Karntaka HC and Justices B Verappa and K S Hemalekha
Karntaka HC and Justices B Verappa and K S Hemalekha 
ಸುದ್ದಿಗಳು

[ಕೌಟುಂಬಿಕ ಪ್ರಕರಣ] ತಂದೆ ಭೇಟಿ ಮಾಡಲು ಇಚ್ಛೆ ಇದೆಯೇ ಎಂಬುದನ್ನು ಮಗುವಿನಿಂದ ನಾವೇ ಖುದ್ದು ತಿಳಿಯುತ್ತೇವೆ: ಹೈಕೋರ್ಟ್

Bar & Bench

“ಈಗಿನ ಕಾಲದ ಮಕ್ಕಳು ಸಾಕಷ್ಟು ಚುರುಕು ಮತ್ತು ಪ್ರಬುದ್ಧರಿರುತ್ತಾರೆ. ತಂದೆಯನ್ನು ಭೇಟಿ ಮಾಡುವ ಕುರಿತು ಮಗುವನ್ನು ನಾವೇ ಖುದ್ದಾಗಿ ವಿಚಾರಿಸುತ್ತೇವೆ” ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಪ್ರಕರಣವೊಂದರ ವಿಚಾರಣೆ ವೇಳೆ ಮಗುವಿನ ತಾಯಿಗೆ ಹೇಳಿತು.

ಹದಿನಾರು ವರ್ಷದ ಮಗನನ್ನು ನೋಡಲು ಅವಕಾಶ ಮಾಡಿಕೊಡುವಂತೆ ವಿಚ್ಛೇದಿತ ಪತ್ನಿಗೆ ನಿರ್ದೇಶಿಸಬೇಕು ಎಂದು ಕೋರಿ ಚೆನ್ನೈನಲ್ಲಿ ನೆಲೆಸಿರುವ ವಿಚ್ಛೇದಿತ ಪತಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ಎಸ್‌ ಹೇಮಲೇಖಾ ಅವರಿದ್ದ‌ ವಿಭಾಗೀಯ ಪೀಠ ನಡೆಸಿತು.

"ನೀವು ವಿಚ್ಛೇದನ ಪಡೆದಿರಬಹುದು. ಆದರೆ ಆ ಮಗು ನಿಮ್ಮಿಬ್ಬರ ಸಂಯೋಗದಿಂದಲೇ ಹುಟ್ಟಿದ್ದಲ್ಲವೇ, ಹಾಗಾಗಿ ತಂದೆಯನ್ನು ನೋಡಲು ಯಾಕೆ ತಡೆಯುತ್ತೀರಿ. ನೋಡಲು ಬಿಡಿ. ಈಗಿನ ಮಕ್ಕಳು ಕೂರಿಸಿಕೊಂಡು ನಿಮಗೇ ಪಾಠ ಹೇಳುವಷ್ಟು ಜಾಣರಿರುತ್ತಾರೆ" ಎಂದು ಪೀಠವು ಮಗುವಿನ ತಾಯಿಗೆ ಬುದ್ದಿವಾದ ಹೇಳಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಕೆ.ಎಸ್‌.ಭೀಮಯ್ಯ ಅವರು ಮಗುವನ್ನು ನೋಡಲು ತಾಯಿ ಬಿಡುತ್ತಿಲ್ಲ ಎಂದು ಆಕ್ಷೇ‍ಪಿಸಿದರು.

ಇದಕ್ಕೆ ಪ್ರತಿವಾದಿ ತಾಯಿ ಪರ ವಕೀಲರು, "ಮಗುವಿಗೆ 16 ವರ್ಷ. ಈ ವರ್ಷ ಎಸ್ಸೆಸ್ಸೆಲ್ಸಿ ಓದುತ್ತಿದ್ದಾನೆ. ಸಿಬಿಎಸ್‌ಸಿ ಮಧ್ಯಂತರ ಪರೀಕ್ಷೆಗಳು ಇದೇ ತಿಂಗಳ ಕೊನೆಯ ವಾರದಿಂದ ಆರಂಭವಾಗಲಿವೆ. ಈ ಹಂತದಲ್ಲಿ ಅವನನ್ನು ತಂದೆಯ ಬಳಿ ಬಿಟ್ಟರೆ ಅವರ ಮಾನಸಿಕ ಸಂತುಲತೆಯಲ್ಲಿ ವ್ಯತ್ಯಾಸವಾಗಿ ಅದು ಅಭ್ಯಾಸದ ಮೇಲೆ ಪರಿಣಾಮ ಬೀರಬಹುದು" ಎಂದರು.

