person sitting in a car with mask
person sitting in a car with mask 
ಸುದ್ದಿಗಳು

ಖಾಸಗಿ ವಾಹನದಲ್ಲಿ ಒಬ್ಬ ವ್ಯಕ್ತಿ ಇದ್ದರೂ ಅದು ಸಾರ್ವಜನಿಕ ಸ್ಥಳ; ಒಬ್ಬರಿದ್ದರೂ ಮಾಸ್ಕ್‌ ಕಡ್ಡಾಯ: ದೆಹಲಿ ಹೈಕೋರ್ಟ್‌

Bar & Bench

ಕೋವಿಡ್‌ ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಕಾರಿನಲ್ಲಿ ಪಯಣಿಸುವಾಗ ವಾಹನ ಚಾಲಕರನ್ನು ಹೊರತುಪಡಿಸಿ ಬೇರೆ ಯಾರೂ ಇರದಿದ್ದರೂ ಸಹ ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದೆ ಎಂದು ದೆಹಲಿ ಹೈಕೋರ್ಟ್‌ ಆದೇಶಿಸಿದೆ (ಸೌರಭ್‌ ಶರ್ಮಾ ವರ್ಸಸ್‌ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್‌, ಪೂರ್ವ ಮತ್ತು ಇತರೆ).

ವಾಹನವು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ಇತರರು ಕೋವಿಡ್‌ ಸಂಕಷ್ಟಕ್ಕೆ ತೆರೆದುಕೊಳ್ಳುವ ಸಾಧ್ಯತೆ ಇರುತ್ತದೆ. ಒಂದೊಮ್ಮೆ ವಯಸ್ಸಾದವರು ಅಥವಾ ಅನಾರೋಗ್ಯ ಪೀಡಿತರು ಮನೆಯಲ್ಲಿದ್ದರೆ ಅಲ್ಲೂ ಮಾಸ್ಕ್‌ ಧರಿಸುವುದಕ್ಕೂ ನ್ಯಾಯಾಲಯ ಸಹಮತ ವ್ಯಕ್ತಪಡಿಸುತ್ತದೆ. ಹೀಗಾಗಿ ವಾಹನದಲ್ಲಿ ಒಬ್ಬರೇ ಇದ್ದರೂ ಅದು ಸಾರ್ವಜನಿಕ ಸ್ಥಳವಾಗುತ್ತದೆ… ಮಾಸ್ಕ್‌ ಧರಿಸುವುದು ಕಡ್ಡಾಯವಾಗುತ್ತದೆ” ಎಂದು ಪೀಠ ಹೇಳಿದೆ. “ಕೋವಿಡ್‌ ಸಾಂಕ್ರಾಮಿಕತೆಯ ಸಂದರ್ಭದಲ್ಲಿ ವಾಹನದಲ್ಲಿ ಒಬ್ಬರೇ ಒಬ್ಬರು ಅಥವಾ ಹಲವು ವ್ಯಕ್ತಿಗಳು ಚಲಿಸುತ್ತಿದ್ದರೂ ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದೆ” ಎಂದು ಆದೇಶದಲ್ಲಿ ನ್ಯಾಯಾಲಯ ತಿಳಿಸಿದೆ.

ಮಾಸ್ಕ್‌ ಧರಿಸದೇ ಕಾರಿನಲ್ಲಿ ಒಬ್ಬರೇ ತೆರಳುತ್ತಿರುವಾಗ ವಿಧಿಸಲಾದ ದಂಡವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮನವಿಗಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರಿದ್ದ ಏಕಸದಸ್ಯ ಪೀಠವು ಆದೇಶ ಹೊರಡಿಸಿದೆ. ಮನವಿಗಳು ಪುರಸ್ಕಾರ ಯೋಗ್ಯವಲ್ಲ ಎಂದು ಅವುಗಳನ್ನು ಪೀಠವು ವಜಾಗೊಳಿಸಿತು.

“ಕೊರೊನಾ ವೈರಸ್‌ ನಿಯಂತ್ರಿಸುವ ನಿಟ್ಟಿನಲ್ಲಿ ಮಾಸ್ಕ್‌ ಸುರಕ್ಷಾ ಕವಚವಿದ್ದಂತೆ. ಮಾಸ್ಕ್‌ ಧರಿಸಿದವರಿಗೆ ರಕ್ಷಣೆ ಒದಗಿಸುವ ಜೊತೆಗೆ ಧರಿಸದಿರುವವರಿಗೂ ರಕ್ಷಣೆ ನೀಡುತ್ತದೆ. ಮಾಸ್ಕ್‌ ಧರಿಸುವ ಕ್ರಮದಿಂದಾಗಿ ಲಕ್ಷಾಂತರ ಮಂದಿ ಬದುಕಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.

ಮಾಸ್ಕ್‌ ಧರಿಸುವ ಕ್ರಮವನ್ನು ಪ್ರಶ್ನಿಸದೇ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಪೂರಕವಾದ ಸಲಹೆಗಳನ್ನು ಅರ್ಜಿದಾರ ವಕೀಲರು ನೀಡಬೇಕು. ಇಂಥ ಕ್ಲಿಷ್ಟ ಸಂದರ್ಭದಲ್ಲಿ ಅನುಸರಣೆ ತೋರುವ ಮಹತ್ವದ ಜವಾಬ್ದಾರಿ ಅವರುಗಳ ಮೇಲಿದೆ ಎಂದು ನ್ಯಾ. ಪ್ರತಿಭಾ ಸಿಂಗ್‌ ಹೇಳಿದ್ದಾರೆ.

ಅರ್ಜಿದಾರರಲ್ಲಿ ಒಬ್ಬರಾದ ವಕೀಲ ಸೌರಭ್‌ ಶರ್ಮಾ ಮಾಸ್ಕ್‌ ಧರಿಸದೇ ಒಬ್ಬರೇ ಕಾರು ಚಲಾಯಿಸುತ್ತಿದ್ದ ವೇಳೆ 500 ರೂಪಾಯಿ ದಂಡ ವಿಧಿಸಿದ್ದನ್ನು ಪ್ರಶ್ನಿಸಿ 10 ಲಕ್ಷ ರೂಪಾಯಿ ಪರಿಹಾರ ಕೋರಿದ್ದರು. ಕಾರಿನಲ್ಲಿ ಒಬ್ಬರೇ ಒಬ್ಬರು ಪ್ರಯಾಣಿಸುವುದನ್ನು ಸಾರ್ವಜನಿಕ ಸ್ಥಳ ಎಂದು ಪರಿಗಣಿಸಲಾಗದು. ಅಲ್ಲದೇ ಅದಕ್ಕೆ ದಂಡ ವಿಧಿಸುವುದು ಕಾನೂನುಬಾಹಿರ ಕ್ರಮ ಎಂದು ಅರ್ಜಿದಾರರು ವಾದಿಸಿದ್ದರು.