ದೇಶದಲ್ಲಿ ವೈವಾಹಿಕ ಕಾನೂನು ಪರಿಷ್ಕರಿಸಲು ಸಕಾಲ; ವಿವಾಹ-ವಿಚ್ಛೇದನ ಜಾತ್ಯತೀತ ಕಾನೂನಿನಡಿ ಇರಬೇಕು: ಕೇರಳ ಹೈಕೋರ್ಟ್‌

ಸಮಾಜದಲ್ಲಿ ಬದಲಾವಣೆಗಳು ಆದಂತೆ ಕಾನೂನಿನಲ್ಲಿ ಬದಲಾವಣೆ ಅಗತ್ಯವಾಗಿದ್ದು, ತಮ್ಮ ಜೀವನ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ತಾವೇ ತೀರ್ಮಾನ ಮಾಡಲು ಸಮರ್ಥರಾಗುವಂತೆ ಪ್ರತಿಯೊಬ್ಬರನ್ನು ಅಣಿಗೊಳಿಸಬೇಕು ಎಂದು ನ್ಯಾಯಾಲಯ ಹೇಳಿದೆ.
Kerala High court, Divorce
Kerala High court, Divorce

ದೇಶದಲ್ಲಿನ ವೈವಾಹಿಕ ಮತ್ತು ವಿಚ್ಛೇದನ ಕಾನೂನಿನಲ್ಲಿ ಪರಿಷ್ಕರಣೆ ಅಗತ್ಯವಾಗಿದ್ದು, ಈ ಮೂಲಕ ಧರ್ಮ ಮತ್ತು ಸಮುದಾಯವನ್ನು ಮೀರಿ ಏಕರೂಪದ ಕಾನೂನು ರೂಪಿಸಬೇಕಿದೆ ಎಂದು ಕೇರಳ ಹೈಕೋರ್ಟ್‌ ಹೇಳಿದೆ.

ವೈವಾಹಿಕ ಅತ್ಯಾಚಾರವನ್ನು ಆಧರಿಸಿ ಮಹಿಳೆಯು ವಿಚ್ಛೇದನ ಕೋರಬಹುದು ಎಂದು ಮಹತ್ವದ ತೀರ್ಪು ಹೊರಡಿಸಿರುವ ನ್ಯಾಯಮೂರ್ತಿಗಳಾದ ಎ ಮೊಹಮ್ಮದ್‌ ಮುಸ್ತಾಕ್‌ ಮತ್ತು ಕೌಸರ್‌ ಎಡಪ್ಪಗಡ್‌ ನೇತೃತ್ವದ ವಿಭಾಗೀಯ ಪೀಠವು ಕೆಲವು ಪ್ರಮುಖ ವಿಚಾರಗಳನ್ನು ತಮ್ಮ ತೀರ್ಪಿನಲ್ಲಿ ಹೇಳಿದೆ.

"ವೈಯಕ್ತಿಕ ಕಾನೂನಿನ ರೀತ್ಯಾ ಮದುವೆ ಮಾಡಿಕೊಳ್ಳಲು ಪ್ರತಿಯೊಬ್ಬರೂ ಸ್ವತಂತ್ರರು. ಹಾಗೆಂದು, ಜಾತ್ಯತೀತ ಕಾನೂನಿನಡಿ ಅದನ್ನು ಕಡ್ಡಾಯವಾಗಿ ವಿಧ್ಯುಕ್ತವಾಗಿಸುವುದರಿಂದ ಅವರಿಗೆ ವಿನಾಯತಿ ನೀಡಲಾಗದು. ವಿವಾಹ ಮತ್ತು ವಿಚ್ಛೇದನ ಎರಡೂ ಜಾತ್ಯತೀತ ಕಾನೂನಿನ ಅಡಿ ನಡೆಯಬೇಕು; ಅದು ಸದ್ಯದ ತುರ್ತು," ಎಂದು ಪೀಠ ಹೇಳಿದೆ.

ದೇಶದಲ್ಲಿ ವೈವಾಹಿಕ ಕಾನೂನನ್ನು ಪರಿಷ್ಕರಿಸಲು ಕಾಲ ಕೂಡಿ ಬಂದಿದೆ.
ಕೇರಳ ಹೈಕೋರ್ಟ್‌

ವಿಚ್ಛೇದನ ಕೋರುವ ಸಂಗಾತಿಯನ್ನು ರಕ್ಷಿಸಲು ಕಾನೂನು ರಕ್ಷಣೆಗಳನ್ನು ರೂಪಿಸಬೇಕು ಎಂದು ನ್ಯಾಯಾಲಯವು ತನ್ನ ತೀರ್ಪುನಲ್ಲಿ ಒತ್ತಿ ಹೇಳಿದೆ.

