Justices Sreenivas Harish Kumar and S Rachaiah, Karnataka HC-Kalburgi Bench 
ಸುದ್ದಿಗಳು

ಕೃಷ್ಣ ಭಾಗ್ಯ ಜಲ ನಿಗಮ ಮುಖ್ಯ ಲೆಕ್ಕಾಧಿಕಾರಿ ಅಮಾನತು ಆದೇಶ ವಜಾಗೊಳಿಸಿದ ಹೈಕೋರ್ಟ್‌

ಕರ್ನಾಟಕ ಸರ್ಕಾರ (ವ್ಯವಹಾರ ಮುನ್ನಡೆಸುವುದು - ಟ್ರಾನ್ಸಾಕ್ಷನ್‌ ಆಫ್‌ ಬ್ಯುಸಿನೆಸ್‌) ನಿಯಮಗಳು 1977ರ ನಿಯಮ 36ರ ಅಡಿ ಅಧಿಕಾರಿಯನ್ನು ಅಮಾನತು ಮಾಡುವುದಕ್ಕೂ ಮುನ್ನ ಮುಖ್ಯಮಂತ್ರಿ ಒಪ್ಪಿಗೆ ಪಡೆಯಬೇಕು ಎಂದಿರುವ ಪೀಠ.

Siddesh M S

ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಕೃಷ್ಣ ಭಾಗ್ಯ ಜಲ ನಿಗಮ ಲಿಮಿಟೆಡ್‌ನ ಮುಖ್ಯ ಲೆಕ್ಕಾಧಿಕಾರಿ ಅವರನ್ನು ಅಮಾನತು ಮಾಡುವಾಗ ಕಾನೂನಿನ ಅನ್ವಯ ಮುಖ್ಯಮಂತ್ರಿ ಅವರ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕಿತ್ತು ಎಂದು ಹೇಳಿರುವ ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಈಚೆಗೆ ಅವರ ಅಮಾನತು ಆದೇಶವನ್ನು ವಜಾ ಮಾಡಿದೆ.

ಮಂಗಳೂರು ಮೂಲದ ಎಸ್‌ ಅಜಿತ್‌ ಕುಮಾರ್‌ ಹೆಗ್ಡೆ ಅವರು ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಸ್‌ಎಟಿ) ಮಾಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಮತ್ತು ಎಸ್‌ ರಾಚಯ್ಯ ಅವರಿದ್ದ ವಿಭಾಗೀಯ ಪೀಠ ನಡೆಸಿ ಆದೇಶ ಮಾಡಿದೆ.

ಕರ್ನಾಟಕ ಸರ್ಕಾರ (ವ್ಯವಹಾರ ಮುನ್ನಡೆಸುವುದು) ನಿಯಮಗಳು 1977ರ ನಿಯಮ 36ರ ಅಡಿ ಅಧಿಕಾರಿಯನ್ನು ಅಮಾನತು ಮಾಡುವುದಕ್ಕೂ ಮುನ್ನ ಮುಖ್ಯಮಂತ್ರಿ ಒಪ್ಪಿಗೆ ಪಡೆಯಬೇಕು. ಈ ಹಿನ್ನೆಲೆಯಲ್ಲಿ ಅರ್ಜಿದಾರರನ್ನು ಅಮಾನತು ಮಾಡಬಾರದಿತ್ತು. ಮುಖ್ಯ ಲೆಕ್ಕಾಧಿಕಾರಿಯಾಗಿದ್ದ ವರದರಾಜು ಅವರ ಪ್ರಕರಣದಲ್ಲಿ ಕೆಎಸ್‌ಎಟಿ ಸರಿಯಾದ ನಿರ್ಧಾರ ಕೈಗೊಂಡಿದ್ದು, ಅಜಿತ್‌ ಕುಮಾರ್‌ ಹೆಗ್ಡೆ ಅವರ ಪ್ರಕರಣದಲ್ಲಿ ವಿಭಿನ್ನ ನಿಲುವು ಕೈಗೊಳ್ಳಬಾರದಿತ್ತು. ಹೀಗಾಗಿ, ಕೆಎಸ್‌ಎಟಿ ಆದೇಶದಲ್ಲಿ ಮಧ್ಯಪ್ರವೇಶ ಮಾಡಬೇಕಿದ್ದು, 2022ರ ಫೆಬ್ರವರಿ 23ರಂದು ಮಾಡಿರುವ ಆದೇಶವನ್ನು ಬದಿಗೆ ಸರಿಸಲಾಗಿದೆ. ಅಜಿತ್‌ ಕುಮಾರ್‌ ಹೆಗ್ಡೆ ಅವರನ್ನು 2021ರ ನವೆಂಬರ್‌ 26ರಂದು ಅಮಾನತು ಮಾಡಿರುವ ಆದೇಶವನ್ನು ವಜಾ ಮಾಡಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಮುಂದುವರಿದು, “ಅರ್ಜಿದಾರರ ಮನವಿ ಪುರಸ್ಕರಿಸಿರುವ ಹಿನ್ನೆಲೆಯಲ್ಲಿ ಅವರಿಗೆ ಸಲ್ಲಬೇಕಾದ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿದ್ದಾರೆ. ಒಂದೊಮ್ಮೆ ಅರ್ಜಿದಾರರ ವಿರುದ್ಧ ಯಾವುದಾದರೂ ತನಿಖೆ ಪ್ರಗತಿಯಲ್ಲಿದ್ದರೆ ಅದಕ್ಕೆ ಈ ಆದೇಶ ಅನ್ವಯಿಸುವುದಿಲ್ಲ” ಎಂದು ಪೀಠವು ಸ್ಪಷ್ಟಪಡಿಸಿದೆ.

