ವರ್ಚುವಲ್ ನ್ಯಾಯಾಲಯ ಕಲಾಪದ ವೆಬ್ ಲಿಂಕ್‌ಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿರುವುದರಿಂದ ಕಲಾಪದ ಸಂದರ್ಭದಲ್ಲಿ ಮೌಖಿಕ ಹೇಳಿಕೆ ನೀಡುವಾಗ ನ್ಯಾಯಾಧೀಶರು ಅತ್ಯಂತ ಜಾಗರೂಕರಾಗಿರುವ ಅನಪೇಕ್ಷಿತ ಪರಿಸ್ಥಿತಿ ನಿರ್ಮಾಣವಾದಂತಿದೆ.
ಇದಕ್ಕೆ ಮಂಗಳವಾರ ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮ ಮತ್ತು ನಟರಾಜ್ ರಂಗಸ್ವಾಮಿ ಅವರನ್ನೊಳಗೊಂಡ ವಿಭಾಗೀಯ ಪೀಠ ಲಘು ದಾಟಿಯಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯ ಪುಷ್ಟಿ ಒದಗಿಸಿದೆ. “ನಾವು ಅತ್ಯಂತ ಎಚ್ಚರಿಕೆಯಿಂದ ಇದ್ದೇವೆ. ಯಾರು ಕಲಾಪ ಆಲಿಸುತ್ತಿದ್ದಾರೆ ಮತ್ತು ಯಾರು ಆಲಿಸುತ್ತಿಲ್ಲ ಎಂಬುದು ನಮಗೆ ತಿಳಿಯುತ್ತಿಲ್ಲ. ವಿಡಿಯೊ ಕಾನ್ಫರೆನ್ಸ್ ಲಿಂಕ್ ಈಗ ಎಲ್ಲರಿಗೂ ಲಭ್ಯವಿದ್ದು, ಈಗ ಇದು ಮುಕ್ತ ನ್ಯಾಯಾಲಯವಾಗಿದೆ” ಎಂದರು.
ಸ್ಪರ್ಧಾತ್ಮಕ ಕಾನೂನು ಉಲ್ಲಂಘನೆ ಆರೋಪದ ಅಡಿ ಭಾರತೀಯ ಸ್ಪರ್ಧಾತ್ಮಕ ಆಯೋಗವು ಇ-ಕಾಮರ್ಸ್ ದೈತ್ಯ ಸಂಸ್ಥೆಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗಳ ವಿರುದ್ಧ ತನಿಖೆಗೆ ಆದೇಶಿಸಿದ್ದನ್ನು ಪ್ರಶ್ನಿಸಿ ಆ ಸಂಸ್ಥೆಗಳು ಸಲ್ಲಿಸಿದ್ದ ಮನವಿಯನ್ನು ಏಕಸದಸ್ಯ ಪೀಠ ಇತ್ತೀಚೆಗೆ ವಜಾಗೊಳಿಸಿತ್ತು. ಈ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳ ವಿಚಾರಣೆಯ ಸಂದರ್ಭದಲ್ಲಿ ಪೀಠವು ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ.
ಕಳೆದ ವಿಚಾರಣೆಯ ವೇಳೆ ಪೀಠವು ಕೋವಿಡ್ ಸಂದರ್ಭದಲ್ಲಿ ವೈದ್ಯರ ಸೇವೆಗೆ ಸಂಬಂಧಿಸಿದಂತೆ ನೀಡಿದ ಹೇಳಿಕೆಗೆ ಹಿರಿಯ ನ್ಯಾಯವಾದಿ ಗೋಪಾಲ ಸುಬ್ರಮಣಿಯಮ್ ಮೆಚ್ಚುಗೆ ಸೂಚಿಸಿದಾಗ ನ್ಯಾಯಾಲಯ ಮೇಲಿನಂತೆ ಹೇಳಿದೆ.
ಫ್ಲಿಪ್‌ಕಾರ್ಟ್ ಸಂಸ್ಥೆಯನ್ನು ಪ್ರತಿನಿಧಿಸಿದ್ದ ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ ಅವರು “ನಿನ್ನೆ ಕೆಲವು ಮಾಧ್ಯಮ ಸಂಸ್ಥೆಗಳು ತನ್ನ ವಾದದ ಕೆಲವು ಭಾಗವನ್ನು ತಪ್ಪಾಗಿ ವರದಿ ಮಾಡಿವೆ” ಎಂದರು. "ಫ್ಲಿಪ್‌ಕಾರ್ಟ್ ಆದ್ಯತೆಯ ಮಾರಾಟಗಾರರನ್ನು ಹೊಂದುವ ಮೂಲಕ ಬೆಲೆಗಳ ಮೇಲೆ ಪ್ರಭಾವ ಬೀರುತ್ತಿದೆ ಎಂದು ಒಪ್ಪಿಕೊಂಡಿದೆ ಎಂದು ಕೆಲವು ನವ ಮಾಧ್ಯಮಗಳು ವರದಿ ಮಾಡಿವೆ. ಇದನ್ನು ಅವರು ಎಲ್ಲಿಂದ ಕೇಳಿಸಿಕೊಂಡರೋ ನನಗೆ ತಿಳಿಯದು. ನಾನು ಯಾರಿಗಾದರೂ ಬಾಡಿಗೆಯಲ್ಲಿ ರಿಯಾಯಿತಿ ನೀಡಿದರೆ, ಇದು ಉತ್ಪಾದನಾ ಪ್ರಮಾಣದಲ್ಲಿನ ಒಪ್ಪಂದ ಹೇಗಾಗುತ್ತದೆ ಎಂದು ನಿನ್ನೆ ನಾನು ಹೇಳಿದ್ದೆ” ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠವು “ಹೌದು. ಇದು ಅತಿಯಾಯಿತು” ಎಂದಿತು. ಮತ್ತೊಂದೆಡೆ ಸುಬ್ರಮಣಿಯಮ್ ಅವರು ವಲೀಲರ ವಾದ-ಪ್ರತಿವಾದವನ್ನು ತಪ್ಪಾಗಿ ವರದಿ ಮಾಡುವುದರಿಂದ ಅಪಾಯಗಳು ಸಂಭವಿಸುತ್ತವೆ ಎಂದರು.