“ವೈವಾಹಿಕವಾಗಿ ಬೇರ್ಪಡುವಿಕೆಯು ಸಂಗಾತಿಗೆ ಸಾಕಷ್ಟು ನಷ್ಟ ಉಂಟುಮಾಡಬಹುದು. ಆಕೆ/ಅವನ ಇಚ್ಛೆಗೆ ಅನುಗುಣವಾಗಿ ನಡೆದುಕೊಳ್ಳಲು ಅನುಮತಿಸುವ ಕಾನೂನು, ವಿವಾಹ ಅಥವಾ ಬೇರ್ಪಡುವಿಕೆಯಲ್ಲಿ ಸಂಗಾತಿಗೆ ಆಗುವ ನಷ್ಟವನ್ನು ಮರೆಮಾಚಲಾಗದು. ತಮ್ಮ ಸಂಗಾತಿಯಿಂದ ಬೇರ್ಪಡುವ ಆಯ್ಕೆಯನ್ನು ಚಲಾಯಿಸಿದಾಗ ಪತಿ ಅಥವಾ ಪತ್ನಿ ದುರ್ಬಲಗೊಳ್ಳಬಹುದಾದ ಸಾಧ್ಯತೆ ಇರುತ್ತದೆ. ದುರ್ಬಲತೆಯಿಂದ ಉಂಟಾಗುವ ಸ್ಥಿತಿಯಿಂದ ಸಂಗಾತಿಯ ಸಬಲೀಕರಣ ಮುಖ್ಯವಾಗುತ್ತದೆ. ಕೆಲವೊಮ್ಮೆ‌ ವಿಚ್ಛೇದನ ಕೋರುವ ಸಂಗಾತಿಯು ಸಂಬಂಧದಲ್ಲಿ ಅಲ್ಲೋಲಕಲ್ಲೋಲಕ್ಕೆ ಕಾರಣರಾಗುತ್ತಾರೆ. ಬೇರ್ಪಡುವಿಕೆ ಸಂದರ್ಭದಲ್ಲಿ ಸಂಬಂಧದಲ್ಲಿ ಸಂಭವಿಸುವ ಯಾವುದೇ ನಷ್ಟದಿಂದ ಸಂಗಾತಿಯನ್ನು ರಕ್ಷಿಸುವ ಕೆಲಸವನ್ನು ಕಾನೂನು ಮಾಡಬೇಕು” ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಮೇಲಿನ ಕಾರಣಗಳ ಹಿನ್ನೆಲೆಯಲ್ಲಿ ವೈವಾಹಿಕ ನಷ್ಟ ಮತ್ತು ಪರಿಹಾರವನ್ನು ಕಾನೂನು ನೀಡಬೇಕು ಎಂದು ನ್ಯಾಯಾಲಯ ಹೇಳಿದೆ. “ವೈವಾಹಿಕ ನಷ್ಟ ಮತ್ತು ಪರಿಹಾರದ ಕುರಿತು ನಿರ್ಣಯಿಸಲು ಕಾನೂನು ಸಮರ್ಥವಾಗಿರಬೇಕು. ಮಾನವನ ಸಮಸ್ಯೆಗಳಿಗೆ ಮಾನವೀಯ ಮನಸ್ಸಿನಿಂದ ಪ್ರತಿಕ್ರಿಯಿಸುವ ಕಾನೂನಿನ ಅಗತ್ಯವಿದೆ” ಎಂದು ಪೀಠ ಹೇಳಿದೆ.

ಇಂಥ ಕಾನೂನು ರಕ್ಷಣೆಗಳನ್ನು ರೂಪಿಸುವ ನಿಟ್ಟಿನಲ್ಲಿ ವಿವಾಹ ಮತ್ತು ವಿಚ್ಛೇದನದ ವಿಚಾರದಲ್ಲಿ ಮೊದಲಿಗೆ ಎಲ್ಲಾ ಸಮುದಾಯಗಳಿಗೂ ಅನ್ವಯಿಸುವ ಸಾಮಾನ್ಯ ಕಾನೂನು ಸಂಹಿತೆ ಜಾರಿಗೊಳಿಸುವುದು ಅಗತ್ಯವಾಗಿದ ಎಂದು ನ್ಯಾಯಾಲಯ ಹೇಳಿದೆ.