“ಕರ್ನಾಟಕ ನಾಗರಿಕ ಸೇವೆಗಳು (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 10(5)(ಬಿ) ಅಡಿ ತಪ್ಪಿತಸ್ಥ ಸರ್ಕಾರಿ ಅಧಿಕಾರಿಯ ವಿರುದ್ಧ ಇಲಾಖಾ ತನಿಖೆ ಆರಂಭವಾಗಿರದಿದ್ದರೆ ಅಥವಾ ಆರು ತಿಂಗಳಲ್ಲಿ ಆರೋಪ ಪಟ್ಟಿ ಸಲ್ಲಿಕೆಯಾಗದಿದ್ದರೆ ಸಕ್ಷಮ ಪ್ರಾಧಿಕಾರವು ಅಮಾನತು ಮುಂದುವರಿಸಬೇಕೆ ಅಥವಾ ಆದೇಶ ಹಿಂಪಡೆಯಬೇಕೆ ಎಂಬುದನ್ನು ನಿರ್ಧರಿಸಬೇಕು” ಎಂದು ಪೀಠ ಹೇಳಿದೆ.

2022ರ ಜೂನ್‌ 20ರ ವಿಚಾರಣೆಯಂದು ಪೀಠವು ಹೆಗ್ಡೆ ಅವರನ್ನು ಅಮಾನತು ಮಾಡುವುದಕ್ಕೂ ಮುನ್ನ ಮುಖ್ಯಮಂತ್ರಿ ಒಪ್ಪಿಗೆ ಪಡೆಯಲಾಗಿತ್ತೇ ಎಂಬುದನ್ನು ಪರಿಶೀಲಿಸುವಂತೆ ಪ್ರತಿವಾದಿ ವಕೀಲರಿಗೆ ಸೂಚಿಸಿತ್ತು. ಇದರಂತೆ ಜೂನ್‌ 27ರ ವಿಚಾರಣೆಯಲ್ಲಿ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ವೀರನಗೌಡ ಮಾಲಿಪಾಟೀಲ್‌ ಅವರು ದೂರವಾಣಿಯಲ್ಲಿ ತನಗೆ ನೀಡಿದ ಮಾಹಿತಿ ಪ್ರಕಾರ ಅರ್ಜಿದಾರರನ್ನು ಅಮಾನತು ಮಾಡುವುದಕ್ಕೂ ಮುನ್ನ ಮುಖ್ಯಮಂತ್ರಿ ಅವರ ಅನುಮತಿ ಪಡೆಯಲಾಗಿರಲಿಲ್ಲ ಎಂದು ತಿಳಿಸಿದ್ದನ್ನು ಪೀಠವು ಆದೇಶದಲ್ಲಿ ಉಲ್ಲೇಖಿಸಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ವಿ ಲಕ್ಷ್ಮಿನಾರಾಯಣ, ವಕೀಲರಾದ ಪ್ರಥಮ್‌, ಎಲ್‌ ಅನುಷಾ ಅವರು “ಅಮಾನತು ಆದೇಶ ಮಾಡಿದ ಮೂರು ತಿಂಗಳಲ್ಲಿ ಆರೋಪ ಪಟ್ಟಿ ಸಲ್ಲಿಸಬೇಕು ಮತ್ತು ಹೆಗ್ಡೆ ಅವರನ್ನು ಅಮಾನತು ಮಾಡುವುದಕ್ಕೂ ಮುನ್ನ ಮುಖ್ಯಮಂತ್ರಿ ಅವರ ಅನುಮತಿ ಪಡೆಯಲಾಗಿಲ್ಲ. ಇದನ್ನು ಕೆಎಸ್‌ಎಟಿ ಪರಿಗಣಿಸಿಲ್ಲ. ಆದರೆ, ಇದೇ ರೀತಿಯಾದ ವರದರಾಜು ಅವರ ಪ್ರಕರಣದಲ್ಲಿ ಕೆಎಸ್‌ಎಟಿ ವರದರಾಜು ಅವರ ವಾದ ಪುರಸ್ಕರಿಸಿತ್ತು. ಆದರೆ, ಹೆಗ್ಡೆ ಅವರ ವಿಚಾರದಲ್ಲಿ ಭಿನ್ನ ನಿಲುವು ತಳೆಯಲಾಗಿದೆ. ಹೀಗಾಗಿ, ಅಮಾನತು ಆದೇಶ ವಜಾ ಮಾಡಬೇಕು” ಎಂದು ಕೋರಿದ್ದರು.

