

ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆದ ಇಂಡಿಗೋ ವಿಮಾನಗಳ ಸಾಮೂಹಿಕ ರದ್ದತಿಯಿಂದ ಲಕ್ಷಾಂತರ ಪ್ರಯಾಣಿಕರು ಸಂಕಷ್ಟಕ್ಕೆ ಒಳಗಾದ ಹಿನ್ನೆಲೆಯಲ್ಲಿ, ಇಂಡಿಗೋ ವಿಮಾನ ಯಾನ ಸಂಸ್ಥೆಗೆ ₹22 ಕೋಟಿ ದಂಡ ವಿಧಿಸಿದ್ದು ಸಂಸ್ಥೆಯ ಹಿರಿಯ ಉಪಾಧ್ಯಕ್ಷರನ್ನು ಹುದ್ದೆಯಿಂದ ವಜಾಗೊಳಿಸಲು ಸೂಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ಗುರುವಾರ ತಿಳಿಸಿದೆ.
ನಿರ್ದೇಶನಗಳ ಪಾಲನೆ ಹಾಗೂ ದೀರ್ಘಕಾಲೀನ ವ್ಯವಸ್ಥಾತ್ಮಕ ತಿದ್ದುಪಡಿಗಾಗಿ ಡಿಜಿಸಿಎ ಪರವಾಗಿ ₹50 ಕೋಟಿ ಮೌಲ್ಯದ ಬ್ಯಾಂಕ್ ಗ್ಯಾರಂಟಿ ನೀಡುವಂತೆ ಇಂಡಿಗೋಗೆ ಆದೇಶಿಸಲಾಗಿದೆ. ಅಲ್ಲದೆ ವಿಮಾನಯಾನ ಸಂಸ್ಥೆಯ ಅಧಿಕಾರಿಗಳಿಗೆ ಕೂಡ ಎಚ್ಚರಿಕೆ ನೀಡಲಾಗಿದೆ ಎಂಬುದಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ ಶರ್ಮಾ ನ್ಯಾಯಾಲಯಕ್ಕೆ ತಿಳಿಸಿದರು.
ಕಳೆದ ವರ್ಷದ ಡಿಸೆಂಬರ್ 3ರಿಂದ 5ರವರೆಗೆ ಮೂರು ದಿನಗಳ ಅವಧಿಯಲ್ಲಿ ಇಂಡಿಗೋ ವಿಮಾನಗಳ ಸಾಮೂಹಿಕ ರದ್ದತಿಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸುವಂತೆ ಕೋರಿ ವಕೀಲರಾದ ಅಖಿಲ್ ರಾಣಾ ಮತ್ತು ಉತ್ಕರ್ಷ್ ಶರ್ಮಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರನ್ನೊಳಗೊಂಡ ವಿಭಾಗೀಯ ಪೀಠಕ್ಕೆ ಎಎಸ್‌ಜಿ ಈ ಮಾಹಿತಿ ನೀಡಿದರು.
ವಿಮಾನ ಸಂಚಾರ ವ್ಯತ್ಯಯಗಳ ಕುರಿತ ತನಿಖೆಯ ವಿವರಗಳನ್ನು ಒಳಗೊಂಡ ಮುಚ್ಚಿದ ಲಕೋಟೆಯ ವರದಿಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಇದೇ ವೇಳೆ ವಿಮಾನ ರದ್ದತಿಯಿಂದ ತೊಂದರೆಗೊಳಗಾದ ಪ್ರಯಾಣಿಕರಿಗೆ ಹಣ ಮರುಪಾವತಿಸಲಾಗಿದ್ದು ಪರಿಹಾರ ಧನ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆ.
ಸಂಕ್ಷಿಪ್ತವಾಗಿ ಪ್ರಕರಣದ ವಿಚಾರಣೆ ನಡೆಸಿದ ಬಳಿಕ, ಈ ಸಂಬಂಧ ಎರಡು ವಾರಗಳೊಳಗೆ ಪ್ರಮಾಣಪತ್ರ (ಅಫಿಡವಿಟ್) ಸಲ್ಲಿಸುವಂತೆ ಪೀಠವು ಸರ್ಕಾರಕ್ಕೆ ನಿರ್ದೇಶನ ನೀಡಿತು. ಮುಂದಿನ ವಿಚಾರಣೆ ಫೆಬ್ರವರಿ 25 ರಂದು ನಡೆಯಲಿದೆ.
ಯಾವುದೇ ಪೂರ್ವ ಸೂಚನೆ ನೀಡದೆ ಇಂಡಿಗೋ 2,507 ವಿಮಾನಗಳನ್ನು ರದ್ದುಗೊಳಿಸಿತ್ತು. ಜೊತೆಗೆ 1,852 ವಿಮಾನಗಳನ್ನು ವಿಳಂಬಗೊಳಿಸಿತ್ತು. ಇದರಿಂದ ವಿಮಾನ ನಿಲ್ದಾಣಗಳಲ್ಲಿ ಭಾರೀ ಗೊಂದಲ ಉಂಟಾಗಿ, ಲಕ್ಷಾಂತರ ಪ್ರಯಾಣಿಕರು ತೊಂದರೆ ಅನುಭವಿಸಿದ್ದರು.
ಪೈಲಟ್‌ಗಳ ಕೊರತೆ ಹಾಗೂ ಹೊಸ ವೈಮಾನಿಕ ಕರ್ತವ್ಯ ಸಮಯ ಮಿತಿ - ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೇಶನ್ (ಎಫ್‌ಡಿಟಿಎಲ್) ನಿಯಮಗಳನ್ನು ಜಾರಿಗೆ ತರುವಲ್ಲಿ ವಿಫಲವಾದ ಕಾರಣ ಇಂಡಿಗೋ ಗಂಭೀರವಾಗಿ ತೊಂದರೆಗೆ ಸಿಲುಕಿತ್ತು. ಬಳಿಕ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಇಂಡಿಗೋಗೆ ಪರಿಸ್ಥಿತಿ ನಿಭಾಯಿಸಲು ವಿನಾಯಿತಿ ನೀಡಿದ್ದು, ನಿಗದಿತ ವಿಮಾನಗಳ ಸಂಖ್ಯೆಯನ್ನು ಕನಿಷ್ಠ ಶೇಕಡಾ 5ರಷ್ಟು ಕಡಿತಗೊಳಿಸುವಂತೆ ಆದೇಶಿಸಿತ್ತು.