ವಿವಾಹ ಮತ್ತು ವಿಚ್ಛೇದನವು ಜಾತ್ಯತೀತ ಕಾನೂನಿನ ಅಡಿ ಇರಬೇಕು; ಇದು ಸದ್ಯದ ಅಗತ್ಯ.
ಕೇರಳ ಹೈಕೋರ್ಟ್‌

ವಿವಾಹ ಮತ್ತು ವಿಚ್ಛೇದನದ ವಿಚಾರದಲ್ಲಿ ಎಲ್ಲಿಯವರೆಗೆ ಸರ್ಕಾರದ ಹಸ್ತಕ್ಷೇಪಕ್ಕೆ ಅನುಮತಿಸಬಹುದು ಎಂಬುದರ ಬಗ್ಗೆಯು ನ್ಯಾಯಾಲಯ ಪ್ರತಿಕ್ರಿಯಿಸಿದೆ. “ವ್ಯಕ್ತಿಯ ಹಿತದೃಷ್ಟಿ ಮತ್ತು ಸಮಾಜದ ಹಿತದೃಷ್ಟಿಯನ್ನು ಸರಿದೂಗಿಸುವುದು ಹೇಗೆ? ತಮ್ಮ ಸಂಗಾತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ. ಆದರೆ, ತಮ್ಮ ಇಚ್ಛೆಗೆ ಅನುಗುಣವಾಗಿ ಸಂಬಂಧದಿಂದ ಬೇರ್ಪಡುವ ಸ್ವಾತಂತ್ರ್ಯವಿಲ್ಲ ಎನಿಸುತ್ತದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ವಿಚ್ಛೇದನ ನೀಡದೆ ವೈವಾಹಿಕ ಬದುಕಿನಲ್ಲಿ ಸಂಗಾತಿ ಯಾತನೆ ಅನುಭವಿಸುವಂತೆ ಕಾನೂನು ಮಾಡಬಾರದು ಎಂದು ನ್ಯಾಯಾಲಯ ಒತ್ತಿ ಹೇಳಿದೆ. “ವೈವಾಹಿಕ ಜೀವನದಲ್ಲಿ ಸಂಗಾತಿಗೆ ಆಯ್ಕೆ ಇರುತ್ತದೆ. ಆ ಆಯ್ಕೆಯು ಯಾತನೆಯನ್ನು ಅನುಭವಿಸುವುದಲ್ಲ. ಇದು ಸಾಮಾನ್ಯ ಕಾನೂನು ಮತ್ತು ಸಂವಿಧಾನದ ಅಡಿ ಖಾತರಿಯಾಗಿರುವ ಸ್ವಾಯತ್ತೆಯ ಮೂಲವಾಗಿದೆ. ನ್ಯಾಯಾಲಯದಿಂದ ವಿಚ್ಛೇದನವನ್ನು ನಿರಾಕರಿಸುವ ಮೂಲಕ ಸಂಗಾತಿಯು ತನ್ನ ಇಚ್ಛೆಗೆ ವಿರುದ್ಧವಾಗಿ ಬಳಲುವಂತೆ ಕಾನೂನು ಒತ್ತಾಯಿಸಲು ಸಾಧ್ಯವಿಲ್ಲ. ವಿಚ್ಛೇದನ ಮನವಿ ವಜಾಗೊಂಡಾಗ ವಾಸ್ತವದಲ್ಲಿ ಈ ರೀತಿ ಆಗುತ್ತದೆ” ಎಂದು ಪೀಠ ಹೇಳಿದೆ.

