ರಿಯೆ ಸಲ್ಲಿಸಲು ನ್ಯಾಯಾಲಯ ಸರ್ಕಾರಕ್ಕೆ ಏಳು ದಿನಗಳ ಕಾಲಾವಕಾಶ ನೀಡಿದೆ. ಅರ್ಜಿದಾರರು ಐದು ದಿನಗಳ ಒಳಗೆ ಪ್ರತಿವಾದ ಸಲ್ಲಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ಮಧ್ಯಂತರ ಮನವಿಯ ಕುರಿತು ನಿರ್ಧರಿಸಲು ಮೇ 5ರಂದು ಪ್ರಕರಣವನ್ನು ಮತ್ತೆ ವಿಚಾರಣೆ ನಡೆಸಲಾಗುವುದು ಎಂದು ಅದು ತಿಳಿಸಿದೆ. "ಮುಂದಿನ ದಿನಾಂಕದ ವಿಚಾರಣೆ ಎಂಬುದು ನಿರ್ದೇಶನಗಳು ಮತ್ತು ಮಧ್ಯಂತರ ಆದೇಶಗಳಿಗೆ ಸಂಬಂಧಿಸಿದಂತೆ ಮಾತ್ರ ಇರುತ್ತದೆ" ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ವಾದ ಮಂಡನೆ ವೇಳೆ ಮೆಹ್ತಾ ಕಾಯಿದೆಗೆ ಸಂಬಂಧಿಸಿದಂತೆ ಯಾವುದೇ ತಡೆಯಾಜ್ಞೆ ನೀಡಬಾರದು. ಹಲವು ಮಾಹಿತಿ, ಸಲಹೆ ಪಡೆದು ಕಾಯಿದೆ ಜಾರಿಗೆ ತರಲಾಗಿದೆ ಎಂದರು.
ವಾದದ ಒಂದು ಹಂತದಲ್ಲಿ ಸಿಜೆಐ ಕಾನೂನಿನಲ್ಲಿ ಕೆಲವು ಸಕಾರಾತ್ಮಕ ವಿಷಯಗಳಿವೆ. ಸಂಪೂರ್ಣ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ನಾವು ಹೇಳಿದ್ದೇವೆ. ಆದರೆ ಈಗ ಚಾಲ್ತಿಯಲ್ಲಿರುವ ಪರಿಸ್ಥಿತಿ ಬದಲಾಗುವುದನ್ನು ನಾವು ಬಯಸುವುದಿಲ್ಲ. ಐದು ವರ್ಷಗಳ ಕಾಲ ನಿಷ್ಠೆಯಿಂದ ಇಸ್ಲಾಂ ಧರ್ಮವನ್ನು ಆಚರಿಸುವ ವ್ಯಕ್ತಿ ಮಾತ್ರವೇ ವಕ್ಫ್ ಘೋಷಿಸಬಹುದು ಎಂಬ ನಿಯಮ ನಾವು ತಡೆಹಿಡಿಯುತ್ತಿಲ್ಲ. ಆದರೆ ನ್ಯಾಯಾಲಯದ ಮುಂದೆ ಪ್ರಕರಣ ಬಾಕಿ ಇರುವ ಹಿನ್ನೆಲೆಯಲ್ಲಿ ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಯಥಾಸ್ಥಿತಿಗೆ ಧಕ್ಕೆ ಒದಗದಂತೆ ನೋಡಿಕೊಳ್ಳಬೇಕು ಎಂದರು.
ಯಾವುದೇ ಆದೇಶ ಹೊರಡಿಸುವ ಮೊದಲು ಪ್ರತಿಕ್ರಿಯೆ ಸಲ್ಲಿಸಲು ಸಮಯಾವಕಾಶ ನೀಡುವಂತೆ ಎಸ್‌ಜಿ ಕೋರಿದರು. ಆದರೆ, ಕೆಲವು ನಿಬಂಧನೆಗಳನ್ನು ತಡೆಹಿಡಿಯಬೇಕಾಗುತ್ತದೆ ಎಂದು ಪೀಠ ಹೇಳಿತು.
ಮುಂದುವರಿದು, "ವಕ್ಫ್ ಮಂಡಳಿ ಅಥವಾ ಸಮಿತಿಯ ನೇಮಕಾತಿ ಮುಂದಿನ ವಿಚಾರಣೆಯವರೆಗೆ ನಡೆಯುವಂತಿಲ್ಲ. 1995 ರ ಕಾಯಿದೆಯಡಿಯಲ್ಲಿ ನೋಂದಣಿ ನಡೆದಿದ್ದರೆ, ಆ ಆಸ್ತಿಗಳಿಗೆ ತೊಂದರೆಯಾಗುವಂತಿಲ್ಲ. ಕಾರ್ಯಾಂಗ ನಿರ್ಧರಿಸುತ್ತದೆ ಮತ್ತು ನ್ಯಾಯಾಂಗವು ತೀರ್ಪು ನೀಡುತ್ತದೆ ಎಂದು ನಾವು ಹೇಳುತ್ತಿದ್ದೇವೆ" ಎಂದು ಸಿಜೆಐ ವಿವರಿಸಿದರು.
ಮಂಡಳಿಯ ನೇಮಕಾತಿ ನಡೆಯುವುದಿಲ್ಲ ಎಂದು ಎಸ್‌ಜಿ ಭರವಸೆ ನೀಡಿದರು. ಪ್ರಕರಣ ರಾಜ್ಯಗಳಿಗೆ ಸಂಬಂಧಿಸಿದ್ದು ಕೂಡ ಎಂದು ಸಿಜೆಐ ನೆನಪಿಸಿದರು. "ನ್ಯಾಯಾಲಯವು ಪ್ರಕರಣವನ್ನು ನಿರ್ಧರಿಸುವವರೆಗೆ ಯಾವುದೇ ರಾಜ್ಯವು ಯಾವುದೇ ನೇಮಕಾತಿಯನ್ನು ಮಾಡಿದರೆ, ಅದನ್ನು ಅನೂರ್ಜಿತವೆಂದು ಪರಿಗಣಿಸಲಾಗುತ್ತದೆ" ಎಂದು ಎಸ್‌ಜಿ ಭರವಸೆ ನೀಡಿದರು. ನಂತರ ನ್ಯಾಯಾಲಯವು ಎಸ್‌ಜಿ ಭರವಸೆಯನ್ನು ದಾಖಲಿಸಿಕೊಂಡಿತು.
ಅಲ್ಲದೆ, ಮುಂದಿನ ವಿಚಾರಣೆಯ ವೇಳೆ ಕೇವಲ 5 ಅರ್ಜಿಗಳನ್ನಷ್ಟೇ ಆಲಿಸುವುದಾಗಿ ಸ್ಪಷ್ಟಪಡಿಸಿದ ಪೀಠ. ಅದಕ್ಕೆ ಅನುಗುಣವಾಗಿ 5 ಅರ್ಜಿಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಅರ್ಜಿದಾರರಿಗೆ ಸೂಚನೆ ನೀಡಿತು. ಉಳಿದವನ್ನು ಒಂದೋ ಅರ್ಜಿಗಳು ಎಂದು ಉಲ್ಲೇಖಿಸಲಾಗುವುದು ಇಲ್ಲವೇ ವಿಲೇವಾರಿಯಾಗಿದೆ ಎಂದು ಭಾವಿಸಲಾಗುವುದು ಎಂದು ಹೇಳಿತು. ವಿಚಾರಣೆಯನ್ನು ಮೇ 5ಕ್ಕೆ ಮುಂದೂಡಿತು.