ಪೈಲಟ್‌ಗಳಿಗೆ ವಾರದ ವಿಶ್ರಾಂತಿ ನೀಡುವ ವಿಚಾರವಾಗಿ ಯಾವುದೇ ವಿಮಾನಯಾನ ಸಂಸ್ಥೆಗೆ ನಿಯಮ ಸಡಿಲಿಕೆ ಮಾಡಿಲ್ಲ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಶುಕ್ರವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ಪೈಲಟ್‌ಗಳಿಗೆ ವಾರದ ವಿಶ್ರಾಂತಿ ನೀಡುವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ವಿಶ್ರಾಂತಿಗೆ ಅನುಮತಿ ನೀಡುವ ಕಡ್ಡಾಯ ನಿಯಮ ಮುಂದುವರೆದಿದೆ ಎಂದು ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರನ್ನೊಳಗೊಂಡ ವಿಭಾಗೀಯ ಪೀಠಕ್ಕೆ ಡಿಜಿಸಿಎ ತಿಳಿಸಿತು.
“ವಾರದ ವಿಶ್ರಾಂತಿ ಕಡ್ಡಾಯವಾಗಿದೆ; ಅದರಲ್ಲಿ ಯಾವುದೇ ತೊಡಕು ಅಥವಾ ಬದಲಾವಣೆ ಸಾಧ್ಯವಿಲ್ಲ. ಯಾವುದೇ ವಿಮಾನಯಾನ ಸಂಸ್ಥೆಗೆ ಸಡಿಲಿಕೆ ನೀಡಿಲ್ಲ. ಡಿಜಿಸಿಎ ಆ ನಿಯಮವನ್ನು ಹಿಂತೆಗೆದುಕೊಂಡಿಲ್ಲ. ವಾರದ ವಿಶ್ರಾಂತಿ ನಿಯಮ ಜಾರಿಯಲ್ಲೇ ಇದೆ ಎಂಬ ಹೇಳಿಕೆ ದಾಖಲಿಸಿಕೊಳ್ಳಬಹುದು,” ಎಂದು ಡಿಜಿಸಿಎ ಪರ ವಕೀಲರಾದ ಅಂಜನಾ ಗೋಸೈನ್ ಹೇಳಿದರು.
ಇದಕ್ಕೆ ಜೊತೆಯಾಗಿ, ರಾತ್ರಿಯ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಮಾತ್ರ ಇಂಡಿಗೋ ಏರ್‌ಲೈನ್ಸ್‌ಗೆ ಸೀಮಿತ ಸಡಿಲಿಕೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಈ ಸಡಿಲಿಕೆಯೂ ಫೆಬ್ರವರಿ 10ರವರೆಗೆ ಮಾತ್ರ ಮಾನ್ಯವಾಗಿರುತ್ತದೆ ಎಂದು ಗೋಸೈನ್ ಸ್ಪಷ್ಟಪಡಿಸಿದರು.
ಪ್ರಸಕ್ತ ಪ್ರಕರಣವು 2025ರಲ್ಲಿ ಜಾರಿಗೆ ತರಲಾದ ಹೊಸ ವೈಮಾನಿಕ ಕರ್ತವ್ಯ ಸಮಯ ಮಿತಿ (ಎಫ್‌ಡಿಟಿಎಲ್) ನಿಯಮಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಡಿಜಿಸಿಎ ನಿರ್ಧಾರವನ್ನು ಪ್ರಶ್ನಿಸಿ ಸಬರಿ ರಾಯ್ ಲೆಂಕಾ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದೆ. ಅರ್ಜಿದಾರರು, ನಿಯಮಗಳನ್ನು ಸ್ಥಗಿತಗೊಳಿಸುವ ಅಧಿಕಾರ ಡಿಜಿಸಿಎಗೆ ಇಲ್ಲ ಎಂದು ವಾದಿಸಿದ್ದರು.
ಪೈಲಟ್‌ಗಳ ಕರ್ತವ್ಯ ಅವಧಿಯನ್ನು ಕಡಿಮೆ ಮಾಡುವುದು, ವಿಶ್ರಾಂತಿ ಸಮಯವನ್ನು ಹೆಚ್ಚಿಸುವುದು ಮತ್ತು ರಾತ್ರಿಯ ಲ್ಯಾಂಡಿಂಗ್‌ಗಳನ್ನು ಕಡಿಮೆ ಮಾಡುವ ಮೂಲಕ ವಿಮಾನ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಡಿಜಿಸಿಎ 2025ರಲ್ಲಿ ಪರಿಷ್ಕೃತ ಎಫ್‌ಡಿಟಿಎಲ್ ನಿಯಮಗಳನ್ನು ಜಾರಿಗೆ ತಂದಿತ್ತು. ಆದರೆ ಈ ಕಟ್ಟುನಿಟ್ಟಿನ ನಿಯಮಗಳ ಜಾರಿಯಿಂದ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋಗೆ ಕಾರ್ಯಾಚರಣೆಯಲ್ಲಿ ತೊಂದರೆ ಉಂಟಾಗಿ, 2025ರ ಡಿಸೆಂಬರ್‌ನಲ್ಲಿ ವ್ಯಾಪಕ ಪ್ರಮಾಣದಲ್ಲಿ ವಿಮಾನ ರದ್ದುಗೊಂಡಿದ್ದವು ಇಲ್ಲವೇ ವಿಳಂಬಿತ ಹಾರಾಟ ನಡೆಸಿದ್ದವು.
ಪ್ರಯಾಣಿಕರಿಗೆ ಆಗುವ ಅನಾನುಕೂಲ ಕಡಿಮೆ ಮಾಡುವ ಸಲುವಾಗಿ, ಡಿಜಿಸಿಎ ಹೊಸ ನಿಯಮಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, 2026ರ ಫೆಬ್ರವರಿ ಆರಂಭದವರೆಗೆ ವಿಮಾನಯಾನ ಸಂಸ್ಥೆಗಳಿಗೆ ವಿನಾಯಿತಿ ನೀಡಿತ್ತು.
ಅರ್ಜಿದಾರರು, “ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ” ಎಂಬ ಪದಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲದಿರುವುದರಿಂದ, ವಿಮಾನಯಾನ ಸಂಸ್ಥೆಗಳು ತಮಗೆ ತಾವು ಕಡಿಮೆ ವೆಚ್ಚದವೆಂದು ಕರೆಯುವುದನ್ನು ತಡೆಯಬೇಕು ಎಂದು ನ್ಯಾಯಾಲಯವನ್ನು ಕೋರಿದ್ದಾರೆ. ಜೊತೆಗೆ, ವಿಮಾನ ರದ್ದತಿಗಳ ವೇಳೆ ಉಚಿತ ಊಟ, ಉಪಾಹಾರ ಮತ್ತು ಹೋಟೆಲ್ ವಸತಿ ಒದಗಿಸದ ಹಿನ್ನೆಲೆಯಲ್ಲಿ ಇಂಡಿಗೋ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ವಾದ ಆಲಿಸಿದ ನ್ಯಾಯಾಲಯ ಈ ಸಂಬಂಧ ಕೇಂದ್ರ ಸರ್ಕಾರ, ಡಿಜಿಸಿಎ ಮತ್ತು ಇಂಡಿಗೋಗೆ ನೋಟಿಸ್ ಜಾರಿ ಮಾಡಿದ್ದು, ನಾಲ್ಕು ವಾರಗಳ ನಂತರ ಮತ್ತೆ ಪ್ರಕರಣ ಆಲಿಸಲಿದೆ.