ವ್ಯಕ್ತಿಯ ಆಯ್ಕೆ ಮತ್ತು ಅವರ ಹಿತಾಸಕ್ತಿಯ ನಡುವೆ ಸಮನ್ವಯತೆ ಸಾಧಿಸುವ ನಿಟ್ಟಿನಲ್ಲಿ ಕಾನೂನಿನ ಪಾತ್ರವು ವ್ಯಕ್ತಿಯು ಸರಿಯಾದ ನಿರ್ಧಾರ ಮಾಡಲು ದಾರಿ ತೋರುವುದು ಅಥವಾ ನಿಯಮಗಳನ್ನು ರೂಪಿಸುವುದಾಗಿದೆ. “ತಮ್ಮ ಅನುಕೂಲಕ್ಕೆ ತಕ್ಕಂತೆ ನಿರ್ಧಾರ ಕೈಗೊಳ್ಳಲು ಕಾನೂನಿನ ಮೂಲಕ ಪೋಷಕರ ಮಧ್ಯಪ್ರವೇಶವು ಪಕ್ಷಕಾರರಿಗೆ ಸಹಾಯ ಮತ್ತು ನೆರವು ನೀಡಲು ಮಾತ್ರ ಸೀಮಿತವಾಗಿರಬೇಕು. ಹೀಗಾಗಿ, ವಿಚ್ಛೇದನ ಕಾನೂನಿನ ಚೌಕಟ್ಟು ತಮ್ಮ ಸಂಬಂಧಗಳ ಕುರಿತು ನಿರ್ಧಾರ ಮಾಡಲು ವ್ಯಕ್ತಿಗಳಿಗೆ ಸಹಾಯ ಮಾಡುವ ಉದ್ದೇಶಕ್ಕೆ ಸೀಮಿತಗೊಂಡಿರಬೇಕು. ಈ ಚೌಕಟ್ಟು ವಿವಿಧ ಹಂತಗಳಲ್ಲಿ ವ್ಯಕ್ತಿಗಳ ಮುಕ್ತ ಆಯ್ಕೆಯನ್ನು ಉತ್ತೇಜಿಸಬೇಕು” ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

Also Read
ಸಣ್ಣ ತೊಡರುಗಳು ವೈವಾಹಿಕ ಜೀವನದ ಭಾಗ, ಅವು ಕ್ರೌರ್ಯದ ವ್ಯಾಖ್ಯಾನಕ್ಕೆ ಒಳಪಡುವುದಿಲ್ಲ: ಕಲ್ಕತ್ತಾ ಹೈಕೋರ್ಟ್‌

ಸುಸ್ಥಿರ ಕುಟುಂಬವು ಸಮಾಜದಲ್ಲಿ ಸಂತೋಷ ಉಂಟುಮಾಡುತ್ತದೆ. ಆದ್ದರಿಂದ, ಪಿತೃಪ್ರಧಾನ ರೀತಿಯಲ್ಲಿ ಹಸ್ತಕ್ಷೇಪವನ್ನು ಸರ್ಕಾರವು ಸಮರ್ಥಿಸುತ್ತದೆ. ಆದರೆ, ಈ ಹಸ್ತಕ್ಷೇಪವು ತಮ್ಮ ಸ್ವಂತ ವಿಚಾರಗಳಲ್ಲಿ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳಲು ವ್ಯಕ್ತಿಗಳಿಗೆ ಸಾಮರ್ಥ್ಯವನ್ನು ತುಂಬುವುದಕ್ಕೆ ಮಾತ್ರವೇ ಸೀಮಿತಗೊಂಡಿರಬೇಕು ಎಂದು ನ್ಯಾಯಾಲಯ ಎಚ್ಚರಿಸಿದೆ.

“ಸಂಬಂಧದ ಹಣೆಬರಹ ನಿರ್ಧರಿಸಲು ಕಾನೂನಿನ ಅಡಿಯಲ್ಲಿ ಒದಗಿಸಲಾದ ವೇದಿಕೆಯು ಪಕ್ಷಕಾರರನ್ನು ತಮ್ಮ ಸ್ವಂತ ವ್ಯವಹಾರಗಳನ್ನು ತಾವೇ ನಿಯಂತ್ರಿಸಲು ಅಗತ್ಯವಾದ ಅತ್ಯುತ್ತಮ ಆಯ್ಕೆಯನ್ನು ನಿರ್ಧರಿಸಲು ಸಮರ್ಥವಾಗಿಸಬೇಕೇ ಹೊರತು ಊಹಾತ್ಮಕ ಆಧಾರದಲ್ಲಿ ತಾನೇ ಅವರ ಹಣೆಬರಹವನ್ನು ನಿರ್ಧರಿಸಲು ಮುಂದಾಗಬಾರದು” ಎಂದು ಪೀಠ ಹೇಳಿದೆ. ಇದನ್ನು ಸಾಧಿಸಲು ವಿವಾಹ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದಂತೆ ಜಾತ್ಯತೀತವಾದ ಸಾಮಾನ್ಯ ಕಾನೂನು ಸಂಹಿತೆ ಅಗತ್ಯವಾಗಿದೆ ಎಂದು ನ್ಯಾಯಾಲಯ ಪುನರುಚ್ಚರಿಸಿದೆ.

Related Stories

No stories found.
Kannada Bar & Bench
kannada.barandbench.com