ಮಣಿಪುರ ಕೇಂದ್ರ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಯೊಬ್ಬ ಕುಕಿ ಸಮುದಾಯಕ್ಕೆ ಸೇರಿದವನೆಂಬ ಕಾರಣಕ್ಕೆ ಆತನನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಧೋರಣೆ ಬಗ್ಗೆ ಸುಪ್ರೀಂ ಕೋರ್ಟ್ ಬುಧವಾರ ಆಘಾತ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ರಜಾಕಾಲೀನ ಪೀಠ ಮಣಿಪುರ ಸರ್ಕಾರದ ವಿರುದ್ಧ ಟೀಕೆಯ ಮಳೆ ಸುರಿಸಿದೆ.
ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಅಲ್ಲಿನ ಹೈಕೋರ್ಟ್ ನೀಡಿದ್ದ ತೀರ್ಪಿನಿಂದಾಗಿ ಮೈತೇಯಿ ಮತ್ತು ಕುಕಿ ಸಮುದಾಯದ ನಡುವೆ ಘರ್ಷಣೆ ಏರ್ಪಟ್ಟು ಕಳೆದ ವರ್ಷದುದ್ದಕ್ಕೂ ಮಣಿಪುರ ರಣರಂಗವಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
"ಕ್ಷಮಿಸಿ ವಕೀಲರೇ, ನಾವು(ಮಣಿಪುರ) ಸರ್ಕಾರವನ್ನು ನಂಬುವುದಿಲ್ಲ. ನಮಗೆ ನಂಬಿಕೆ ಬರುತ್ತಿಲ್ಲ. ಕುಕಿ ಸಮುದಾಯದವರೆಂಬ ಕಾರಣಕ್ಕೆ ಆರೋಪಿಯನ್ನು ಆಸ್ಪತ್ರೆಗೆ ಕರೆದೊಯ್ಯಲಿಲ್ಲವೇ? ತುಂಬಾ ದುಃಖವಾಗುತ್ತಿದೆ. ಆತನ ವೈದ್ಯಕೀಯ ಪರೀಕ್ಷೆ ನಡೆಸುವಂತೆ ಈಗ ನಿರ್ದೇಶಿಸುತ್ತಿದ್ದೇವೆ. ವೈದ್ಯಕೀಯ ವರದಿಯಲ್ಲಿ ಗಂಭೀರ ವಿಚಾರವೇನಾದರೂ ಕಂಡುಬಂದರೆ ನಾವು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ, ಇದನ್ನು ನೆನಪಿಡಿ, ”ಎಂದು ನ್ಯಾಯಾಲಯ ಎಚ್ಚರಿಸಿದೆ.
ವಿಚಾರಣಾಧೀನ ಕೈದಿಯ ವಿಚಾರಣೆ ಇನ್ನಷ್ಟೇ ಆರಂಭವಾಗಬೇಕಿದ್ದು. ಆತ ಪೈಲ್ಸ್ ಮತ್ತು ಕ್ಷಯರೋಗ ಹಾಗೂ ವಿಪರೀತ ಬೆನ್ನುನೋವಿನಿಂದ ಬಳಲುತ್ತಿರುವುದಾಗಿ ಆತ ಜೈಲು ಅಧಿಕಾರಿಗಳಿಗೆ ತಿಳಿಸಿದ್ದ. ಆರೋಪಿಯ ಸೊಂಟದ ಭಾಗದಲ್ಲಿ ಮೂಳೆ ಸವೆತ ಉಂಟಾಗಿರುವುದನ್ನು ಕಳೆದ ನವೆಂಬರ್‌ನಲ್ಲಿ ಗಮನಿಸಿದ್ದ ಜೈಲು ವೈದ್ಯಾಧಿಕಾರಿಗಳು ಎಕ್ಸ್ ರೇಗೆ ಶಿಫಾರಸು ಮಾಡಿದ್ದರು. ಆದರೆ ಈ ಸೌಲಭ್ಯ ಜೈಲಿನಲ್ಲಿರಲಿಲ್ಲ.
ಆರೋಪಿಗೆ ಹೈಕೋರ್ಟ್ ಜಾಮೀನು ನೀಡುವ ವೇಳೆ ಆತ ಕುಕಿ ಸಮುದಾಯಕ್ಕೆ ಸೇರಿದವನಾದ್ದರಿಂದ ಆತನನ್ನು ಆಸ್ಪತ್ರೆಗೆ ಸ್ಥಳಾಂತರಿಸುವುದು ಕಾನೂನು ಮತ್ತು ಸುವ್ಯವಸ್ಥೆಗೆ ಅಪಾಯಕಾರಿಯಾಗುತ್ತದೆ ಎಂಬ ಕಾರಣಕ್ಕೆ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ನಡೆಸಿಲ್ಲ ಎಂದು ಸರ್ಕಾರ ತಿಳಿಸಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್ ಆತನ ವೈದ್ಯಕೀಯ ತಪಾಸಣೆಗೆ ವ್ಯವಸ್ಥೆ ಮಾಡುವಂತೆ ಸೂಚಿಸಿದೆ. ಅಲ್ಲದೆ ಅದಕ್ಕೆ ತಗಲುವ ಎಲ್ಲಾ ವೆಚ್ಚವನ್ನೂ ಸರ್ಕಾರವೇ ಭರಿಸಬೇಕು. ವೈದ್ಯಕೀಯ ವರದಿಯನ್ನು ಜುಲೈ 15 ಅಥವಾ ಅದಕ್ಕಿಂತ ಮೊದಲು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ತಾಕೀತು ಮಾಡಿದೆ.