Chief Justice of India NV Ramana  
ಸುದ್ದಿಗಳು

ಜನರನ್ನು ನ್ಯಾಯಾಲಯದ ಹತ್ತಿರಕ್ಕೆ ತರುವುದು ನನ್ನ ವಾರಾಂತ್ಯದ ಉಪನ್ಯಾಸಗಳ ಉದ್ದೇಶವಾಗಿತ್ತು: ಸಿಜೆಐ ಎನ್‌ ವಿ ರಮಣ

ತುರ್ತು ಪರಿಸ್ಥಿತಿ ವೇಳೆ ಸಂಕಷ್ಟಕ್ಕೀಡಾಗಿ, ಒಂದು ವರ್ಷದ ಶೈಕ್ಷಣಿಕ ವಿದ್ಯಾಭ್ಯಾಸದಿಂದ ವಂಚಿತವಾದ ವಿಚಾರವನ್ನೂ ಬೀಳ್ಕೊಡುಗೆ ಸಮಾರಂಭದಲ್ಲಿ ಸಿಜೆಐ ರಮಣ ಹಂಚಿಕೊಂಡರು.

Bar & Bench

ಸುಪ್ರೀಂ ಕೋರ್ಟ್‌ನಲ್ಲಿ ಸುದೀರ್ಘ ಎಂಟು ವರ್ಷ ಸೇವೆ ಸಲ್ಲಿಸಿ ಶುಕ್ರವಾರ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನಿವೃತ್ತರಾದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ವಕೀಲರ ಪರಿಷತ್‌ (ಎಸ್‌ಸಿಬಿಎ) ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸಿಜೆಐ ರಮಣ ಅವರು ಹಲವು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು.

“ನ್ಯಾಯಾಂಗವು ಸಾಂವಿಧಾನಿಕ ಜವಾಬ್ದಾರಿ ನಿಭಾಯಿಸುತ್ತಿರುವುದರ ಹೊರತಾಗಿಯೂ ಮಾಧ್ಯಮದಲ್ಲಿ ಅದಕ್ಕೆ ಸೂಕ್ತ ಪ್ರತಿಫಲನ ದೊರಕುತ್ತಿಲ್ಲ ಎಂಬುದನ್ನು ನನ್ನ ಅನುಭವವು ನನಗೆ ಖಚಿತಪಡಿಸಿದೆ. ಇದರಿಂದ ಜನರಿಗೆ ನ್ಯಾಯಾಲಯಗಳು ಮತ್ತು ಸಂವಿಧಾನದ ಬಗೆಗಿನ ಜ್ಞಾನ ಲಭ್ಯವಾಗುತ್ತಿಲ್ಲ. ಈ ಭಾವನೆಯನ್ನು ಹೋಗಲಾಡಿಸಿ, ಜನರಲ್ಲಿ ಅರಿವು ಮೂಡಿಸುವ ಮೂಲಕ ನ್ಯಾಯಾಂಗದ ಬಗ್ಗೆ ಜನರಲ್ಲಿ ನಂಬಿಕೆ ಸೃಷ್ಟಿಸುವುದು ತನ್ಮೂಲಕ ನ್ಯಾಯಾಲಯಗಳನ್ನು ಜನರ ಬಳಿಗೆ ಒಯ್ಯುವುದು ನನ್ನ ಸಾಂವಿಧಾನಿಕ ಕರ್ತವ್ಯ ಎಂದು ನಾನು ಭಾವಿಸಿದೆ. ಜನರು ತಮ್ಮದೇ ಆದ ಭಾಷೆಯಲ್ಲಿ ನನ್ನೊಡನೆ ನನ್ನ ಕ್ಷೇತ್ರದ ಬಗ್ಗೆ ಚರ್ಚಿಸುವಲ್ಲಿ ಸಫಲರಾದರು ಎನ್ನುವುದನ್ನು ಜನರೊಂದಿಗಿನ ನನ್ನ ಭೇಟಿಗಳ ವೇಳೆ ನಾನು ತಿಳಿದುಕೊಂಡಿದ್ದೇನೆ. ತಾವು ವ್ಯವಸ್ಥೆಯ ಭಾಗ ಎಂದು ಜನರು ಹೊಂದಿರುವ ಭಾವನೆಯನ್ನು ಪ್ರಚುರಪಡಿಸಲು ನಾನು ಸಕ್ರಿಯವಾಗಿ ಪ್ರಯತ್ನಿಸಿದ್ದೇನೆ," ಎಂದು ಅವರು ಹೇಳಿದರು.