ಇದಕ್ಕೆ ಸಾಳ್ವೆ ಅವರು “ಚರ್ಚೆಗೆ ಈಗ ಪರ್ಯಾಯ ವೇದಿಕೆಯಿದೆ” ಎಂದರು. ಈ ಹಂತದಲ್ಲಿ ನ್ಯಾಯಾಲಯ “ನಿಮಗೆ ಕನಿಷ್ಠ ಪರ್ಯಾಯ ವ್ಯವಸ್ಥೆಯಾದರೂ ಇದೆ. ನಮಗೆ ಅದೂ ಇಲ್ಲ” ಎಂದಿತು.
ಕರ್ನಾಟಕ ಹೈಕೋರ್ಟ್ ವರ್ಷದ ಹಿಂದೆಯೇ ವರ್ಚುವಲ್ ವಿಚಾರಣೆಗೆ ತೆರೆದುಕೊಂಡಿತ್ತು. ಕಳೆದ ವರ್ಷದ ಕೋವಿಡ್ ಪ್ರಭಾವ ಇಳಿಮುಖವಾದ ನಂತರ ಮಿತಿಯಲ್ಲಿ ಭೌತಿಕ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಈ ವರ್ಷದ ಮೇನಿಂದ ಮತ್ತೆ ವರ್ಚುವಲ್ ವಿಚಾರಣೆಯ ಮೂಲಕ ಕಲಾಪ ನಡೆಸುತ್ತಿದೆ.
ಮಂಗಳವಾರದ ವಿಚಾರಣೆ ವೇಳೆ ಸುಬ್ರಮಣಿಯಂ ಅವರು ಅಮೆಜಾನ್ ಜಾಲತಾಣದ ಆಲ್ಗರಿದಂ (ಕ್ರಮಾವಳಿ) ಗ್ರಾಹಕರನ್ನು ಅವಲಂಬಿಸಿದೆ. ಉತ್ಪನ್ನಗಳ ಆದ್ಯತಾ ಪಟ್ಟಿ ಗ್ರಾಹಕರನ್ನು ಆಧರಿಸಿದೆ ಎಂದರು. “ಪಿಪಿಇ ಕಿಟ್, ಸ್ಯಾನಿಟೈಜರ್‌ಗಳನ್ನು ಕೂಡ ಯಾವ ಮಾರಾಟಗಾರ ನಿಮ್ಮ ಪ್ರದೇಶಕ್ಕೆ ಬೇಗನೆ ತರುತ್ತಾರೆ ಯಾರು ಅದನ್ನುಉತ್ತಮ ಸ್ಥಿತಿಯಲ್ಲಿ ತಲುಪಿಸುತ್ತಾರೆ ಎಂಬುದನ್ನೆಲ್ಲಾ ಕ್ರಮಾವಳಿ ತಿಳಿಸುತ್ತದೆ…” ಎಂದರು.
ಇದಲ್ಲದೆ ಅಮೆಜಾನ್, ಏಕ ಸದಸ್ಯ ಪೀಠದ ಆದೇಶ ಆನ್‌ಲೈನ್ ಮಾರುಕಟ್ಟೆ ತನ್ನ ವಿನ್ಯಾಸದ ಕಾರಣಕ್ಕೆ ಸ್ಪರ್ಧೆಯನ್ನು ಉತ್ತೇಜಿಸುವ ಸಾಧನವಾಗಿದೆ. ಆದರೆ ಆ ಪರಿಣಾಮಕ್ಕೆ ಸ್ಪಷ್ಟ ಪುರಾವೆಗಳಿಲ್ಲದಿದ್ದರೆ ಇದನ್ನು ಸ್ಪರ್ಧಾ ವಿರೋಧಿ ನ್ನಬಾರದು ಎಂದಿದೆ. ನಾಳೆ (ಜೂನ್ 23) ಪ್ರಕರಣದ ವಿಚಾರಣೆ ಮುಂದುವರೆಯಲಿದೆ.