ಅಮಾನತು ಆದೇಶಕ್ಕೆ ಸಂಬಂಧಿಸಿದಂತೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರನ್ನು ಪ್ರತಿನಿಧಿಸಿದ್ದ ಸರ್ಕಾರದ ವಕೀಲ ಮಲ್ಲಿಕಾರ್ಜುನ ಸಿ ಬಸರೆಡ್ಡಿ ಅವರು “ಕರ್ನಾಟಕ ನಾಗರಿಕ ಸೇವೆಗಳು (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 10(5)(ಬಿ) ಅಡಿ ಆರು ತಿಂಗಳಲ್ಲಿ ಆರೋಪ ಪಟ್ಟಿ ಸಲ್ಲಿಸಬೇಕು ಎಂದು ಹೇಳಲಾಗಿದೆ. ಈ ಸಂಬಂಧ ಈಗಾಗಲೇ ಆರೋಪ ಪಟ್ಟಿ ಸಲ್ಲಿಸಿದ್ದು, ತನಿಖೆ ನಡೆಯುತ್ತಿದೆ” ಎಂದು ಪೀಠಕ್ಕೆ ವಿವರಿಸಿದರು. ಇದೇ ನಿಲುವನ್ನು ವಿಜಯಪುರದ ಕೃಷ್ಣ ಭಾಗ್ಯ ಜಲ ನಿಗಮ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕರನ್ನು ಪ್ರತಿನಿಧಿಸಿದ್ದ ವಕೀಲ ಸಂಜಯ್‌ ಎಂ ಜೋಶಿ ತಳೆದಿದ್ದರು. ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್‌ ಅನ್ನು ವಕೀಲ ಗೌರೀಶ್‌ ಎಸ್‌. ಕಾಶೆಂಪುರ್‌ ಪ್ರತಿನಿಧಿಸಿದ್ದರು.

ಪ್ರಕರಣದ ಹಿನ್ನೆಲೆ: 2021ರ ನವೆಂಬರ್‌ 26ರಂದು ಕೃಷ್ಣ ಭಾಗ್ಯ ಜಲ ನಿಗಮ ಲಿಮಿಟೆಡ್‌ನಲ್ಲಿ ಮುಖ್ಯ ಲೆಕ್ಕಾಧಿಕಾರಿಯಾಗಿದ್ದ ಅಜಿತ್‌ ಕುಮಾರ್‌ ಹೆಗ್ಡೆ ಅವರನ್ನು ಅಮಾನತು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಕೆಎಸ್‌ಎಟಿಯಲ್ಲಿ ಎರಡು ವಿಚಾರಗಳನ್ನು ಇಟ್ಟುಕೊಂಡು ಪ್ರಶ್ನಿಸಿದ್ದರು. ಅಮಾನತು ಆದೇಶ ಮಾಡಿದ ಮೂರು ತಿಂಗಳಲ್ಲಿ ಆರೋಪ ಪಟ್ಟಿ ಸಲ್ಲಿಸಬೇಕು ಮತ್ತು ಹೆಗ್ಡೆ ಅವರನ್ನು ಅಮಾನತು ಮಾಡುವುದಕ್ಕೂ ಮುನ್ನ ಮುಖ್ಯಮಂತ್ರಿ ಅವರ ಅನುಮತಿ ಪಡೆಯಲಾಗಿಲ್ಲ. ಹೀಗಾಗಿ, ಅಮಾನತು ಆದೇಶ ಅಸಿಂಧುವಾಗಿದ್ದು, ಅದನ್ನು ತೆರವುಗೊಳಿಸಬೇಕು ಎಂದು ಕೋರಿದ್ದರು. ಈ ವಾದ ಒಪ್ಪದ ಕೆಎಸ್‌ಎಟಿ ಅರ್ಜಿ ವಜಾ ಮಾಡಿತ್ತು.