“ರಸ್ತೆ, ವಿದ್ಯುತ್‌ ಸೇರಿದಂತೆ ಮೂಲಸೌಕರ್ಯಗಳಿಲ್ಲದ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಪೊನ್ನಾವರಂನ ಸಣ್ಣ ಗ್ರಾಮದಿಂದ ನನ್ನ ಬದುಕಿನ ಯಾನ ಆರಂಭವಾಯಿತು. ನನಗೆ 12 ವರ್ಷವಾಗಿದ್ದಾಗ ನಾನು ಮೊದಲ ಬಾರಿಗೆ ವಿದ್ಯುತ್‌ಶಕ್ತಿಯನ್ನು ನೋಡಿದೆ. ಇದೇ ಸಂದರ್ಭದಲ್ಲಿ ನಾನು ಇಂಗ್ಲಿಷ್‌ ಅಕ್ಷರಗಳನ್ನು ಕಲಿತೆ. ಕೆಸರಿನಿಂದ ಆವೃತವಾದ ರಸ್ತೆಗಳು, ಹೊಲ-ಗದ್ದೆ, ಹೊಳೆ ದಾಟಿ ನಾವು ಶಾಲೆಗೆ ಹೋಗುತ್ತಿದ್ದೆವು. ಸಾಕಷ್ಟು ಹೋರಾಟದಿಂದ ಜೀವನದಲ್ಲಿ ಮೇಲೆ ಬಂದಿದ್ದೇನೆ. ಇದಕ್ಕಾಗಿ ನನ್ನ ಮೊದಲ ಗುರುಗಳಾದ ನನ್ನ ಪೋಷಕರು ಮತ್ತು ಹಲವು ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ” ಎಂದರು.

“ತುರ್ತು ಪರಿಸ್ಥಿತಿ ಕರಾಳತೆಯಿಂದಾಗಿ ನಾನು ಒಂದು ವರ್ಷದ ಶೈಕ್ಷಣಿಕ ವಿದ್ಯಾಭ್ಯಾಸದಿಂದ ವಂಚಿತನಾದೆ. ಸಮಸ್ಯೆಗಳಿಗೆ ಎದುರಾಗುವುದು ಮತ್ತು ಅವುಗಳನ್ನು ಪರಿಹರಿಸುವುದು ನನಗೆ ಹೊಸದೇನಲ್ಲ. ಈ ಸಂದರ್ಭದಲ್ಲಿ ವಿಭಿನ್ನ ಸೈದ್ಧಾಂತಿಕ ನಿಲುವುಗಳನ್ನು ಹೊಂದಿದ್ದ ಜನರ ಜೊತೆ ಚರ್ಚಿಸಿದ್ದು, ನನ್ನ ಅರಿವನ್ನು ವಿಸ್ತರಿಸಿತು” ಎಂದರು.

“ಕಾನೂನು ವ್ಯವಸ್ಥೆಯ ಭಾರತೀಕರಣ ಎಂದು ನಾನು ಹೇಳುವುದು ನಮ್ಮ ಸಮಾಜದ ನೈಜ ವಾಸ್ತವಗಳಿಗೆ ಹೊಂದಿಕೊಳ್ಳಬೇಕಾದ ಮತ್ತು ನಮ್ಮ ನ್ಯಾಯದಾನ ವ್ಯವಸ್ಥೆಯನ್ನು ಸ್ಥಳೀಯವಾಗಿಸಬೇಕಾದ ಅಗತ್ಯದ ಕುರಿತಾಗಿದೆ” ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.