ಇದನ್ನು ಒಪ್ಪದ ಪೀಠವು "ಅಯ್ಯೋ ಈಗಿನ ಕಾಲದ ಮಕ್ಕಳು ಸಾಕಷ್ಟು ಚುರುಕು ಮತ್ತು ಪ್ರಬುದ್ಧರಿರುತ್ತಾರೆ. ನೀವು ಅಂದುಕೊಳ್ಳುತ್ತಿರುವ ರೀತಿ ಏನೂ ಆಗುವುದಿಲ್ಲ. ಚಳಿಗಾಲ ಮತ್ತು ಬೇಸಿಗೆಕಾಲದ ರಜೆಯಲ್ಲಿ ಅರ್ಧ ಭಾಗ ತಂದೆಯ ಬಳಿ ಇರಲು ಆದೇಶಿಸುತ್ತೇವೆ" ಎಂದಿತು.

ಇದಕ್ಕೆ ಆಕ್ಷೇಪಿಸಿದ ತಾಯಿಯ ಪರ ವಕೀಲರು, "ಸ್ವಾಮಿ, ಆ ರೀತಿ ಆದೇಶಿಸಬೇಡಿ. ಅವರು ಮತ್ತೊಂದು ಮದುವೆಯಾಗಿದ್ದಾರೆ. ಹೊಸ ಹೆಂಡತಿಗೂ ಒಂದು ಗಂಡು ಮಗುವಿದೆ" ಎಂದು ಮನವಿ ಮಾಡಿದರು.

ಆಗ ನ್ಯಾಯಮೂರ್ತಿಗಳು, ಇದೇ 24ಕ್ಕೆ ಮಗುವನ್ನು ಕರೆಯಿಸಿ. ಅವನನ್ನು ಕೊಠಡಿಯಲ್ಲಿ ಕೂರಿಸಿಕೊಂಡು, ಅಪ್ಪನನ್ನು ಭೇಟಿ ಮಾಡಲು ಇಚ್ಛೆಯಿದೆಯೊ ಇಲ್ಲವೊ ಎಂಬುದನ್ನು ನಾನೇ ಕೇಳಿ ತಿಳಿದುಕೊಳ್ಳುತ್ತೇನೆ ಎಂದು ವಿಚಾರಣೆ ಮುಂದೂಡಿದರು.

ಬೆಂಗಳೂರಿನಲ್ಲಿ ನೆಲೆಸಿರುವ ವಿಚ್ಛೇದಿತ ಮಹಿಳೆ ವಿದ್ಯಾವಂತ ಉದ್ಯೋಗಸ್ಥೆ. ಪತಿಯೂ ಸಾಫ್ಟ್‌ವೇರ್ ಎಂಜಿನಿಯರ್. ಇಬ್ಬರೂ 2005ರ ಫೆಬ್ರುವರಿ 14ರ ವ್ಯಾಲೆಂಟೈನ್‌ ದಿನವೇ ಮದುವೆಯಾಗಿದ್ದರು. ಇಬ್ಬರಿಗೂ ಅದೇ ವರ್ಷದ ಡಿಸೆಂಬರ್‌ 19ರಂದು ಗಂಡು ಮಗುವಿನ ಜನನವಾಗಿತ್ತು. ಭಿನ್ನಾಭಿಪ್ರಾಯಗಳ ಕಾರಣ 2011ರ ನವೆಂಬರ್‌ 24ರಂದು ಕೌಟುಂಬಿಕ ನ್ಯಾಯಾಲಯದಲ್ಲಿ ಪರಸ್ಪರ ವಿಚ್ಛೇದನ ಪಡೆದಿದ್ದರು.